ಬಾಗಲಕೋಟೆ: ಸರ್ಕಾರಿ ಶಾಲೆ, ಕಾಲೇಜು ಅಂದರೆ ಮೂಗು ಮುರಿಯುವವರೇ ಹೆಚ್ಚು. ಜತೆಗೆ ಮೂಲಭೂತ ಸೌಲಭ್ಯಗಳ ಕೊರತೆಯೂ ಬೆಟ್ಟದಷ್ಟು. ಪ್ರಾಚಾರ್ಯರು, ಶಿಕ್ಷಕರು ಮನಸ್ಸು ಮಾಡಿದರೆ ಸರ್ಕಾರಿ ಕಾಲೇಜುಗಳನ್ನೂ ಸಮಾಜಮುಖಿಯಾಗಿ ಗಮನ ಸೆಳೆಯುವಂತೆ ಮಾಡಬಹುದು ಎಂಬುದಕ್ಕೆ ಬಾಗಲಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಾಕ್ಷಿಯಾಗಿದೆ.
ನವನಗರದ ಸೆಕ್ಟರ್ ನಂ. 43ರಲ್ಲಿ ಇರುವ ಪ್ರಥಮ ದರ್ಜೆ ಕಾಲೇಜು, ಕಳೆದ 2006ರಲ್ಲೇ ಆರಂಭಗೊಂಡಿದೆ. ಆದರೆ, ಈ ವರೆಗೆ ಯುಜಿಸಿ ನ್ಯಾಕ್‌ಪೀರ್ ಕಮಿಟಿಯಿಂದ ಮಾನ್ಯತೆ ಪಡೆಯಲು ಸಾಧ್ಯವಾಗಿರಲಿಲ್ಲ. ಆ ಪ್ರಯತ್ನವೂ ನಡೆದಿರಲಿಲ್ಲ. ಸತತ 12 ವರ್ಷಗಳ ಬಳಿಕ, ಇಲ್ಲಿನ ಪ್ರಾಚಾರ್ಯರು, ಪ್ರಾಧ್ಯಾಪಕರ ಶ್ರಮದಿಂದ ಕಾಲೇಜು ಗಮನ ಸೆಳೆಯುತ್ತಿದ್ದು, ಆನ್‌ಲೈನ್ ಅಡಿ ನ್ಯಾಕ್‌ಪೀರ್ ಕಮಿಟಿ ಪರಿಶೀಲನೆ ಪಟ್ಟಿಗೆ ಆಯ್ಕೆಗೊಂಡಿದೆ.
ಈ ಕಾಲೇಜಿನಲ್ಲಿ ಪ್ರಸ್ತುತ 304 ಜನ ವಿದ್ಯಾರ್ಥಿನಿಯರು, 486 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬಿ.ಎ, ಬಿ.ಕಾಂ ಹಾಗೂ ಬಿಎಸ್ಸಿ ಪದವಿ ಶಿಕ್ಷಣ ವ್ಯವಸ್ಥೆ ಇಲ್ಲಿದ್ದು, 20 ಜನ ಕಾಯಂ ಪ್ರಾಧ್ಯಾಪಕರು ಹಾಗೂ 40 ಜನ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಮೊಟ್ಟ ಮೊದಲ ಕಾಲೇಜ್: ಸರ್ಕಾರಿ ಅಥವಾ ಖಾಸಗಿ ಕಾಲೇಜುಗಳು ಯುಜಿಸಿ ಮಾನ್ಯತೆ ಪಡೆಯಲು ಕಡ್ಡಾಯವಾಗಿ ನ್ಯಾಕ್‌ಪೀರ್ ಕಮಿಟಿ ವರದಿ ಕೊಡಲೇಬೇಕು. ನ್ಯಾಕ್‌ಪೀರ್ ಕಮಿಟಿ, ಆಯಾ ಕಾಲೇಜುಗಳಿಗೆ ಭೇಟಿ ನೀಡಿ, ಪರಿಶೀಲನೆ ವರದಿ ಕೊಡಬೇಕಾದರೆ, ಆಯಾ ಕಾಲೇಜುಗಳು, ಯುಜಿಸಿಗೆ ವಿವರಣೆ ಸಲ್ಲಿಸಬೇಕು. ಅದು ಆಫ್‌ಲೈನ್ ಮತ್ತು ಆನ್‌ಲೈನ್ ಎಂಬ ಎರಡು ರೀತಿಯಲ್ಲಿದ್ದು, ಆನ್‌ಲೈನ್‌ನಲ್ಲಿ ವಿವರ ಸಲ್ಲಿಕೆಗೊಳ್ಳುವುದು ತುಂಬಾ ಕಷ್ಟ. ಆದರೆ, ಬಾಗಲಕೋಟೆಯ ಸರ್ಕಾರಿ ಪದವಿ ಕಾಲೇಜು, ಆನ್‌ಲೈನ್‌ನಲ್ಲೇ ನ್ಯಾಕ್‌ಪೀರ್ ಕಮಿಟಿ ಭೇಟಿಗೆ ಆಯ್ಕೆಗೊಂಡಿದೆ.
ಜಿಲ್ಲೆಯಲ್ಲಿ 16 ಪದವಿ ಕಾಲೇಜುಗಳಿದ್ದು, ಅದರಲ್ಲಿ ನವನಗರದ ಸರ್ಕಾರಿ ಪದವಿ ಕಾಲೇಜು ಮಾತ್ರ ನ್ಯಾಕ್‌ಪೀರ್ ಕಮಿಟಿ ಪರಿಶೀಲನೆಗೆ ಆಯ್ಕೆಗೊಂಡಿದೆ. ಈ ತಂಡ ಕಾಲೇಜಿಗೆ ಭೇಟಿ ನೀಡಿ, ಮಾನ್ಯತೆ ನೀಡುವ ವರದಿ ನೀಡಿದ ಬಳಿಕ, ಯುಜಿಸಿಯಿಂದ ಸಾಕಷ್ಟು ಅನುದಾನ ದೊರೆಯಲಿದೆ. ನಮ್ಮ ಕಾಲೇಜು 2006ರಿಂದಲೇ ಆರಂಭಗೊಂಡಿದ್ದರೂ ನ್ಯಾಕ್‌ಪೀರ್ ಕಮಿಟಿ ಮಾನ್ಯತೆ ಪಡೆದಿಲ್ಲ. ಮೊದಲ ಬಾರಿಗೆ ಆನ್‌ಲೈನ್ ಮೂಲಕ ವಿವರಣೆ ಸಲ್ಲಿಸಿದಾಗ, ನಮ್ಮ ಕಾಲೇಜು ಆಯ್ಕೆಯಾಗಿದೆ. ಗುಣಮಟ್ಟದ ಶಿಕ್ಷಣ, ಉತ್ತಮ ವಾತಾವರಣ ಕಲ್ಪಿಸಲಾಗಿದೆ. ಬಯಲಿನಂತಿದ್ದ ಕಾಲೇಜು ಆವರಣದಲ್ಲಿ ಪರಿಸರ ಬೆಳೆಸಲು ಆದ್ಯತೆ ನೀಡಲಾಗಿದೆ ಎಂದು ಪ್ರಾಚಾರ್ಯ ಡಾ|ಅರುಣಕುಮಾರ ಗಾಳಿ ತಿಳಿಸಿದರು.
ನ್ಯಾಕ್‌ಪೀರ್ ತಂಡ ನಾಳೆ
ತೆಲಂಗಾಣದ ಮಹಾತ್ಮ ಗಾಂಧಿ ವಿವಿಯ ವಿಶ್ರಾಂತ ಕುಲಪತಿ ಡಾ|ನರಸಿಂಹರಡ್ಡಿ ಕಟ್ಟಾ, ಸದಸ್ಯ ಸಂಯೋಜನಾಧಿಕಾರಿ ಆಸ್ಸಾಂ ವಿವಿಯ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ| ರತನ ಬೋರಾನ್ ಹಾಗೂ ಸದಸ್ಯರಾಗಿ ಮಹಾರಾಷ್ಟ್ರ ರಾಜ್ಯದ ನಾಗಪುರದ ರೇಣುಕಾ ಕಾಲೇಜಿನ ಪ್ರಾಚಾರ್ಯೆ ಡಾ| ಜ್ಯೋತಿ ಪಾಟೀಲ ಅವರು ನ್ಯಾಕ್‌ಪೀರ್ ತಂಡದಲ್ಲಿದ್ದಾರೆ. ಈ ಮೂವರ ತಂಡ, ಫೆ. 25ಮತ್ತು 26ರಂದು ಮೊಟ್ಟ ಮೊದಲ ಬಾರಿಗೆ ಸರ್ಕಾರಿ ಪದವಿ ಕಾಲೇಜಿಗೆ ಭೇಟಿ ನೀಡಿ, ಕಾಲೇಜಿನ ಆಡಳಿತ ವ್ಯವಸ್ಥೆ, ಸೌಲಭ್ಯ, ಕಲಿಕಾ ಗುಣಮಟ್ಟ ಪರಿಶೀಲನೆ ನಡೆಸಲಿದೆ.
ಕೆಲಸಕ್ಕೆ ನಿಲ್ಲುವ ಪ್ರಾಚಾರ್ಯ- ಪ್ರಾಧ್ಯಾಪಕರು
ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ|ಅರುಣಕುಮಾರ ಗಾಳಿ ಹಾಗೂ ಇಲ್ಲಿನ ಪ್ರಾಧ್ಯಾಪಕರು ತರಗತಿ ನಡೆಸುವ ಮುಂಚೆ ಮತ್ತು ಮಧ್ಯಾಹ್ನದ ಬಳಿಕ ಕಾಲೇಜು ಆವರಣದಲ್ಲಿ ವಿವಿಧ ಚಟುವಟಿಕೆ ಕೈಗೊಳ್ಳುತ್ತಾರೆ. ಸಸಿ ನೆಡುವಿಕೆ, ಆವುಗಳ ಆರೈಕೆಯಿಂದ ಹಿಡಿದು ಹಲವು ಕೆಲಸ ಅವರೇ ಕಾಳಜಿಪೂರ್ವಕ ಮಾಡುತ್ತಾರೆ.