Advertisement

ಬಾಗಲಕೋಟೆ ಎಸ್ಪಿ ನಿವಾಸದ ಎದುರೇ ಪೇದೆ ಆತ್ಮಹತ್ಯೆ

06:10 AM Dec 02, 2018 | Team Udayavani |

ಬಾಗಲಕೋಟೆ: ನವನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ನಿವಾಸದ ಎದುರೇ ಪೊಲೀಸ್‌ ಪೇದೆಯೊಬ್ಬ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ.

Advertisement

ಆತ್ಮಹತ್ಯೆ ಮಾಡಿಕೊಂಡ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್‌ ಪೇದೆಯನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಟ್ಟಲಕೋಡ ಗ್ರಾಮದ ಮಂಜುನಾಥ ಹರಿಜನ (28) ಎಂದು ಗುರುತಿಸಲಾಗಿದೆ.

2012ನೇ ಬ್ಯಾಚ್‌ನ ಡಿಎಆರ್‌ ಪೊಲೀಸ್‌ ಪೇದೆ ಆಗಿರುವ ಮಂಜುನಾಥ, ಮೊದಲು ದಾವಣಗೆರೆಯಲ್ಲಿ ಸೇವೆ ಸಲ್ಲಿಸಿ, ಒಂದೂವರೆ ವರ್ಷದ ಹಿಂದೆ ಬಾಗಲಕೋಟೆಗೆ ವರ್ಗವಾಗಿ ಬಂದಿದ್ದರು. ಎಸ್‌ಪಿ ಸಿ.ಬಿ.ರಿಷ್ಯಂತ ಅವರ ಸರ್ಕಾರಿ ನಿವಾಸಕ್ಕೆ ಗಾರ್ಡ್‌ ಆಗಿ ಸೇವೆ ಸಲ್ಲಿಸುತ್ತಿದ್ದರು. ಶುಕ್ರವಾರ ರಾತ್ರಿ ಎಂದಿನಂತೆ ಸೇವೆಗೆ ಬಂದಿದ್ದು, ಶನಿವಾರ ಬೆಳಗ್ಗೆ ಸುಮಾರು 3 ಗಂಟೆಯ ಹೊತ್ತಿಗೆ ತನಗೆ ಇಲಾಖೆ ನೀಡಿದ್ದ 303 ರೈಫಲ್‌ನಿಂದಲೇ ಕುತ್ತಿಗೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊದಲ ಒಂದು ಗುಂಡು ಗಾಳಿಯಲ್ಲಿ ಹಾರಿಸಿದ್ದು, 2 ಮತ್ತು 3ನೇ ಗುಂಡು ಮಿಸ್‌ ಆಗಿವೆ ಎನ್ನಲಾಗಿದೆ. 4ನೇ ಗುಂಡು ಕುತ್ತಿಗೆಗೆ ಹಾರಿಸಿಕೊಂಡು ಹೋಗಿದೆ. ಗುಂಡು ಸಿಡಿದ ರಭಸಕ್ಕೆ ಕುತ್ತಿಗೆಯಿಂದ ತಲೆಯ ಹಿಂಭಾಗದವರೆಗೆ ಸೀಳಿಕೊಂಡು ಹೊರ ನುಗ್ಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೆಂಗಳೂರಿನ ಬೆಲಾಸ್ಟಿಕ್‌ ನುರಿತ ತಜ್ಞ ಕಿರಣ ನೇತೃತ್ವದ ತಂಡ, ಬೆಳಗಾವಿಯ ವಿಧಿ ವಿಜ್ಞಾನಿಗಳ ವಿಶೇಷ ತಂಡ ಸ್ಥಳಕ್ಕೆ ಆಗಮಿಸಿದ್ದು, ಪ್ರಕರಣ ಕುರಿತು ತನಿಖೆ ಮುಂದುವರಿದಿದೆ.

ಸಾವಿಗೆ ಚಿಕ್ಕಪ್ಪಂದಿರೇ ಕಾರಣ:
ಈ ಮಧ್ಯೆ, ಶವ ಪರೀಕ್ಷೆ ವೇಳೆ ಪೇದೆಯ ಜೇಬಿನಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಬರೆದ ಡೆತ್‌ನೋಟ್‌ ಪತ್ತೆಯಾಗಿದ್ದು, ಚಿಕ್ಕಪ್ಪಂದಿರು ಜೀವ ಬೆದರಿಕೆ ಹಾಕಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಅದರಲ್ಲಿ ತಿಳಿಸಿದ್ದಾರೆ. ಪೊಲೀಸ್‌ ಇಲಾಖೆ, ಸಿಬ್ಬಂದಿ ವರ್ಗ ಎಲ್ಲ ರೀತಿಯಿಂದಲೂ ನನಗೆ ಸಹಕಾರ ನೀಡಿದ್ದಾರೆ. ನನ್ನ ಕುಟುಂಬ, ನನ್ನನ್ನು ಚೆನ್ನಾಗಿ ಬೆಳೆಸಿದ್ದರು. ಸಾಕಿ ಸಲುಹಿದ ತಾಯಿ ಮತ್ತು ಅಜ್ಜಿಗೆ ಕ್ಷಮೆ ಕೋರುತ್ತೇನೆ. ಮುಖ್ಯವಾಗಿ ನನ್ನನ್ನು ಶನಿಯಾಗಿ ಕಾಡಿದ್ದು ಚಿಕ್ಕಪ್ಪಂದಿರಾದ ಹನಮಪ್ಪ ಮತ್ತು ಮರಿಯಪ್ಪ ಮಾದರ. ನನ್ನ ತಂದೆಯ ಆಸ್ತಿಯನ್ನು ತಾವೇ ವ್ಯಾಮೋಹಿಸುವ ಉದ್ದೇಶದಿಂದ ನನಗೆ ಜೀವ ಬೆದರಿಕೆ ಹಾಕಿದ್ದರು. ಆದ್ದರಿಂದ ನಾನು ಆತ್ಮಹತ್ಯೆಗೆ ಶರಣಾಗಿದ್ದೇನೆ. ನನಗೆ ಶನಿಯಾಗಿ ಕಾಡಿದ್ದು ಇವರೇ. ನನ್ನ ಸಾವಿಗೆ ಇವರಿಬ್ಬರೇ ಕಾರಣ ಎಂದು ಬರೆದಿದ್ದಾರೆ.

Advertisement

ಪ್ರಕರಣದ ತನಿಖೆಗೆ ಅತ್ಯುತ್ತಮ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಲಾಗಿದೆ. ಬೆಳಗಾವಿಯ ಫಾರೆನ್ಸಿಕ್‌ ತಂತ್ರಜ್ಞರ ತಂಡ, ಶ್ವಾನ ದಳ, ಬಾಂಬ್‌ ಪತ್ತೆ ತಂಡ ಕೂಡ ಬಂದಿವೆ.
– ಸಿ.ಬಿ. ರಿಷ್ಯಂತ, ಎಸ್‌ಪಿ, ಬಾಗಲಕೋಟೆ.

Advertisement

Udayavani is now on Telegram. Click here to join our channel and stay updated with the latest news.

Next