Advertisement
ಹೋಳಿ ಹಬ್ಬ ಬಂತೆಂದರೆ ಕೆಲವರು ಪ್ರವಾಸದ ನೆಪದಲ್ಲಿ ಊರು ಬಿಟ್ಟರೆ, ಇನ್ನೂ ಕೆಲವರು ಬೇರೆ ಬೇರೆ ನಗರ-ಪಟ್ಟಣಗಳಲ್ಲಿ ಕೆಲಸಕ್ಕಾಗಿ ಹೋದವರು ಮರಳಿ ಬರುತ್ತಾರೆ. ಮೂರು ದಿನಗಳ ಕಾಲ ನಿರಂತರ ಬಣ್ಣದ ಬಂಡಿಗಳಲ್ಲಿ ಬಣ್ಣದಾಟವಾಡಿ ಸಂಭ್ರಮಿಸುತ್ತಾರೆ. ಬಣ್ಣದಾಟ ಹಾಗೂ ಹೋಳಿ ಹಬ್ಬದ ವಿಶಿಷ್ಟ ಆಚರಣೆಯಲ್ಲಿ ಬಾಗಲಕೋಟೆಗೆ ದೇಶದಲ್ಲೇ 2ನೇ ಸ್ಥಾನವಿದೆ.
Related Articles
Advertisement
ಒಂದೊಂದು ಏರಿಯಾದ ಯುವಕರೂ, ಆ ಓಣಿಯ ಹೆಸರಿನಲ್ಲಿ ಹಲಗೆ ಮೇಳ ನಡೆಸುತ್ತಾರೆ. ಈ ಹಲಗೆ ಮೇಳದಲ್ಲಿ ತಾಳಬದ್ಧವಾಗಿ ಹಲಗೆ ಬಾರಿಸುವ ತಂಡಕ್ಕೆ ನಗದು ಬಹುಮಾನ ನೀಡಲಾಗುತ್ತದೆ. ಈ ಸಂಭ್ರಮ ಕಳೆದ ಹಲವು ವರ್ಷಗಳಿಂದ ಬಾಗಲಕೋಟೆಯಲ್ಲಿ ನಡೆದುಕೊಂಡು ಬಂದಿದೆ. ಹಲವು ಬಡಾವಣೆಗಳಲ್ಲಿ ಈ ಬಾರಿಯೂ ಹಲಗೆ ಮೇಳ ನಡೆಸಲು ತೀರ್ಮಾನಿಸಲಾಗಿದೆ. ವಿವಿಧ ಸಂಘ-ಸಂಸ್ಥೆಗಳು, ಸಂಘಟನೆಗಳು ಹಲಗೆ ಮೇಳ ನಡೆಸುವ ಜತೆಗೆ ಹೋಳಿ ಹಬ್ಬದ ಕಾಮದಹನದ ಹಿಂದಿನ ದಿನ ನಗರದ ವಲ್ಲಭಬಾಯಿ ವೃತ್ತದಲ್ಲಿ ಹೋಳಿ ಆಚರಣೆ ಸಮಿತಿಯಿಂದ ಅಧಿಕೃತವಾಗಿ ಚಾಲನೆ ನೀಡಲಾಗುತ್ತದೆ.
ಬಣ್ಣ ಈಗ ಮೂರು ದಿನಕ್ಕೆ ಸೀಮಿತ: ಹಿಂದೆ ಏಳು ದಿನ, ಬಳಿಕ ಐದು ದಿನಗಳವರೆಗೆ ನಡೆಯುತ್ತಿದ್ದ ಬಾಗಲಕೋಟೆಯ ಬಣ್ಣದಾಟ, ಕಳೆದ ಹಲವು ವರ್ಷಗಳಿಂದ ಮೂರು ದಿನಕ್ಕೆ ಸಿಮೀತಗೊಳಿಸಲಾಗಿದೆ. ಒಂದೊಂದು ದಿನ, ಒಂದೊಂದು ಏರಿಯಾಗಳ ಬಣ್ಣದ ಬಂಡಿಗಳು (ಎತ್ತಿನ ಬಂಡಿ, ಟ್ಯಾಕ್ಟರ್‌ಗಳಲ್ಲಿ ಬಣ್ಣದ ನೀರು ತುಂಬಿದ ಬ್ಯಾರೇಲ್ ಇಟ್ಟು, ಬಣ್ಣ ಎರಚುತ್ತ ಸಾಗುತ್ತಾರೆ), ಇಡೀ ಬಾಗಲಕೋಟೆಯನ್ನು ಬಣ್ಣದ ನಗರವನ್ನಾಗಿ ಮಾಡುತ್ತವೆ. ಮಾರ್ಚ್ 20ರಂದು ರಾತ್ರಿ ಕಾಮದಹನ ಬಳಿಕ ಬಣ್ಣದಾಟಕ್ಕೆ ಚಾಲನೆ ದೊರೆಯುತ್ತದೆ. ಮಾ.21ರಿಂದ 23ರವರೆಗೆ ನಗರದಲ್ಲಿ ಬಣ್ಣದ ಬಂಡಿಗಳ ಸಂಭ್ರಮ ಜೋರಾಗಿ ನಡೆಯಲಿದೆ.
ಪ್ರತಿವರ್ಷ ಹೋಳಿ ಹಬ್ಬವನ್ನು ವಿಶಿಷ್ಟ ಹಾಗೂ ಸುಂದರವಾಗಿ ಆಚರಿಸುವುದು ಬಾಗಲಕೋಟೆಯ ಹೆಮ್ಮೆ. ಇದಕ್ಕಾಗಿಯೇ ಸಮಿತಿ ಇದ್ದು, ಈಗಾಗಲೇ ಸಮಿತಿ ಸಭೆ ನಡೆಸಿ, ಚರ್ಚಿಸಿದೆ. ನಗರದ ಐದು ಓಣಿಗಳ ತುರಾಯಿ ಹಲಗೆ ಮೇಳ ಮತ್ತು ಪ್ರದರ್ಶನ ನಡೆಸಲು ಉದ್ದೇಶಿಸಲಾಗಿದೆ. ನಗರದ ಎಲ್ಲ ಬಂಧುಗಳು, ಹೋಳಿ ಹಬ್ಬವನ್ನು ಶಾಂತ ಹಾಗೂ ಸಂಭ್ರಮದಿಂದ ಆಚರಿಸಬೇಕು.ಕಳಕಪ್ಪ ಬಾದವಾಡಗಿ,
ಅಧ್ಯಕ್ಷ, ಹೋಳಿ ಆಚರಣೆ ಸಮಿತಿ ಹೋಳಿ ಹಬ್ಬದ ಪ್ರಯುಕ್ತ ನಡೆಯುವ ಮೂರು ದಿನಗಳ ಬಣ್ಣದಾಟದ ವೇಳೆ, ನಗರದ ವ್ಯಾಪಾರ ವಹಿವಾಟು ಸ್ವಯಂ ಪ್ರೇರಿತ ಬಂದ್ ಆಗಿರುತ್ತದೆ. ಹೀಗಾಗಿ ಬಹುತೇಕ ವ್ಯಾಪಾರಸ್ಥರು, ಆ ಮೂರು ದಿನಗಳ ಕಾಲ ಪ್ರವಾಸದ ನೆಪದಲ್ಲಿ ಊರು ಬಿಡುತ್ತಾರೆ. ವ್ಯಾಪಾರಸ್ಥರು, ಯುವಕರು ಊರು ಬಿಡದೇ, ನಗರದಲ್ಲೇ ಇದ್ದುಕೊಂಡು ಬಣ್ಣದಾಟದ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕು.
ಶಿವಾನಂದ, ನಗರದ ಯುವಕ ವಿಶೇಷ ವರದಿ