ರಬಕವಿ-ಬನಹಟ್ಟಿ: ತೇರದಾಳ ಮತಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನಗಳನ್ನು ತೆಗೆದುಕೊಂಡು ಬರಲಾಗಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾಮಗಾರಿಗಳು ಕುಂಠಿತಗೊಂಡಿವೆ. ಈ ಎಲ್ಲ ವಿಷಯಗಳನ್ನು ಬರುವ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಮಾಡಲಾಗುವುದು. ಈ ಕಾಮಗಾರಿಗಳ ಪರಿಶೀಲನೆ ಮತ್ತು ಅವುಗಳಿಗೆ ವೇಗವನ್ನು ನೀಡುವುದರ ಜೊತೆಗೆ ಆದಷ್ಟು ಬೇಗನೆ ಕಾಮಗಾರಿಗಳನ್ನು ಮುಕ್ತಾಯಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡುವ ನಿಟ್ಟಿನಲ್ಲಿ ಪ್ರಗತಿ ಪರಿಶೀಲನಾ ಸಭೆಯನ್ನು ಕರೆಯಲಾಗಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಸೋಮವಾರ ಸ್ಥಳೀಯ ನಗರಸಭೆಯ ಕಾರ್ಯಾಲಯದಲ್ಲಿ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ತಾಲ್ಲೂಕು ಪಂಚಾಯ್ತಿ ಆಡಳಿತಾಧಿಕಾರಿಗಳು ಮತ್ತು ಕಾರ್ಯ ನಿರ್ವಾಹಕ ಅಧಿಕಾರಿಗಳು ವಿವಿಧ ಇಲಾಖೆಗಳ ಪ್ರಗತಿಯನ್ನು ಮುಂಚಿತವಾಗಿ ಪರಿಶೀಲನೆ ಮಾಡಿದ ನಂತರ ಶಾಸಕರ ಗಮನಕ್ಕೆ ತರಬೇಕು. ಇದರಿಂದ ಎಲ್ಲ ಇಲಾಖೆಗಳ ಪ್ರಗತಿಯನ್ನು ಪರಿಶೀಲನೆ ಮಾಡಲು ಸಾಧ್ಯವಾಗುತ್ತದೆ.
ರಸ್ತೆ ಕಾಮಗಾರಿಯ ಅಭಿವೃದ್ದಿಯ ನಿಟ್ಟಿನಲ್ಲಿ ಜಮಖಂಡಿಯ ಲೋಕೋಪಯೋಗಿ ಅಧಿಕಾರಿಗಳು ತೇರದಾಳ ಮತಕ್ಷೇತ್ರಕ್ಕೆ ತಾರತಮ್ಯ ಎಸಗುತ್ತಿದ್ದಾರೆ ಎಂದು ಶಾಸಕ ಸವದಿ ಆರೋಪಿಸಿದರು. ತೇರದಾಳ ಮತಕ್ಷೇತ್ರದ ವ್ಯಾಪ್ತಿಯಲ್ಲಿ ರಸ್ತೆಗಳ ಸುಧಾರಣೆಗೆ ಹೆಚ್ಚು ಗಮನ ನೀಡಬೇಕು. ಕಾಮಗಾರಿಗಳನ್ನು ಆರಂಭ ಮಾಡದ ಗುತ್ತಿಗೆದಾರರಿಗೆ ನೋಟಿಸ್ ನೀಡಿ ಪುನಃ ಟೆಂಡರ್ ಮಾಡುವಂತೆ ತಿಳಿಸಿದರು.
ಸಭೆಯಲ್ಲಿ ಜಮಖಂಡಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಜಿ.ಎಚ್.ಗಲಗಲಿ ಮಾತನಾಡಿ, ರಬಕವಿ ಬನಹಟ್ಟಿ ತಾಲ್ಲೂಕಿನಲ್ಲಿ ಶೇ. ೩೩ ಮಕ್ಕಳಿಗೆ ಮಿದುಳು ಜ್ವರದ ವ್ಯಾಕ್ಸಿನ್ ನೀಡಲಾಗಿದೆ. ಇದುವರೆಗೆ ತಾಲ್ಲೂಕಿನಲ್ಲಿ ಯಾವುದೆ ಪ್ರಕರಣಳು ಪತ್ತೆಯಾಗಿಲ್ಲ. ತಾಲ್ಲೂಕಿನಲ್ಲಿ 11 ಸಂಶಾಯಸ್ಪದ ಡೆಂಗ್ಯು ಪ್ರಕರಣಗಳು ಪತ್ತೆಯಾಗಿದ್ದು, ಐದು ಖಚಿತಗೊಂಡಿವೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ಬಸನ್ನವರ ಮಾತನಾಡಿ, ವಿವೇಕ ಯೋಜನೆ ಅಡಿಯಲ್ಲಿ ರಬಕವಿ ಬನಹಟ್ಟಿ ತಾಲ್ಲೂಕಿನ 18 ಶಾಲೆಗಳಿಗೆ 30 ಕೋಣೆಗಳು ಮಂಜೂರಾಗಿವೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗಾಗಿ ತಾಲ್ಲೂಕಿನಲ್ಲಿ ವಿಶೇಷ ಗಮನ ನೀಡಲಾಗುತ್ತಿದೆ ಎಂದರು.
ಅಧಿಕಾರಿಗಳು ಶಾಸಕರ ಸಮಯವನ್ನು ತೆಗೆದುಕೊಂಡು ಅವರ ಕಾರ್ಯಾಲಯಕ್ಕೆ ಬಂದು ಇಲಾಖೆಗಳ ಪ್ರಗತಿಯ ಕುರಿತು ಚರ್ಚೆ ಮಾಡಬೇಕು ಎಂದು ಶಾಸಕ ಸಿದ್ದು ಸವದಿ ಅಧಿಕಾರಿಗಳಿಗೆ ತಿಳಿಸಿದರು.
ವೇದಿಕೆಯ ಮೇಲೆ ತಾಲ್ಲೂಕ ಪಂಚಾಯ್ತಿ ಆಡಳಿತಾಧಿಕಾರಿ ಎಂ.ಜಿ.ಕೊಣ್ಣೂರ, ಕಾರ್ಯ ನಿರ್ವಾಹಕ ಅಧಿಕಾರಿ ಸಂಜೀವ ಹಿಪ್ಪರಗಿ, ತಹಶೀಲ್ದಾರ್ ಎಸ್.ಬಿ.ಇಂಗಳೆ ಇದ್ದರು.
ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಅಂಜನಾದ್ರಿ ಪೂಜಾ ವಿಚಾರದಲ್ಲಿ ಇಲಾಖೆ ಅಧಿಕಾರಿಗಳಿಂದ ಆದೇಶ ಉಲ್ಲಂಘನೆ: ಕೇಸ್ ದಾಖಲಿಸಲು ನಿರ್ಧಾರ