Advertisement

ದ್ವೇಷಮುಕ್ತ ಭಾರತ ನಿರ್ಮಾಣ ಅಗತ್ಯ

09:25 AM Jan 14, 2019 | |

ಮಹಾಲಿಂಗಪುರ: ಮನುಷ್ಯ ಮನುಷ್ಯನನ್ನು ಪ್ರೀತಿಸುವ ಮತ್ತು ಗೌರವಿಸುವ ಪ್ರಯತ್ನ ನಡೆಯುತ್ತದೆಯೋ ಅಲ್ಲಿ ಪರಮಾತ್ಮನ ಅನುಗ್ರಹವಾಗುತ್ತದೆ ಎಂದು ವಿಜಯಪುರ ಕರ್ನಾಟಕ ಅಹ್ಲೆ ಸುನ್ನತ ವಲ್‌ ಜಮಾತ್‌ ಕರ್ನಾಟಕ ರಾಜ್ಯಾಧ್ಯಕ್ಷ ಗುರು ಸೈಯದ್‌ ಮಹಮ್ಮದ ತನ್ವೀರ್‌ ಹಾಶ್ಮೀ ಹೇಳಿದರು.

Advertisement

ಪಟ್ಟಣದ ಡಬಲ್‌ ರಸ್ತೆಯಲ್ಲಿ ಮೊಹಮ್ಮದಿಯಾ ಅಂಜುಮನ್‌ ಇಸ್ಲಾಂ ಕಮಿಟಿ ಹಾಗೂ ಮರ್ಕಜೆ ತಂಜಿಮ್‌ ಅಹಲೆ ಸುನ್ನತ ವಲ್‌ ಜಮಾತ್‌ರವರು ಶ್ರೇಷ್ಠ ಸಂತ ಹಜರತ ಮೆಹಬೂಬ ಸುಬಹಾನಿ ಅವರ 879ನೇ ಉರುಸಿನ ನಿಮಿತ್ತ ಆಯೋಜಿಸಿದ್ದ ಭಾವೈಕ್ಯ ಸಮ್ಮೇಳನ ಹಾಗೂ ಮಾನವ ಕುಲಕ್ಕೆ ಸೂಫಿ ಸಂತರ ಹಾಗೂ ಶರಣರ ಕೊಡುಗೆ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮದು ಕರ್ನಾಟಕ. ನಾನು ಕನ್ನಡಿಗ. ಕನ್ನಡವೆಂದರೆ ನನಗೆ ಪ್ರೀತಿ. ನಾವು ಕನ್ನಡ ಮಾತನಾಡುತ್ತೇವೆ ಹಾಗೂ ಕೇಳುತ್ತೇವೆ. ಇಂಥ ಭಾವೈಕ್ಯ ಕಾರ್ಯಕ್ರಮ ಮಹಾಲಿಂಗಪುರಕ್ಕೆ ಸೀಮಿತವಾಗಬಾರದು ಎಂದರು.

ಮಹಾಲಿಂಗಪುರದಲ್ಲಿ ಮಹಾಲಿಂಗೇಶ್ವರ ವಾರವೆಂದು ಗೌರವಿಸಿ ಸೋಮವಾರ ಯಾವ ಧರ್ಮದವರೂ ಕೂಡಾ ಮಾಂಸಾಹಾರ ಸೇವಿಸುವುದಿಲ್ಲ. ಇಂತಹ ಭಾವ್ಯಕ್ಯತೆ ಇರುವ ಈ ನಗರದ ನೀರನ್ನು ದಿಲ್ಲಿಯಲ್ಲೊಮ್ಮೆ ಚಿಮ್ಮಿಸಿರಿ. ಚೊಳಚಗುಡ್ಡದಲ್ಲಿ ಮಂದಿರ ಹಾಗೂ ಮಸೀದಿ ಕೂಡಿಯೇ ಇವೆ. ಸುಮಾರು 100 ವರ್ಷಗಳಿಂದ ಅಲ್ಲಿ ಪೂಜೆ ಸಮಯದಲ್ಲಿ ಪೂಜೆ ಹಾಗೂ ನಮಾಜ ವೇಳೆಯಲ್ಲಿ ನಮಾಜ ನಡೆಯುತ್ತಿದೆ ಎಂದರು.

ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸುತಾರ ಮಾತನಾಡಿ, ತೋಟದಲ್ಲಿ ಹಲವು ಬಣ್ಣದ ಹೂಗಳು ಅದರಂತೆ ನಮ್ಮ ದೇಶದಲ್ಲಿ ಹಲವು ಮತಗಳು, ಆ ಹೂಗಳಂತೆ ಮತಗಳು ಸಹ ಮಕರಂದ ಬೀರಲಿ. ನಮ್ಮಲ್ಲಿನ ಬೇಧ-ಭಾವ ದೂರವಾಗಲಿ. ನಮ್ಮೆಲ್ಲರ ಭಾವನೆಗಳ ಐಕ್ಯತೆಯೆ ಭಾವೈಕ್ಯತೆಯಾಗಿದೆ ಎಂದರು.

ರಬಕವಿಯ ಗುರುಸಿದ್ದೇಶ್ವರ ಮಹಾಸ್ವಾಮಿಗಳು, ಕೋಲಾರ ಗಫ್ಘಾರಿಯಾ ಗುರುಕುಲದ ಪೀಠಾಧಿಪತಿ ಗುರು ಅಲ್‌ಹಾಜ ಡಾ| ಶಾಹ್‌ಭಖ್ತೀಯಾರಖಾನ ಕಾದ್ರಿ, ವಿಜಯಪುರ ಜಿಲ್ಲಾ ವಕ್ಫ್ ಬೋರ್ಡ್‌ ಅಧ್ಯಕ್ಷ ಉಸ್ಮಾನ ಪಟೇಲ ಖಾನವಾಲೆ, ಬಾಗಲಕೋಟೆ ಜಿಲ್ಲಾ ವಕ್ಫ್ ಬೋರ್ಡ್‌ ಅಧ್ಯಕ್ಷ ಮೈನುದ್ದೀನ ನಬಿಲಾಲೆ ಮಾತನಾಡಿದರು.

Advertisement

ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಅಂಜುಮನ್‌ ಇಸ್ಲಾಂ ಕಮಿಟಿ ಅಧ್ಯಕ್ಷ ಸಜನಸಾಬ ಪೆಂಡಾರಿ ಅಧ್ಯಕ್ಷತೆ ವಹಿಸಿದ್ದರು. ಚಿಮ್ಮಡದ ಜನಾರ್ಧನ ಮಹಾರಾಜರು, ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ, ಜನಾಬ ಮೊಹಮ್ಮದ ಫಾರುಕ ಸುತಾರಿ, ಡಾ| ಶ್ರೀಕಾಂತ ಅರಿಶಿನಗೋಡಿ, ಕಲಾವಿದ ಆರ್‌.ಡಿ. ಬಾಬು, ನಬಿ ಯಕ್ಸಂಬಿ ಇದ್ದರು.

ಈ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ವಿವಿಧ‌ ಗಣ್ಯರನ್ನು ಸನ್ಮಾನಿಸಲಾಯಿತು. ಅಯೂಬ ಪಠಾಣ ನಿರೂಪಿಸಿ-ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next