ಬಾಗಲಕೋಟೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿಗಳ ಪ್ರಚಾರದ ಕರಪತ್ರ, ಪೋಸ್ಟರ್ ಹಾಗೂ ಕಿರುಹೊತ್ತಿಗೆ ಸೇರಿದಂತೆ ಇತ್ಯಾದಿಗಳನ್ನು ಮುದ್ರಿಸುವ ಪೂರ್ವದಲ್ಲಿ ಮುದ್ರಕರು ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿಗಳೂ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಆರ್.ರಾಮಚಂದ್ರನ್ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ನಡೆದ ಮುದ್ರಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುದ್ರಕರ ಮತ್ತು ಪ್ರಕಾಶಕರ ಹೆಸರನ್ನು ಹೊಂದಿರದ ಯಾವುದೇ ಚುನಾವಣೆಯ ಕಿರುಹೊತ್ತಿಗೆ ಅಥವಾ ಭಿತ್ತಿಪತ್ರ ಮುದ್ರಿಸಿ ಪ್ರಕಟಿಸುವಂತಿಲ್ಲ. ಪ್ರಿಂಟ್ ಮಾಡಿಸುವವರಿಂದ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿಸಿಕೊಳ್ಳತಕ್ಕದ್ದು. ಪ್ರಕಟಿಸಿದ ಕರಪತ್ರ ಮತ್ತು ನಮೂನೆಯನ್ನು 24 ಗಂಟೆಗಳಲ್ಲಿ ಜಿಲ್ಲಾ ಚುನಾವಣಾಧಿಕಾರಿಗೆ ಸಲ್ಲಿಸಲು ತಿಳಿಸಿದರು.
ಚುನಾವಣೆಯಲ್ಲಿ ಅಭ್ಯರ್ಥಿಗಳ, ಪಕ್ಷದ ಖರ್ಚು ವೆಚ್ಚಗಳ ಮಾಹಿತಿ ಮಹತ್ವದ್ದಾಗಿದ್ದು, ಚುನಾವಣಾ ಆಯೋಗವು ಗರಿಷ್ಠ 70 ಲಕ್ಷ ರೂ. ಖರ್ಚು ಮಾಡಲು ನಿಗದಿಪಡಿಸಿದೆ. ಮುದ್ರಕರು ಮುದ್ರಿತ ಪ್ರಕಟಣೆಯಲ್ಲಿ ಮುದ್ರಣ ಸ್ಥಳ, ಎಷ್ಟು ಪ್ರತಿ ಎಂಬುದನ್ನು ಪ್ರಕಟಿಸತಕ್ಕದ್ದು. ಅದರ ವೆಚ್ಚವನ್ನು ಚೆಕ್ ಅಥವಾ ಡಿಡಿ ಮೂಲಕ ಪಾವತಿ ಮಾಡಿಕೊಂಡು ಕಾನೂನಾತ್ಮಕವಾಗಿ ಕಾರ್ಯನಿರ್ವಹಿಸಬೇಕು. ಕಾನೂನು ಉಲ್ಲಂಘಿಸಿದಲ್ಲಿ 6 ತಿಂಗಳ ಜೈಲುವಾಸ ಮತ್ತು 2 ಸಾವಿರ ರೂ. ದಂಡಕ್ಕೆ ಒಳಪಡಿಸಲಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ ಸಿಇಒ ಗಂಗೂಬಾಯಿ ಮಾನಕರ ಮಾತನಾಡಿ, ಮುದ್ರಣದ ವಿವರದಲ್ಲಿ ಶಾಂತಿಭಂಗ, ಭದ್ರತೆ, ಧಾರ್ಮಿಕ ನಿಂದನೆ, ವ್ಯಕ್ತಿಗತ ಅವಹೇಳನಕಾರಿ ಹೇಳಿಕೆಗಳು ಇರಬಾರದು. ಪ್ರಿಂಟ್ ಮಾಡುವ ಪೂರ್ವದಲ್ಲಿ ಅದರಲ್ಲಿರುವ ಎಲ್ಲ ವಿಷಯವನ್ನು ಕುಲಂಕೂಷವಾಗಿ ಪರಿಶೀಲಿಸಿ ನಂತರ ಮುದ್ರಣ ಮಾಡಬೇಕು ಎಂದು ತಿಳಿಸಿದರು. ಅಪರ ಜಿಲ್ಲಾಕಾರಿ ಶಶಿಧರ ಕುರೇರ ಮಾತನಾಡಿ, ಎಲ್ಲ ಅಭ್ಯರ್ಥಿಗಳಿಗೂ ಪ್ರಜಾಪ್ರತಿನಿಧಿ ಕಾಯ್ದೆ ಅನುಗುಣವಾಗಿ ಸಮಾನ ಅವಕಾಶವಿದೆ. ಪಕ್ಷದ ಪ್ರಚಾರ ಮಾಡುವಾಗ ಪಕ್ಷದ ಜಿಲ್ಲಾಧ್ಯಕ್ಷರ ಅನುಮತಿ ಕಡ್ಡಾಯವಾಗಿದ್ದು, ಅಭ್ಯರ್ಥಿಗಳ ಕುರಿತು ಪ್ರಚಾರ ಮಾಡುವಾಗ ಪಕ್ಷದ ಅಭ್ಯರ್ಥಿಯ ಸಹಿ ಇದ್ದಲ್ಲಿ ಮಾತ್ರ ಕರಪತ್ರ, ಪೋಸ್ಟರ್ ಮುದ್ರಿಸಲು ಪರವಾನಗಿ ನೀಡಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲೆಯ ವಿವಿಧ ಮುದ್ರಕರು ಉಪಸ್ಥಿತರಿದ್ದರು.