Advertisement

Bagalkot: ನಿರಂತರ ಪ್ರಯತ್ನದಿಂದ ಗುರಿ ಸಾಧನೆ: ಜಿಲ್ಲಾಧಿಕಾರಿ

06:04 PM Aug 17, 2023 | Team Udayavani |

ಬಾಗಲಕೋಟೆ: ವಿದ್ಯಾರ್ಥಿ ಜೀವನ ಎಂಬುದು ಸುವರ್ಣ ಅವಕಾಶವಾಗಿದ್ದು, ನಿರಂತರ ಪ್ರಯತ್ನದಿಂದ ಗುರಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಸಲಹೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಳೆದ 2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಜತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದು ಆಧುನಿಕ ಯುಗ ವೇಗವಾಗಿ ಸಾಗುತ್ತಿದ್ದು, ಅದರೊಂದಿಗೆ ಪೈಪೋಟಿ ಕೂಡ ಹೆಚ್ಚಾಗಿದೆ. ಕೇವಲ ಸರ್ಕಾರಿ ನೌಕರಿಗೆ ಆಶಿಸದೇ ಸಿಕ್ಕ ಅವಕಾಶ ಸದುಪಯೋಗ ಪಡೆದುಕೊಂಡು ಶ್ರಮಜೀವಿ ಆದಾಗ ಮಾತ್ರ ಪರಿಪೂರ್ಣತೆ ಹೊಂದಲು ಸಾಧ್ಯ ಎಂದ ಅವರು, ಸೋಲು-ಗೆಲುವು ಸಮನಾಗಿ ಸ್ವೀಕರಿಸಿ, ಸೋತಾಗ ಕುಗ್ಗದೇ, ಗೆದ್ದಾಗ ಹಿಗ್ಗದೇ ಸಮಚಿತ್ತದಿಂದ ನಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಇಂದಿನಿಂದಲೇ ನಿರ್ಲಕ್ಷé, ಆಲಸ್ಯ, ಹೆದರಿಕೆ ಬದಿಗಿಟ್ಟು ನಿಷ್ಠೆಯಿಂದ ಜ್ಞಾನಾರ್ಜನೆ ಮಾಡಲು ಗಮನ ಹರಿಸಲು ತಿಳಿಸಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತ, ಬಾಲ್ಯದಲ್ಲಿ ಅನೇಕ ಕಷ್ಟದ ದಿನಗಳಾಗಿದ್ದವು. ಇಂದಿನಷ್ಟು ಸೌಲಭ್ಯಗಳು ಅಂದು ಇರಲಿಲ್ಲ. ಕಷ್ಟದ ದಿನಗಳಲ್ಲಿಯೇ ಇಷ್ಟಪಟ್ಟು ಓದಿದ್ದರಿಂದ ಸಾಧನೆ ಮಾಡಲು ಸಾಧ್ಯವಾಯಿತು. ನನ್ನ ಸಾಧನೆಗೆ ಪ್ರಾರಂಭದಲ್ಲಿ ಪೊಲೀಸ್‌ ಅಧಿಕಾರಿಯಾಗಿ ಅವಕಾಶ ದೊರೆತಿದ್ದರೂ ಗುರಿ ಸಾಧನೆಯ ಹಸಿವು ಇಂಗಿರಲಿಲ್ಲ.

ಪ್ರಯತ್ನ ಮುಂದುವರಿಸಿದೆ. ಅನೇಕ ಸ್ಪರ್ಧಾತ್ಮಕ ಪರೀಕ್ಷೆಗೆ ಪಯತ್ನಿಸಿದ್ದರ ಫಲವಾಗಿ ಕೆಎಎಸ್‌ ಮತ್ತು ಐಎಎಸ್‌ನಂತಹ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ ಎಂದರು. ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಮಾತನಾಡಿ, ಸಾಧನೆಗೆ ಗುರಿ ಇಟ್ಟುಕೊಂಡು ದೃಢ ನಿರ್ಧಾರ ತೆಗೆದುಕೊಳ್ಳಬೇಕು. ಗುರಿ ತಲುಪುವಲ್ಲಿ ನಿರಂತರ ಪ್ರಯತ್ನ ಅಗತ್ಯ. ಗುರಿ ತಲುಪುವಲ್ಲಿ ಎಡವಿದರೂ ಪ್ರಯತ್ನ ಮಾತ್ರ ಮುಂದುವರಿಯಬೇಕು. ಆಗ ಮಾತ್ರ ಗುರಿ ತಲುಪಲು ಸಾಧ್ಯ. ಕಾಲೇಜು ಹಂತದಲ್ಲಿ ಬರುವ ಹವ್ಯಾಸಗಳಿಂದ ನಿಮ್ಮ ಗಮನ ಬೇರೆಡೆ ಹೋಗದಂತೆ ನೋಡಿಕೊಳ್ಳಬೇಕು ಎಂದರು.

Advertisement

ನನಗೂ ಕೂಡ ವಿದ್ಯಾರ್ಥಿ ಜೀವನದಲ್ಲಿ ಕಷ್ಟದ ದಿನಗಳು ಬಂದಿದ್ದವು. ಪ್ರಥಮವಾಗಿ ಅಂಚೆ ಇಲಾಖೆಯಲ್ಲಿ ನೌಕರಿ ದೊರೆತಿದ್ದರೂ ಯುಪಿಎಸ್‌ ಸಿಯಂತಹ ಪರೀಕ್ಷೆ ಬರೆಯಲು ಮುಂದಾಗುತ್ತಿದ್ದೆ. ಪರೀಕ್ಷೆಯಲ್ಲಿ ವಿಫಲವಾದರೂ ಪ್ರಯತ್ನ ಸಹ
ನಿಲ್ಲಿಸಿರಲಿಲ್ಲ. ಪರೀಕ್ಷೆ ಬರೆಯಲು ರಜೆ ಸಿಗದಿದ್ದರೂ ಕೆಲಸಕ್ಕೆ ಗೈರಾಗಿ ಪರೀಕ್ಷೆ ಬರೆಯಲು ಹೋಗುತ್ತಿದ್ದೆ. ಇದರಿಂದ ಗುರಿ ತಲುಪಲು ಸಾಧ್ಯವಾಯಿತು ಎಂದು ತಿಳಿಸಿದರು. ತಹಶೀಲ್ದಾರ್‌ ಅಮರೇಶ ಪಮ್ಮಾರ ಮಾತನಾಡಿದರು. ಸಂವಾದದಲ್ಲಿ ಡಿವೈಪಿಸಿಯ ಉಪ ಸಮನ್ವಯಾಧಿಕಾರಿ ಸಿ.ಆರ್‌. ಓಣಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಶಿಕ್ಷಣ ಪಡೆದಲ್ಲಿ ಕಲಿತ ವಿದ್ಯೆಗಿಂತ ಸಾಮಾನ್ಯ ಜ್ಞಾನದತ್ತ ಹೆಚ್ಚಿನ ಗಮನ ಹರಿಸಿದಾಗ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಬಹುದು. ಅಂತಹ ಸಂದರ್ಭದಲ್ಲಿ ಬರುವ ಅಡೆತಡೆ, ಸಮಸ್ಯೆ ಎದುರಿಸುವ ಧೈರ್ಯವೂ ಬರುತ್ತದೆ.
ಕೆ.ಎಂ. ಜಾನಕಿ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next