Advertisement

Bagalkot: ಅಂಗನವಾಡಿ ಮಕ್ಕಳ ಅನ್ನಕ್ಕೂ ಪ್ರಭಾವಿಗಳ ಕನ್ನ!

06:25 PM Sep 01, 2023 | Team Udayavani |

ಬಾಗಲಕೋಟೆ: ಬಾಲ್ಯಾವಸ್ಥೆಯಲ್ಲೇ ಮಕ್ಕಳಿಗೆ ಪೌಷ್ಟಿಕ ಆಹಾರ ಮತ್ತು ಶಿಕ್ಷಣದ ಮೊದಲಕ್ಷರ ಕಲಿಸುವ ಉದ್ದೇಶದಿಂದ ರಾಜ್ಯಾದ್ಯಂತ ಕಾರ್ಯ ನಿರ್ವಹಿಸುವ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುವ ಆಹಾರಧಾನ್ಯದ ಮೇಲೂ ಪ್ರಭಾವಿಗಳು ನಿರಂತರ ಕನ್ನಾ ಹಾಕುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

Advertisement

ಹೌದು. ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುವ ಆಹಾರ ಧಾನ್ಯಗಳಲ್ಲೂ ಮಕ್ಕಳಿಗೆ ಮೋಸ ಮಾಡಿ, ಪ್ರಭಾವಿಗಳು ದುಡ್ಡು
ಹೊಡೆಯುತ್ತಿರುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇದು ತಳಮಟ್ಟದಿಂದ ಹಿಡಿದು ಇಲಾಖೆಯ ಮೇಲ್ಪಟ್ಟ ಹಿರಿಯ ಅಧಿಕಾರಿಗಳವರೆಗೆ ಗೊತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎನ್ನಲಾಗಿದೆ.

ಮಕ್ಕಳ ಆಹಾರಕ್ಕೂ ಕನ್ನಾ: ಕಲಬುರಗಿಯಲ್ಲಿ ಆರ್‌ ಡಿಪಿಆರ್‌ ಸಚಿವ ಪ್ರಿಯಾಂಕ್‌ ಖರ್ಗೆ ಮತ್ತು ಬಿಜೆಪಿಯವರ ಆರೋಪ-ಪ್ರತ್ಯಾರೋಪಗಳು ಗಂಭೀರಗೊಳ್ಳಲು ಇದೇ ವಿಷಯ ಮೂಲ ಕಾರಣವೂ ಎನ್ನಲಾಗಿದೆ. ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುವ ಆಹಾರಧಾನ್ಯದಲ್ಲಿ ಗೋಲ್‌ ಮಾಲ್‌ ನಡೆಯುತ್ತಿರುವ ವಿಷಯ ಅಲ್ಲಿ ಇದೀಗ ರಾಜಕೀಯ ತಿರುವು ಪಡೆದಿದೆ. ಈ ಗೋಲ್‌ಮಾಲ್‌ ಕೇವಲ ಕಲಬುರಗಿ ಅಷ್ಟೇ ಅಲ್ಲ ಇಡೀ ರಾಜ್ಯಾದ್ಯಂತ ನಡೆಯುತ್ತಿದೆ. ಇದರಲ್ಲಿ ಹಲವಾರು ಹಿರಿಯ-ಕಿರಿಯ ಅಧಿಕಾರಿಗಳೂ ಶಾಮೀಲಾಗಿದ್ದಾರೆಂಬ ಆರೋಪವಿದೆ.

ಏನಿದು ಗೋಲಮಾಲ್‌: ಜಿಲ್ಲೆಯಲ್ಲಿ 2,221 ಅಂಗನವಾಡಿ ಕೇಂದ್ರಗಳಿದ್ದು, ಹುಟ್ಟಿದ ಮಗುವಿನಿಂದ ಹಿಡಿದು 6 ವರ್ಷದವರೆಗೂ ಅಂಗನವಾಡಿಯಲ್ಲಿ ದಾಖಲಾಗಿರುತ್ತವೆ. ಹುಟ್ಟಿದ ಮಗುವಿಗೆ ಪೌಷ್ಟಿಕ ಆಹಾರ ದೊರೆಯಲಿ ಎಂಬ ಉದ್ದೇಶದಿಂದ ಮೊದಲು ಆರು ತಿಂಗಳು, ಬಾಣಂತಿಗೆ ಆಹಾರ ನೀಡಿದರೆ ಆರು ತಿಂಗಳ ಬಳಿಕ ಮಗುವಿನ ಲೆಕ್ಕದಲ್ಲಿ ಪೌಷ್ಟಿಕ ಆಹಾರ ನೀಡಲಾಗುತ್ತದೆ.

ಅಂಗನವಾಡಿಗಳಲ್ಲಿ ಮೂರು ರೀತಿ ಪೌಷ್ಟಿಕ ಆಹಾರ ವಿತರಣೆ ನಡೆಯುತ್ತದೆ. 0ರಿಂದ 3ವರ್ಷದೊಳಗಿನ ಮಕ್ಕಳಿಗೆ ಬೆಲ್ಲ, ಅಕ್ಕಿ ಪಾಯಸ ಕೊಟ್ಟರೆ, 3ರಿಂದ 6 ವರ್ಷದೊಳಗಿನ ಮಕ್ಕಳು, ಅಂಗನವಾಡಿ ಕೇಂದ್ರದಲ್ಲೇ ಊಟ ಮಾಡಬೇಕು. ಅವರಿಗೆ ವಾರದಲ್ಲಿ ಎರಡು ದಿನ ಮೊಟ್ಟೆ, ಶೇಂಗಾ ಉಂಡಿ ನೀಡಲಾಗುತ್ತದೆ.

Advertisement

ಇನ್ನು ಗರ್ಭಿಣಿ ಮಹಿಳೆಯರಿಗೆ ನಿತ್ಯವೂ ಶೇಂಗಾ ಉಂಡಿ, ಮೊಟ್ಟೆ, ಊಟ ನೀಡಲಾಗುತ್ತದೆ. ಎಷ್ಟೋ ಜನರು ಅಂಗನವಾಡಿಗೆ ಬಂದು ಊಟ ಮಾಡಲ್ಲ. ಇನ್ನು ಅಂಗನವಾಡಿಗೆ ದಾಖಲಾದ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಎಲ್ಲರೂ ಬರಲ್ಲ. ಹೀಗಾಗಿ ಅಷ್ಟೂ ಆಹಾರಧಾನ್ಯ ಖರ್ಚಾಗಲ್ಲ. ಇಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಸ್ವಲ್ಪ ಮಟ್ಟಿನ ಆಹಾರಧಾನ್ಯ ವ್ಯತ್ಯಾಸ ಮಾಡಿದರೂ ಹಿಡಿದು ನೋಟಿಸ್‌ ಕೊಡುವ ಪರಂಪರೆ ಇದೆ. ಆದರೆ ಅಂಗನವಾಡಿಗೆ ಕಡಿಮೆ ಆಹಾರಧಾನ್ಯ ಪೂರೈಸುವವರ ವಿರುದ್ಧ ಕ್ರಮ ಈ ವರೆಗೂ ಆಗಿಲ್ಲ. ಕಳಪೆ ಗುಣಮಟ್ಟದ ಆಹಾರಧಾನ್ಯ ಪೂರೈಸಿದರೂ ಕೇವಲ ಸೂಚನೆ ನೀಡಿ ಬಿಡಲಾಗುತ್ತಿದೆ. ಇದರಲ್ಲಿ ದೊಡ್ಡ ದೊಡ್ಡ ಪ್ರಭಾವಿಗಳಿದ್ದಾರೆಂಬ ಆರೋಪವಿದೆ.

ಮೊಟ್ಟೆಯಲ್ಲೂ ಹಣ ಹೊಡಿತಾರೆ !: ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗೆ ಮೊಟ್ಟೆ ವಿತರಿಸುವ ಮಹತ್ವದ ಯೋಜನೆ ಸರ್ಕಾರ ಜಾರಿಗೊಳಿಸಿದೆ. ಬೆಲ್ಲ, ಶೇಂಗಾ ಮಿಶ್ರಿತ ಶೇಂಗಾ ಉಂಡೆ, ಮೊಟ್ಟೆ ನೀಡಲಾಗುತ್ತದೆ. ಮಕ್ಕಳು ಒಂದು ಪೂರ್ಣ ಮೊಟ್ಟೆ ತಿನ್ನಲ್ಲ ಎಂಬ ಕಾರಣ ನೀಡಿ ಇಬ್ಬರು ಮಕ್ಕಳು ಸೇರಿ ಒಂದು ಮೊಟ್ಟೆ(ಒಬ್ಬರಿಗೆ ಅರ್ಧ ಮೊಟ್ಟೆ) ನೀಡಲಾಗುತ್ತದೆ.

ಸರ್ಕಾರಿ ಸ್ವಾಮ್ಯದ ಎಂಎಸ್‌ಪಿಟಿಸಿ ಮೂಲಕ ಆಹಾರಧಾನ್ಯ ಪೂರೈಸುತ್ತಿದ್ದು, ಇಲ್ಲಿಯೇ ದೊಡ್ಡ ಗೋಲ್‌ಮಾಲ್‌ ನಡೆಯುತ್ತಿದೆ ಎಂಬ ಆರೋಪವಿದೆ. ಜನಪ್ರತಿನಿಧಿಗಳ ಹಿಂಬಾಲಕರು ಈ ಎಂಎಸ್‌ಪಿಟಿಸಿಗೆ ಆಹಾರಧಾನ್ಯ ಕೊಡುತ್ತಿದ್ದು, ಅಲ್ಲಿ ಪ್ಯಾಕಿಂಗ್‌ ಆಗುತ್ತದೆ. ಸರ್ಕಾರ ಆಯಾ ಕ್ಷೇತ್ರದ ಶಾಸಕರು, ಬದಲಾದಾಗೊಮ್ಮೆ ಈ ಸಂಸ್ಥೆಗೆ ಆಹಾರಧಾನ್ಯ ಪೂರೈಸುವ ಪ್ರಭಾವಿಗಳೂ ಬದಲಾಗುತ್ತದೆ. ಸದ್ಯ ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ಹಿಂದೆ ಪೂರೈಸುತ್ತಿದ್ದ ವ್ಯಕ್ತಿಗಳು, ಖರೀದಿಸಿದ, ಅವಧಿ ಮೀರಿದ ಆಹಾರಧಾನ್ಯ ಇನ್ನೂ ಕೆಲವೆಡೆ ಪೂರೈಕೆಯಾಗುತ್ತಿದೆ. ಈ ಆಹಾರಧಾನ್ಯ ಪೂರೈಸುವ ಖಾಸಗಿ ಪ್ರಭಾವಿಗಳು, ಹೇಳುವಂತೆಯೇ ಎಂಎಸ್‌ಪಿಟಿಸಿ ಅಧಿಕಾರಿಗಳು ಅನಿವಾರ್ಯವಾಗಿ ಕೇಳುತ್ತಾರೆ ಎನ್ನಲಾಗಿದೆ.

ಒಟ್ಟಾರೆ ಮಕ್ಕಳ ಆಹಾರಧಾನ್ಯಕ್ಕೂ ಕನ್ನಾ ಹಾಕುವ ಪ್ರಭಾವಿಗಳ ಕೈಚಳ ನಿರಂತರವಾಗಿ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಆದರೆ ಪ್ರಭಾವ-ಹಣ ಬಲದ ಮಧ್ಯೆ ಇದೆಲ್ಲ ಸಾಧ್ಯವೇ ಎಂಬ ಅಣಕವೂ ರಾಜಕೀಯ
ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.

ಮಕ್ಕಳ ಆಹಾರಧಾನ್ಯ ಪೂರೈಕೆ ವಿಷಯದಲ್ಲಿ ಯಾವುದೇ ರೀತಿ ಅಕ್ರಮ ಸಹಿಸಲು ಸಾಧ್ಯವಿಲ್ಲ. ಅವಧಿ ಮೀರಿದ ಆಹಾರಧಾನ್ಯ ಪೂರೈಕೆ ನನ್ನ ಗಮನಕ್ಕೆ ಬಂದಿಲ್ಲ. ಈ ಕುರಿತು ಜಿ.ಪಂ. ಸಿಇಒ ಹಾಗೂ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ
ಉಪನಿರ್ದೇಶಕರೊಂದಿಗೆ ಚರ್ಚಿಸಿ, ಯಾರೇ ತಪ್ಪಿತಸ್ಥರಿದ್ದರೂ ಕ್ರಮ ಕೈಗೊಳ್ಳಲಾಗುವುದು.
ಕೆ.ಎಂ. ಜಾನಕಿ, ಜಿಲ್ಲಾಧಿಕಾರಿಗಳು

*ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next