ಬಾಗಲಕೋಟೆ: ಜಿಲ್ಲೆಯಲ್ಲಿ ಮಾ. 1ರಿಂದ 18 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಗಳನ್ನು ಪಾರದರ್ಶಕ ಮತ್ತು ನಕಲು ಮುಕ್ತವಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಅಧಿಕಾರಿಗಳಿಗೆ ಸೂಚಿಸಿದರು. ನವನಗರದ ಜಿಲ್ಲಾಡಳಿತ ಭವನದಲ್ಲಿರುವ ವಿಡಿಯೋ ಕಾನ್ಫ್ ರನ್ಸ್ ಹಾಲ್‌ನಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು 37 ಪರೀಕ್ಷಾ ಕೇಂದ್ರಗಳಿದ್ದು, ಒಟ್ಟು 21,779 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅದರಲ್ಲಿ 11,628 ಬಾಲಕರು, 10,151 ಬಾಲಕಿಯರಿದ್ದು, 17,525 ಹೊಸ, 11,43 ಬಾಹ್ಯ ಹಾಗೂ 3,111ಪುನರಾವರ್ತಿತ ಅಭ್ಯರ್ಥಿಗಳಿದ್ದಾರೆ. ಪ್ರಶ್ನೆ ಪತ್ರಿಕಾ ಪಾಲಕರನ್ನಾಗಿ ಈಗಾಗಲೇ ಇಲಾಖೆಯಿಂದ ತಹಶೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರನ್ನೊಳಗೊಂಡ 8 ತಂಡ ನೇಮಕ ಮಾಡಲಾಗಿದೆ ಎಂದರು.
ನಿಗದಿಪಡಿಸಿದ ದಿನಾಂಕಗಳವರೆಗೆ ಖಜಾನೆಯಲ್ಲಿ ಠೇವಣಿಸಲಾದ ಪ್ರಶ್ನೆ ಪತ್ರಿಕೆ ವಿತರಿಸಲು ಬಂದಾಗ ಸಮಯಕ್ಕೆ ಸರಿಯಾಗಿ ಖಜಾನೆಯಲ್ಲಿ ಹಾಜರಿರಬೇಕು. ಪ್ರಶ್ನೆ ಪತ್ರಿಕೆ ಠೇವಣಿ ಮಾಡಿ ಪರೀಕ್ಷಾ ದಿನಗಳಂದು ನಿಗದಿತ ಸಮಯದಲ್ಲಿ ಪರೀಕ್ಷಾ ಕೇಂದ್ರಗಳಿಗೆ ವಿತರಿಸಬೇಕು ಎಂದು ತಿಳಿಸಿದರು.
ಪಶ್ನೆ ಪತ್ರಿಕೆಗಳ ಬಂಡಲ್‌ಗಳನ್ನು ಆಯಾ ಪರೀಕ್ಷಾ ಕೇಂದ್ರಗಳಿಗೆ ತಲುಪಿಸುವ ಮಾರ್ಗಾಧಿಕಾರಿಗಳ ವಾಹನಕ್ಕೆ ಜಿಪಿಎಸ್ ಬೇಸ್ ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಸಬೇಕು.. ಇಲಾಖೆಯಿಂದ ಜಿಲ್ಲಾ ಮಟ್ಟದಲ್ಲಿ 2 ಜಾಗೃತ ತಂಡ ರಚಿಸಲಾಗಿದ್ದು, ಒಂದು ತಂಡದ ನೇತೃತ್ವ ಉಪ ನಿರ್ದೇಶಕರು ಹಾಗೂ ಇನೊಂದು ತಂಡದ ನೇತೃತ್ವ ಹಿರಿಯ ಪ್ರಾಚಾರ್ಯರು ವಹಿಸಬೇಕು. ಈ ತಂಡದವರು ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಪರೀಕ್ಷಾ ಕೇಂದ್ರಗಳಿಗೆ ಪ್ರತಿ ದಿನ ಭೇಟಿ ನೀಡಿ ಪರೀಕ್ಷಾ ಅಕ್ರಮ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ತಾಲೂಕಾ ಮಟ್ಟದಲ್ಲಿಯೂ ಸಹ ಜಾಗೃತ ದಳ ನೇಮಿಸಲಾಗಿದೆ. ಪರೀಕ್ಷಾ ಕಾರ್ಯದಲ್ಲಿ ಭಾಗವಹಿಸಿದ ಸಿಬ್ಬಂದಿಗೆ ಆಯಾ ಪರೀಕ್ಷಾ ಕೇಂದ್ರಗಳ ಸಿಬ್ಬಂದಿಗೆ ಗುರುತಿನ ಪತ್ರ ನೀಡಿ ದುರುಪಯೋಗವಾಗದಂತೆ ಮುಖ್ಯ ಅಧೀಕ್ಷಕರು ಎಚ್ಚರಿಕೆ ವಹಿಸಬೇಕು. ಅಲ್ಲದೇ ಪರೀಕ್ಷಾ ಕೊಠಡಿಯೊಳಗೆ ಮಾಧ್ಯಮದವರಿಗೆ ಪ್ರವೇಶ ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆ ಬಂಡಲ್ ತೆರೆಯುವ ಹಾಗೂ ಉತ್ತರ ಪತ್ರಿಕೆ ಸ್ವೀಕರಿಸುವ ಪ್ರಕ್ರಿಯೆ ಸಿಸಿಟಿವಿ ವೀಕ್ಷಣಾಡಿಯಲ್ಲಿ ನಡೆಯಬೇಕು. ಪರೀಕ್ಷೆ ಆರಂಭದಿಂದ ಕೊನೆಯವರೆಗೆ ಸಿಸಿಟಿವಿ ಯಾವುದೇ ಕಾರಣಕ್ಕೂ ಬಂದ್ ಆಗಬಾರದು ಎಂದರು. ಪರೀಕ್ಷೆ ಪ್ರಾರಂಭವಾಗುವ 15 ನಿಮಿಷ ಮುಂಚಿತವಾಗಿ ಸಹ ಮುಖ್ಯ ಅಧೀಕ್ಷಕರು, ವಿಶೇಷ ಜಾಗೃತಿ ದಳದ ಸದಸ್ಯರ ಸಮ್ಮುಖದಲ್ಲಿ ಬಾಕ್ಸ್‌ನ್ನು ತೆಗೆದು ಸೀಲ್ ಮಾಡಲ್ಪಟ್ಟಿರುವ ಲಕೋಟೆ ತೆರೆಯದೇ ಕೊಠಡಿ ಮೇಲ್ವಿಚಾರಕರಿಗೆ ವಿತರಿಸಬೇಕು. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಇತರೆ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಮೊಬೈಲ್, ಫೋನ್, ಇ-ಕ್ಯಾಮರಾ, ಲ್ಯಾಪ್‌ಟಾಪ್ ತರುವುದು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಪದವಿ ಪೂರ್ವ ಕಾಲೇಜಿನ ಉಪ ನಿರ್ದೇಶಕ ಎಸ್.ಬಿ. ಪೂಜಾರಿ ಪರೀಕ್ಷಾ ಸಿದ್ಧತೆ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ಉಪ ವಿಭಾಗಾಧಿಕಾರಿ ಎಚ್.ಜಯಾ, ಖಜಾನೆ ಇಲಾಖೆಯ ಉಪ ನಿರ್ದೇಶಕ ಬಿ.ಎನ್. ಗೋಪಾಲಸ್ವಾಮಿ ಉಪಸ್ಥಿತರಿದ್ದರು.