Advertisement

ಮುಚಖಂಡಿ ಕೆರೆ ಕಂಡವರ ಪಾಲು!

09:23 AM Feb 08, 2019 | |

ಬಾಗಲಕೋಟೆ: ಬ್ರಿಟಿಷರ ಕಾಲದಲ್ಲಿ ಅದ್ಬುತ ನಿರ್ಮಾಣದ ಮೂಲಕ ಗಮನ ಸೆಳೆಯುವ ಇಲ್ಲಿನ ಮುಚಖಂಡಿ ಕೆರೆಯ ಫಲವತ್ತಾದ ಮಣ್ಣು ಕಂಡವರ ಪಾಲಾಗುತ್ತಿದೆ. ಸರ್ಕಾರಿ ಕೆರೆಯ ಮಣ್ಣನ್ನು ಕೆಲವರು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುತ್ತಿದ್ದರೂ ಜಿಲ್ಲಾಡಳಿತ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂಬ ಅಸಮಾಧಾನ ರೈತ ವಲಯದಿಂದ ಕೇಳಿ ಬಂದಿದೆ.

Advertisement

ಹೌದು, ಬ್ರಿಟಿಷರು 1888ರಲ್ಲಿ ನಿರ್ಮಿಸಿದ ಈ ಕೆರೆ ಇಂದಿಗೂ ಭದ್ರವಾಗಿದೆ. ಸುಮಾರು 782 ಎಕರೆ ವಿಸ್ತಾರದ ಈ ಕೆರೆ ಸಾಕಷ್ಟು ಒತ್ತುವರಿಯಾಗಿದೆ ಎಂಬ ಆರೋಪವೂ ಒಂದೆಡೆ ಇದೆ. ಈ ಕೆರೆಗೆ ಆಲಮಟ್ಟಿ ಹಿನ್ನೀರು ತುಂಬಿಸಲು 12.50 ಕೋಟಿ ಅನುದಾನ ಸಣ್ಣ ನೀರಾವರಿ ಇಲಾಖೆ ಖರ್ಚು ಮಾಡಿದೆ. ಆದರೆ, ಈ ಕೆರೆಯಂಗಳ ಸಂರಕ್ಷಣೆ ಮಾಡಬೇಕಾದ ಜಿಲ್ಲಾ ಮಟ್ಟದ ಕೆರೆಗಳ ಸಂರಕ್ಷಣೆ-ಅಭಿವೃದ್ಧಿ ಮತ್ತು ನಿರ್ವಹಣೆ ಸಮಿತಿ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪ ಸಾಮಾನ್ಯವಾಗಿದೆ.

ಕೆರೆಯ ಮಣ್ಣಿಗೆ ಭಾರಿ ಬೇಡಿಕೆ: ಮುಚಖಂಡಿ ಕೆರೆಯಲ್ಲಿ ಫಲವತ್ತಾದ ಮಣ್ಣಿದೆ. ಈ ಮಣ್ಣಿಗೆ ರೈತರಿಂದ ಹಿಡಿದು, ಉದ್ಯಮಿಗಳ ಬೇಡಿಕೆಯೂ ಹೆಚ್ಚಿದೆ. ರೈತರು, ತಮ್ಮ ಸ್ವಂತ ಟ್ರ್ಯಾಕ್ಟರ್‌ನೊಂದಿಗೆ ಮಣ್ಣು ತೆಗೆದುಕೊಂಡು ಹೋಗಲು ಬಂದರೆ ಅವಕಾಶ ಸಿಗುತ್ತಿಲ್ಲ. ಅದೇ ಪ್ರಭಾವಿಗಳು ಹಗಲು-ರಾತ್ರಿ ಎನ್ನದೇ ಸಾವಿರಾರು ಲೋಡ್‌ ಮಣ್ಣನ್ನು ತೆಗೆದು, ಲಕ್ಷಾಂತರ ಮೊತ್ತಕ್ಕೆ ಮಾರಾಟ ಮಾಡಿದರೂ ಕೇಳುವವರಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.

ಮುಚಖಂಡಿ ಕೆರೆಯ ಸರ್ವೇ ನಂ. 202/3, 202/6 ಮತ್ತು 202/7ರ ಪ್ರದೇಶದಲ್ಲಿ ನಿತ್ಯವೂ ನೂರಾರು ಟಿಪ್ಪರ್‌, ಟ್ರ್ಯಾಕ್ಟರ್‌ ಮೂಲಕ ಮಣ್ಣು ಸಾಗಿಸಲಾಗುತ್ತಿದೆ. ಈ ಮಣ್ಣು ಸಾಗಿಸುವುದರಿಂದ ಕೆರೆಯ ಹೂಳು ಕಡಿಮೆಯಾಗುತ್ತದೆ ಎಂಬ ವಾದವೂ ಒಂದೆಡೆ ಕೇಳಿ ಬರುತ್ತದೆ. ಆದರೆ, ಇಲ್ಲಿ ಸಮಸ್ಯೆ ಬಂದಿರೋದು ಅಲ್ಲದಲ್ಲ. ಕೆರೆಯ ಮಣ್ಣು, ರೈತರ ಹೊಲ ಸೇರುತ್ತಿಲ್ಲ. ಬದಲಾಗಿ ಇಟ್ಟಿಗೆ ಬಟ್ಟಿ ತಯಾರಿಕೆ ಕೇಂದ್ರಗಳ ಪಾಲಾಗುತ್ತಿದೆ.

ಪಕ್ಕದಲ್ಲೇ ಇದ್ರೂ ಕೇಳ್ಳೋರಿಲ್ಲ: ವಿಶೇಷ ಅಂದರೆ, ಈ ಮುಚಖಂಡಿ ಕೆರೆಯ ಪ್ರದೇಶ ಜಿಲ್ಲಾಡಳಿತ ಭವನದ ಅಣತಿ ದೂರದಲ್ಲಿದೆ. ಪೊಲೀಸ್‌ ವಸತಿ ಗೃಹ, ಪೊಲೀಸ್‌ ಕ್ರೀಡಾಂಗಣ ಹೊಂದಿಕೊಂಡೇ ಕೆರೆಯ ಪ್ರದೇಶವಿದ್ದು, ನಿತ್ಯ ಟ್ರ್ಯಾಕ್ಟರ್‌, ಟಿಪ್ಪರ್‌, ಜೆಸಿಬಿಗಳ ಸದ್ದು ಪೊಲೀಸರ ಕಿವಿಗೆ ಬಿದ್ದರೂ ಕೇಳಿಯೂ ಕೇಳಿಸದಂತೆ ವರ್ತಿಸುತ್ತಾರೆ. ತಮ್ಮ ಕೆರೆಯ ಮಣ್ಣು, ಬೇರೆ ವ್ಯಕ್ತಿಗಳು, ಮಾರಾಟ ಮಾಡುತ್ತಿರುವುದು ಸಣ್ಣ ನೀರಾವರಿ ಇಲಾಖೆಯ ಗಮನಕ್ಕಿದ್ದರೂ, ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ, ಅಕ್ಕ-ಪಕ್ಕದ ರೈತರ ಆರೋಪ.

Advertisement

ಮಣ್ಣು ಮಾರಾಟ ಮಾಫಿಯಾ: ಸರ್ಕಾರಿ (ಸಣ್ಣ ನೀರಾವರಿ ಇಲಾಖೆಯ ಅಧೀನದಲ್ಲಿದೆ) ಕೆರೆಯ ಮಣ್ಣು ಮಾರಾಟ ಮಾಡಿ, ಲಕ್ಷಾಂತರ ದುಡ್ಡು ಮಾಡಿಕೊಳ್ಳುವ ಮಾಫಿಯಾ ಕಾರ್ಯ ನಿರ್ವಹಿಸುತ್ತಿದೆ. ಇದರಲ್ಲಿ ಪ್ರಭಾವಿಗಳೇ ಹೆಚ್ಚಿದ್ದಾರೆ ಎಂಬ ಆರೋಪವೂ ಇದೆ. ಆದರೆ, ಅದನ್ನು ನಿಯಂತ್ರಣದಲ್ಲಿಡುವ ದಕ್ಷತೆ ಯಾರೂ ತೋರಿಸುತ್ತಿಲ್ಲ. ಒಂದು ಲೋಡ್‌ ಮಣ್ಣನ್ನು 2ರಿಂದ 3 ಸಾವಿರ ಮೊತ್ತಕ್ಕೆ ಮಾರಾಟ ಮಾಡಲಾಗುತ್ತಿದೆ. ಅದು ಗದ್ದನಕೇರಿ ಕ್ರಾಸ್‌ ಸುತ್ತ-ಮುತ್ತ ಇರುವ ಇಟ್ಟಿಗೆ ಬಟ್ಟಿಗಳಿಗೆ ಈ ಕೆರೆಯ ಮಣ್ಣನ್ನೇ ಸಾಗಿಸಲಾಗುತ್ತಿದೆ. ಹಗಲು-ರಾತ್ರಿ ನಿತ್ಯ ಜೆಸಿಬಿ ಮೂಲಕ ಮಣ್ಣು ಎತ್ತಿಹಾಕಿ, ಟಿಪ್ಪರ್‌- ಟ್ರ್ಯಾಕ್ಟರ್‌ ವಾಹನಗಳು ಮಣ್ಣು ಸಾಗಿಸುತ್ತವೆ. ಇಟ್ಟಿಗೆ ಮಾಡಲು ಅತ್ಯಂತ ಫಲವತ್ತಾದ ಮಣ್ಣು ಇದಾಗಿದ್ದು, ಬೇಡಿಕೆಯೂ ಹೆಚ್ಚುತ್ತಿದೆ. ಹೀಗಾಗಿ ಮುಚಖಂಡಿ ಕೆರೆಯ ಮಣ್ಣು ಮಾರಾಟ ಮಾಡುವವರ ಜಾಲವೂ ಬೆಳೆಯುತ್ತಿದೆ. ಒಂದು ಅಂದಾಜಿನ ಪ್ರಕಾರ ಒಂದು ತಿಂಗಳಿಗೆ ಕನಿಷ್ಠ 10ರಿಂದ 12 ಲಕ್ಷ ಮೊತ್ತದ ಮಣ್ಣು ಮಾರಾಟ ಮಾಡಲಾಗುತ್ತಿದೆ ಎನ್ನಲಾಗಿದೆ.

ರೈತರ ವಾದವೇನು?: ಕೆರೆಯ ಮಣ್ಣು ರೈತರಾಗಲಿ, ಪ್ರಭಾವಿಗಳಾಗಲಿ ಅಥವಾ ಇನ್ಯಾರೇ ತುಂಬಿಕೊಂಡು ಹೋಗಲಿ. ಆದರೆ, ಕೆರೆಯಲ್ಲಿ ನಿರ್ದಿಷ್ಟು ವ್ಯಕ್ತಿಗಳು, ತಮ್ಮ ಜೆಸಿಬಿ, ಟಿಪ್ಪರ್‌, ಟ್ರ್ಯಾಕ್ಟರ್‌ನೊಂದಿಗೆ ಇರುತ್ತಾರೆ. ನಾವು ಯಾರೇ ನಮ್ಮ ಸ್ವಂತ ಟ್ರ್ಯಾಕ್ಟರ್‌ ತೆಗೆದುಕೊಂಡು ಹೋದರೆ, ಮಣ್ಣು ಸಾಗಿಸಲು ಬಿಡುವುದಿಲ್ಲ. ಕೆಲವರಂತೂ ತಮ್ಮ ಸ್ವಂತ ಹೊಲದಲ್ಲಿನ ಮಣ್ಣು ಕೊಟ್ಟಂತೆ ದೌರ್ಜನ್ಯ ನಡೆಸುತ್ತಾರೆ. ಈ ಕುರಿತು ಹಲವು ಬಾರಿ ಸಂಬಂಧಿಸಿದವರ ಗಮನಕ್ಕೆ ತಂದಿದ್ದೇವೆ. ಕೆಲವರ ದಬ್ಟಾಳಿಕೆ ತಡೆಯಲು ಯಾರೂ ಮುಂದಾಗುತ್ತಿಲ್ಲ ಎಂಬುದು ರೈತರ ಆಕ್ರೋಶವಾಗಿದೆ.

ಗುತ್ತಿಗೆದಾರರಿಗೂ ಆಸರೆ !
ಈ ಕೆರೆಯಂಗಳ ಹಲವು ಗುತ್ತಿಗೆದಾರರಿಗೂ ಆಸರೆಯಾಗಿದೆ. ನವನಗರ ಯೂನಿಟ್-2ರಲ್ಲಿನ ವಿವಿಧ ರಸ್ತೆ ಕಾಮಗಾರಿ, ಹೆದ್ದಾರಿ ಸಹಿತ ಹಲವು ಕಾಮಗಾರಿಗಳಿಗೆ ಈ ಕೆರೆಯ ಸುತ್ತಲಿನ ಸರ್ಕಾರಿ ಜಾಗೆಯ ಗರಸು ಸಾಗಿಸುತ್ತಾರೆ. ಇದರಿಂದ ಕೆರೆಯಂಗಳದ ಅಂದ ಹದಗೆಡುವ ಜತೆಗೆ ದೊಡ್ಡ ದೊಡ್ಡ ತಗ್ಗು ಬಿದ್ದಿವೆ. ಲಕ್ಷಾಂತರ ಲೋಡ ಗರಸು-ಮಣ್ಣು ಇಲ್ಲಿ ನಿತ್ಯ ಲೂಟಿಯಾಗುತ್ತಿದೆ ಎನ್ನಲಾಗಿದೆ.

ರೈತರಿಗೆ ಕೆರೆಯ ಮಣ್ಣು ತುಂಬಿಕೊಂಡು ಹೋಗಲು ಈ ಹಿಂದೆ ಅವಕಾಶ ಕೊಡಲಾಗಿತ್ತು. ಆದರೆ, ಯಾರೋ ಬಂದು, ಅಕ್ರಮವಾಗಿ ಮಣ್ಣು ತುಂಬಿಕೊಂಡು, ಬೇರೆಡೆ ಮಾರಾಟ ಮಾಡಲು ಅವಕಾಶವಿಲ್ಲ. ಮುಚಖಂಡಿ ಕೆರೆಯ ಮಣ್ಣು ಮಾರಾಟ ಮಾಡುತ್ತಿರುವ ಕುರಿತು ನನ್ನ ಗಮನಕ್ಕೆ ಬಂದಿರಲಿಲ್ಲ. ನಾನು ಈಚೆಗಷ್ಟೇ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದು, ಕೆರೆಗೆ ಭೇಟಿ ನೀಡಿ, ಅಕ್ರಮವಾಗಿ ಮಣ್ಣು ಮಾರಾಟ ನಡೆದಿದ್ದರೆ ಕ್ರಮ ಕೈಗೊಳ್ಳಲಾಗುವುದು.
•ಶಂಭುಲಿಂಗ ಹೆರಲಗಿ,
 ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ, ಸಣ್ಣ ನೀರಾವರಿ ಇಲಾಖೆ

ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next