ಬಾಗಲಕೋಟೆ: ಅನ್ಯ ಇಲಾಖೆಯ ಕೆಲಸದಿಂದ ಮುಕ್ತಿ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ಕಾರ್ಯಕರ್ತರು ಧರಣಿ ನಡೆಸಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಯೊಂದು ಯೋಜನೆಯೂ ಗ್ರಾಮದ ಪ್ರತಿ ಮನೆಗೂ ತಲುಪಿಸುವ ಕಾರ್ಯ ಗ್ರಾಮಲೆಕ್ಕಾಧಿಕಾರಿಗಳು ಮಾಡುತ್ತಿದ್ದಾರೆ. ಗ್ರಾಮ ಲೆಕ್ಕಾಧಿಕಾರಿಗಳಿಗೆ ಅನ್ಯ ಇಲಾಖೆಯು ನೀಡುವ ಕೆಲಸ ಕಾರ್ಯಗಳಿಂದ ಮಾನಸಿಕ ಹಿಂಸೆ ಅನುಭವಿಸುವಂತಾಗಿದೆ. ಇದನ್ನು ತಪ್ಪಿಸಲು ಈ ಹಿಂದೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಮೇಲಧಿಧಿಕಾರಿಗಳು ರಜಾ ದಿನಗಳಲ್ಲಿ ಕೆಲಸದ ಒತ್ತಡ ಹೇರದಂತೆ ಸರ್ಕಾರ ನಿರ್ದೇಶನ ನೀಡಬೇಕು. ಪ್ರಯಾಣ ಭತ್ಯೆ ದರ ಒಂದು ಸಾವಿರ ಹೆಚ್ಚಿಸಲು ನಿರ್ಧಾರವಾಗಿದ್ದರೂ, 6ನೇ ವೇತನ ಆಯೋಗ ಕೇವಲ ರೂ.500 ನಿಗದಿ ಮಾಡಲಾಗಿದೆ. ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಮುಂಬಡ್ತಿಯಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು.ಕೃಷಿ ಇಲಾಖೆ ನಿರ್ವಹಿಸಬೇಕಾದ ಬೆಳೆ ವಿಮೆ ಕೆಲಸದಿಂದ ಒತ್ತಡ ಹೆಚ್ಚಾಗುತ್ತಿದೆ. ತಾಂತ್ರಿಕ ಕೆಲಸಗಳ ನಿರ್ವಹಣೆಗೆ ಕಂಪ್ಯೂಟರ್ ಆಪರೇಟರ್ ಒದಗಿಸಬೇಕು ಎಂದು ಒತ್ತಾಯಿಸಿದರು. ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಗಾಗಿ ಮಾಸಿಕ 2 ಸಾವಿರ ಬಾಡಿಗೆ ಭತ್ಯೆ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಎಸ್.ಬಿ. ಬಿಜಾಪುರ, ಅಧ್ಯಕ್ಷ ಶಶಿಕಾಂತ ಪೂಜಾರ, ಎಸ್.ಬಿ. ಪಾಟೀಲ, ಖಜಾಂಚಿ ಸಂತೋಷ ಸಾತಾಣಿ, ಉಪಾಧ್ಯಕ್ಷ ಬಿ.ಎಂ. ಪಾಟೀಲ, ಮುಖಂಡರಾದ ಆನಂದ ರಾಠೊಡ, ಎನ್.ಜೆ. ಹನಗಂಡಿ, ಸಿ.ವಿ. ದಾಸರ, ಸತೀಶ ಬೇವೂರ ಉಪಸ್ಥಿತರಿದ್ದರು.