Advertisement

ಅನುದಾನ ದುರ್ಬಳಕೆಯಾದರೆ ಕ್ರಮ

11:52 AM Feb 16, 2019 | Team Udayavani |

ಬಾಗಲಕೋಟೆ: ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಬಿಡುಗಡೆಯಾದ ಅನುದಾನ ಸಮರ್ಪಕವಾಗಿ ವಿನಿಯೋಗಿಸಲು ವಿಫಲವಾದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಹಾಗೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್‌ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಎಸ್‌ಸಿಪಿ, ಟಿಎಸ್‌ಪಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಈ ಹಿಂದೆ ಸಮರ್ಪಕವಾಗಿ ಅನುದಾನ ಬಳಕೆ ಮಾಡದ ಕಾರಣ ಅಧಿಕಾರಿಗಳಿಗೆ ನೋಟಿಸ್‌ ನೀಡಲಾಗಿತ್ತು. ಆದರೆ ಇನ್ನು ಮುಂದೆ ನಿಗದಿತ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯದ ಪಕ್ಷದಲ್ಲಿ ಹಾಗೂ ಹಣ ವಿನಿಯೋಗದಲ್ಲಿ ನಿರಾಸಕ್ತಿ ತೋರುವ ಅಧಿ ಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲೂ ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು.

ನಾಲ್ವರು ಅಧಿಕಾರಿಗಳಿಗೆ ನೋಟಿಸ್‌: ಪ್ರಗತಿ ಪರಿಶೀಲನಾ ಸಭೆಗಳಿಗೆ ಅನಧಿ ಕೃತವಾಗಿ ಗೈರು ಹಾಜರಾದ ಹೆಸ್ಕಾಂ, ಕ್ರೀಡಾ ಇಲಾಖೆ, ಆರ್‌ಟಿಒ, ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ನೋಟಿಸ್‌ ನೀಡುವಂತೆ ಸೂಚಿಸಿದರಲ್ಲದೇ ಅಧಿಕಾರಿಗಳ ಪರವಾಗಿ ಬರುವಂತವರಿಗೂ ನೋಟಿಸ್‌ ನೀಡಬೇಕು. ಇನ್ನು ಮುಂದೆ ಸ್ವತಃ ಅಧಿಕಾರಿಗಳೇ ಸಭೆಗಳಿಗೆ ಹಾಜರಾತಕ್ಕದ್ದೆಂದು ತಿಳಿಸಿದರು.

ಕ್ರೀಡಾ ಇಲಾಖೆಗೆ ಹಾಸನ ಅಧಿಕಾರಿ ಬೇಡ: ಹಾಸನದಲ್ಲಿರುವ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಬಾಗಲಕೋಟೆಗೆ ಪ್ರಭಾರ ಹೊಂದಿದ್ದು, ಹಾಸನದಿಂದ ಇಲ್ಲಿಗೆ ಬಂದು ಕಾರ್ಯನಿರ್ವಹಿಸುವುದು ಸಾಧ್ಯವಾಗದ ಮಾತು. ಇಂದಿನ ಎಸ್‌ಸಿಪಿ, ಟಿಎಸ್‌ಪಿ ಸಭೆ ಹಾಗೂ ಅನೇಕ ಕಾರ್ಯಕ್ರಮಗಳಿಗೆ ಗೈರು ಆದ್ದರಿಂದ ಸ್ಥಳೀಯರಿಗೆ ಕ್ರೀಡಾ ಇಲಾಖೆ ಪ್ರಭಾರ ವಹಿಸಿಕೊಡುವಂತೆ ಇಲಾಖೆ ಕಾರ್ಯದರ್ಶಿ ರಜನೀಶ ಗೋಯಲ್‌ ಅವರಿಗೆ ಪತ್ರ ಬರೆಯಲಾಗುವುದೆಂದು ತಿಳಿಸಿದರು.

2,538 ಮಕ್ಕಳು ಶಾಲೆಯಿಂದ ಹೊರಗೆ: ಪ್ರಸಕ್ತ ಸಾಲಿನ ಆನ್‌ಲೈನ್‌ ತಂತ್ರಾಂಶ ಪ್ರಕ್ರಿಯೆಯಿಂದ ಜಿಲ್ಲೆಯಲ್ಲಿ ಒಟ್ಟು 2,538 ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲಾಗಿದ್ದು, ಆ ಮಕ್ಕಳಲ್ಲಿ ಯಾವುದೇ ಒಂದು ಮಗು ಶಾಲೆಗೆ ದಾಖಲಾಗದಿರುವುದು ದುರ್ದೈವ. ಶಾಲೆಯಿಂದ ಹೊರಗುಳಿದ ಯಾವುದೇ ಜಾತಿಗೆ ಸೇರಿದರೂ ಮುತುವರ್ಜಿವಹಿಸಿ ಮರು ಸೇರಿಸಿಲ್ಲ. ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣದಿಂದ ಮಕ್ಕಳು ಹೊರಗುಳಿಯುತ್ತಿರುವುದಕ್ಕೆ ವಿಷಾದಿಸಿ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಮ್ಮ ಕಾರ್ಯಸೇವೆ ಚುರುಕುಗೊಳಿಸುವಂತೆ ಸೂಚಿಸಿದರಲ್ಲದೇ ಒಂದು ದಿನಕ್ಕೆ ಒಂದು ಮಗುವನ್ನಾದರೂ ಶಾಲೆಗೆ ಸೇರಿಸಲು ಕ್ರಮಕೈಗೊಳ್ಳಬೇಕು ಎಂದರು.

Advertisement

ಅಶಿಸ್ತು ಸಹಿಸಲಾಗದು: ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ಆಂದೋಲನ ಚುರುಕುಗೊಳಿಸಬೇಕು. ಈ ಕಾರ್ಯದಲ್ಲಿ ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರ ಸಹಭಾಗಿತ್ವದಲ್ಲಿ ಯಾವುದೇ ಮಗು ಶಾಲೆಯಿಂದ ಹೊರಗುಳಿದಿದ್ದರೆ ಜಿಲ್ಲಾಡಳಿತ ಗಮನಕ್ಕೆ ತರಬೇಕು. ಇಲ್ಲವೇ 1098 ಮಕ್ಕಳ ಸಹಾಯವಾಣಿಗೆ ಕರೆ ಮಾಡಬಹುದು. ಈ ನಿಟ್ಟಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಿಆರ್‌ಸಿ-ಬಿಆರ್‌ಸಿ ಮತ್ತು ಶಿಕ್ಷಕರ ಮೂಲಕ ಶಾಲೆಗಳಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಲು ಮುಂದಾಗಬೇಕು. ಅಧಿಕಾರಿ ಮತ್ತು ಸಿಬ್ಬಂದಿಗಳ ಅಶಿಸ್ತು ಸಹಿಸಲಾಗುವುದಿಲ್ಲವೆಂದ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಎಸ್‌ಸಿಪಿ ಯೋಜನೆಯಡಿ ಸಹಕಾರ, ಲೋಕೋಪಯೋಗಿ, ಇಂಧನ ಹಾಗೂ ಟಿಎಸ್‌ಪಿ ಯೋಜನೆಯಡಿ ಲೋಕೋಪಯೋಗಿ, ಇಂಧನ, ಕನ್ನಡ ಮತ್ತು ಸಂಸ್ಕೃತಿ ನೂರಕ್ಕೆ ನೂರರಷ್ಟು ಪ್ರಗತಿ ಸಾಧಿಸಿದ್ದು, ಇದುವರೆ ಎಸ್‌ಸಿಪಿ ಯೋಜನೆಯಡಿ ಬಿಡುಗಡೆಯಾದ 75.36 ಕೋಟಿ ರೂ. ಅನುದಾನ ಪೈಕಿ 49.56 ಕೋಟಿ ರೂ. ಖರ್ಚಾಗಿದೆ. ಟಿಎಸ್‌ಪಿ ಯೋಜನೆಯಡಿ ಬಿಡುಗಡೆಯಾದ 24.47 ಕೋಟಿ ಪೈಕಿ 17.67 ಕೋಟಿ ರೂ. ಖರ್ಚಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಜಿಪಂ ಸಿಇಒ ಗಂಗೂಬಾಯಿ ಮಾನಕರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ ಹೆಬ್ಬಳ್ಳಿ ಮುಂತಾದವರು ಉಪಸ್ಥಿತರಿದ್ದರು.

ಅಧಿಕಾರಿಗಳು ಸೋಮಾರಿಗಳಾಗದೇ ಅವರವರ ಜವಾಬ್ದಾರಿ ಚಾಕಚಕ್ಯತೆಯಿಂದ ನಿಭಾಯಿಸಬೇಕು. ನಗರಾಭಿವೃದ್ಧಿ ಇಲಾಖೆಯಲ್ಲಿ ಪ್ರಗತಿ ಕಡಿಮೆಯಾಗಿದ್ದು, ಮಾರ್ಚ್‌ 15 ರೊಳಗೆ ಫಲಾನುಭವಿ ಆಯ್ಕೆ ಮಾಡಿ ಅನುದಾನ ಖರ್ಚು ಮಾಡಬೇಕು.
. ಆರ್‌.ರಾಮಚಂದ್ರನ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next