Advertisement

ರೈತರ ಉತ್ಪನ್ನಗಳ ಖರೀದಿಗೆ ಕ್ರಮ

11:42 AM Apr 08, 2020 | Naveen |

ಬಾಗಲಕೋಟೆ: ರೈತರ ಕೃಷಿ ಉತ್ಪನ್ನ ಖರೀದಿಯ ಬಹುತೇಕ ಮಾರುಕಟ್ಟೆಗಳು ಹೊರ ರಾಜ್ಯದಲ್ಲಿ ಇರುವದರಿಂದ ಸ್ಥಳೀಯವಾಗಿ ಉತ್ಪನ್ನಗಳ ಖರೀದಿಗೆ
ಕ್ರಮ ಕೈಗೊಳ್ಳುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು. ಜಿಪಂ ಸಭಾ ಭವನದಲ್ಲಿ ಸೋಮವಾರ ಸಂಜೆ ಕೋವಿಡ್‌ ಕುರಿತು ಕೃಷಿ ಹಾಗೂ ಇತರೆ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಸರಕಾರ ರೈತರ ಪರವಾಗಿದ್ದು, ಸಮಾಜದ ಒಳಿತಿಗಾಗಿ ಸಾಮಾಜಿಕ ಕರ್ಫ್ಯೂ ಹೇರಲಾಗಿದೆ. ಮುಂಗಾರು ಆರಂಭಗೊಳ್ಳುವುದರಲ್ಲಿ ರೈತರಿಗೆ
ಬೇಕಾದ ಬಿತ್ತನೆ ಬೀಜ, ಗೊಬ್ಬರಗಳ ತೊಂದರೆ ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಲಾಕ್‌ಡೌನ್‌ನಿಂದ ಕೃಷಿ ಚಟುವಟಿಕೆಗಳಿಗೆ
ಯಾವುದೇ ನಿರ್ಬಂಧ ಇಲ್ಲ. ಉತ್ಪನ್ನ ಸಾಗಾಟಗಾರರಿಗೆ ಗ್ರೀನ್‌ ಪಾಸ್‌ ನೀಡಲಾಗುತ್ತಿದೆ. ಹೊರ ರಾಜ್ಯಕ್ಕೆ ಕಳುಹಿಸುವವರಿಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ
ಪೊಲೀಸ್‌ ವರಿಷ್ಠಾಧಿಕಾರಿಗಳಿಂದ ಪರವಾನಗಿ ನೀಡಲಾಗುತ್ತಿದೆ. ಕಳೆದೆರಡು ದಿನಗಳಿಂದ ಸಾಗಾಣಿಕೆ ಆಗುತ್ತಿದೆ. ರಾಜ್ಯದಲ್ಲಿ ಏಪ್ರಿಲ್‌ 14ರವರೆಗೆ 8
ಲಕ್ಷ ಲೀಟರ್‌ ಹಾಲು ವಿತರಿಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲೆಗೆ 10 ಕೋಟಿ ಕೊಡಿ: ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ಕೃಷಿ ಚಟುವಟಿಕೆಗಳ ಅಭಿವೃದ್ಧಿಗೆ 10 ಕೋಟಿ ರೂ
ಅನುದಾನವನ್ನು ಜಿಲ್ಲೆಗೆ ನೀಡಬೇಕು. ಜಿಲ್ಲೆಯಲ್ಲಿ ಈಗಾಗಲೇ 700 ನ್ಯಾಯಬೆಲೆ ಅಂಗಡಿಗಳ ಮೂಲಕ ಎರಡು ತಿಂಗಳ ಪಡಿತರ ವಿತರಿಸಲಾಗುತ್ತಿದೆ. ಉಜ್ವಲ
ಯೋಜನೆಯಡಿ 3 ಸಿಲೆಂಡರ್‌ ಉಚಿತವಾಗಿ ನೀಡುತ್ತಿದ್ದು, ನೋಂದಾಯಿತ ಕಟ್ಟಡ ಕಾರ್ಮಿಕರಿಗೆ 1 ಸಾವಿರ ಹಾಗೂ ಬಡವರಿಗಾಗಿ ಹಾಲು ವಿತರಿಸಲು
ಜಿಲ್ಲಾವಾರು ಬೇಡಿಕೆ ಅನುಸಾರ ಹಂಚಿಕೆ ಮಾಡಬೇಕು ಎಂದು ಕೇಳಿಕೊಂಡರು.

ಹಾಪ್‌ಕಾಮ್ಸ್‌ ಮೂಲಕ ಖರೀದಿಸಿ: ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ ಮಾತನಾಡಿ, ರೈತರ ಉತ್ಪನ್ನಗಳು
ಹಾಪ್‌ಕಾಮ್ಸ್‌ನಿಂದ ಹೆಚ್ಚಿನ ಖರೀದಿಯಾಗಬೇಕು. ಮುಧೋಳ ಮತ್ತು ಬಾಗಲಕೋಟೆಯಲ್ಲಿಯು ಖರೀದಿ ಕೇಂದ್ರ ಆರಂಭಿಸಬೇಕು. ದ್ರಾಕ್ಷಿ ಮತ್ತು
ದಾಳಿಂಬೆ ಹಾಳಾಗದಂತೆ ನೋಡಿಕೊಳ್ಳಬೇಕು. ಕಳದೆರಡು ದಿನದಿಂದ ರೈತನೊಬ್ಬನ ಉತ್ತಮ ಬೆಳೆಯನ್ನು ಸಾಗಾಟವಾಗಿದೆ. ಮೌಲ್ಯವರ್ಧನೆಗೆ
ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ|ಕೆ.ರಾಜೇಂದ್ರ ಮಾತನಾಡಿ, ಕೃಷಿ ಮತ್ತು ತೋಟಗಾರಿಕೆ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಕ್ಷೇತ್ರ
ಪ್ರವಾಸ ಮಾಡಿಸಿ ತಾಲೂಕಾವಾರು ಬೆಳೆ, ರೈತರ ಸಂಪರ್ಕ ಹಾಗೂ ಮೊಬೈಲ್‌ ಸಂಖ್ಯೆಯ ಪಟ್ಟಿಯನ್ನು ಮಾಡಲಾಗಿದೆ. ರೈತರ ಕಲ್ಲಂಗಡಿ
ಹಾನಿಯಾಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರವಾಸವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಲಾಗಿದೆ ಎಂದರು. ರೈತರ ಉತ್ಪನ್ನಗಳನ್ನು ಮಾರಾಟ ಮಾಡಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದು ಸಭೆಗೆ ತಿಳಿಸಿದರು.

Advertisement

13 ಸಾವಿರ ಟನ್‌ ಕಲ್ಲಂಗಡಿ ಖರೀದಿ: ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಪ್ರಭುರಾಜ ಹಿರೇಮಠ ಮಾತನಾಡಿ, ಏಪ್ರಿಲ್‌ 15 ವರೆಗೆ 15
ಸಾವಿರ ಟನ್‌ ವಿವಿಧ ಬೆಳೆವಾರು ಖರೀದಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಲ್ಲಂಗಡಿ ದರ ಕುಸಿದಿದ್ದು, 600 ಹೆಕ್ಟೇರ್‌ಗಳಲ್ಲಿ ಕಲ್ಲಂಗಡಿ ಬೆಳೆಯಲಾಗಿದೆ. ಏಪ್ರಿಲ್‌
13ರವರೆಗೆ 13 ಸಾವಿರ ಟನ್‌ ಆಗಲಿದೆ. ಮತ್ತು ದಾಳಿಂಬೆ 836 ಟನ್‌ ಲಭ್ಯವಿದ್ದು, ಮಾರುಕಟ್ಟೆಗೆ ಲಿಂಕ್‌ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ಡಾ|ವೀರಣ್ಣ
ಚರಂತಿಮಠ, ಮುರುಗೇಶ ನಿರಾಣಿ, ಸಿದ್ದು ಸವದಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಒ ಗಂಗೂಬಾಯಿ
ಮಾನಕರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next