Advertisement

ಬಾಗಲಕೋಟೆ; ಬರಿದಾಗುತ್ತಿದೆ ಘಟಪ್ರಭಾ- ಜನತೆ ಆತಂಕ

04:32 PM Feb 15, 2024 | Team Udayavani |

ಉದಯವಾಣಿ ಸಮಾಚಾರ
ಕಲಾದಗಿ: ಈ ಭಾಗದ ರೈತರ ಜೀವಜಲ ಮೂಲ ಘಟಪ್ರಭಾ ನದಿ ಬತ್ತಿ ಬರಿದಾಗಿದ್ದು, ನದಿ ಒಡಲು ಖಾಲಿ ಖಾಲಿಯಾಗಿ ಜನ ಜಾನುವಾರುಗಳಿಗೆ ಮುಂದಿನ ಬಿರು ಬೇಸಿಗೆ ಹೇಗೆ ಕಳೆಯುವುದು ಎನ್ನುವ ಆತಂಕ ಶುರುವಾಗಿದೆ. ಮೂರು ತಾಲೂಕಿನ ನದಿ ಪಾತ್ರದ ಹಲವಾರು ಗ್ರಾಮದ ಜನ ಜಾನುವಾರುಗಳಿಗೆ ಘಟಪ್ರಭಾ ನದಿಯೇ ಜೀವಾಳ. ಬೀಳಗಿ ತಾಲೂಕಿನ ಕಾತರಕಿ, ಕೊಪ್ಪ ನಿಂಗಾಪೂರು, ಕುಂದರಗಿ, ಅರಕೇರಿ ಸೇರಿದಂತೆ ಇನ್ನೂ ಹಲವು ಗ್ರಾಮಗಳು, ಮುಧೋಳ ತಾಲೂಕಿನ ಜುನ್ನೂರು, ಬಂಟನೂರು, ಚಿಕ್ಕಾಲಗುಂಡಿ, ಮಾಚಕನೂರು, ಚಿಕ್ಕೂರು ಸೇರಿದಂತೆ ಹಲವಾರು ಗ್ರಾಮ, ಬಾಗಲಕೋಟೆ ತಾಲೂಕಿನ ಉದಗಟ್ಟಿ, ಶಾರದಾಳ ಅಂಕಲಗಿ, ಕಲಾದಗಿ, ಸೇರಿದಂತೆ ಹಲವಾರು ಗ್ರಾಮಗಳಿಗೆ ಇದೇ ಮೂಲಾಧಾರ.

Advertisement

ವಾರದಿಂದ ಈ ಭಾಗದಲ್ಲಿನ ಕುರಿಗಾರರು ಮಧ್ಯಾಹ್ನದ ವೇಳೆ ಕುರಿ-ಮೇಕೆಗಳಿಗೆ ನೀರು ಕುಡಿಸಲು ನದಿ ಒಡಲಿನೊಳಗೆ ಹೊಕ್ಕು ನೀರಿಗಾಗಿ ಹುಡುಕಾಟ ನಡೆಸಿ ಅಲ್ಲೆಲ್ಲೋ ತೆಗ್ಗಿನಲ್ಲಿ ನಿಂತ ತುಸು ನೀರನ್ನು ಕುಡಿಸುತ್ತಿದ್ದಾರೆ. ಆ ತಗ್ಗುಗಳಲ್ಲಿನ ನೀರು ಬತ್ತಿ ಬರಿದಾಗುತ್ತಿವೆ. ನದಿ ಒಡಲು ಸಂಪೂರ್ಣ ಖಾಲಿ ಖಾಲಿಯಾಗಿ ಬಿರುಕು ಬಿಟ್ಟು ನೀರಿಗಾಗಿ ಬಾಯಿ ತೆರೆದುಕೊಂಡಂತೆ ಭಾಸವಾಗುತ್ತಿದೆ.

ಅಂತರ್ಜಲ ಕುಸಿತ: ನದಿ ಪಾತ್ರದಲ್ಲಿನ ರೈತರ ಕೊಳವೆ ಬಾವಿಗಳ ಅಂತರ್ಜಲ ಮಟ್ಟವೂ ಕುಸಿಯುತ್ತಿದ್ದು ಬೆಳೆಗಳು ನೀರಿಲ್ಲದೆ ಒಣಗುವ ಹಂತಕ್ಕೆ ಬಂದಿದೆ. ಬೆಳೆ ನಷ್ಟ ಹಾನಿ ಆತಂಕ ಎದುರಿಸುತ್ತಿದ್ದಾರೆ. ಒಟ್ಟಿನಲ್ಲಿ ಬಿರು ಬೇಸಿಗೆ ಆರಂಭವಾಗಿ ನೀರಿನ ಆತಂಕ ಜನ ಜಾನುವಾರು ರೈತರನ್ನು ಕಾಡುತ್ತಿದ್ದು ಜಿಲ್ಲಾಡಳಿತ, ಜಿಲ್ಲಾ ಉಸುವಾರಿ ಮಂತ್ರಿಗಳು, ಈ ಭಾಗದ ಶಾಸಕರು ಘಟಪ್ರಭಾ ನದಿಗೆ ನೀರು ಬಿಡಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ನದಿಯಲ್ಲಿ ನೀರು ಬತ್ತಿ ಬರಿದಾಗಿದೆ. ನದಿ ಪಾತ್ರ, ಅಕ್ಕಪಕ್ಕದಲ್ಲಿನ ಹೊಲ ಗದ್ದೆಗಳ ಕೊಳವೆ ಬಾವಿಗಳ ಬತ್ತುತ್ತಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಿತ್ತದ ಬೆಳೆಗಳು ಒಣಗುವ ಹಂತ ತಲುಪಿವೆ. ಜಿಲ್ಲಾಡಳಿತ ಕೂಡಲೇ ನೀರು
ಬಿಡಿಸಬೇಕು.
ಅರುಣ ಅರಕೇರಿ, ಆನಂದ ಅರಕೇರಿ, ಶಾರದಾಳ ರೈತರು

ಘಟಪ್ರಭಾ ನದಿ ಒಡಲು ಬತ್ತಿ ಬರಿದಾಗುತ್ತಿವೆ. ಕೆಲ ಕಡೆ ತಗ್ಗಿನಲ್ಲಿ ನಿಂತ ನೀರನ್ನು ಕುರಿ ಮೇಕೆಗಳಿಗೆ ಕುಡಿಸುತ್ತಿದ್ದೇವೆ. ಮುಂದಿನ ಬಿರು ಬೇಸಿಗೆಯಲ್ಲಿ ಕುರಿಗಳಿಗೆ ನೀರು ಕುಡಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ.
ಗಂಗಪ್ಪ ದೊಡ್ಡಮನಿ, ಅಂಕಲಗಿ, ಕುರಿಗಾಹಿ

Advertisement

ಘಟಪ್ರಭ ನದಿ ಒಡಲು ಬತ್ತಿ ಬರಿದಾಗುತ್ತಿರುವ ಬಗ್ಗೆ ಮಾಹಿತಿ ಇದೆ. ಜನಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಅಗತ್ಯ ಕ್ರಮ ವಹಿಸಲಾಗುತ್ತದೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸೇರಿದಂತೆ ನಾನೂ ಸಹಿತ ಸಂಬಂಧಿಸಿದ ಅಧಿಕಾರಿಗಳ ಜತೆ ಮಾತನಾಡಿ ನದಿಗೆ ನೀರು ಬಿಡಿಸುತ್ತಿದ್ದೇವೆ. ಹಿಡಕಲ್‌ ಜಲಾಶಯದಿಂದ ಫೆ.18ರಂದು ಘಟಪ್ರಭಾ ನದಿಗೆ ನೀರು ಬಿಡಿಸಲಾಗುತ್ತದೆ.
ಜೆ.ಟಿ.ಪಾಟೀಲ, ಶಾಸಕರು, ಬೀಳಗಿ

ಚಂದ್ರಶೇಖರ ಹಡಪದ

Advertisement

Udayavani is now on Telegram. Click here to join our channel and stay updated with the latest news.

Next