ಬಾಗಲಕೋಟೆ: ನಗರಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಯನ್ನು ಬಿಟಿಡಿಎ ಅಧಿಕಾರಿಗಳು ಗಣಪತಿಯ ಲಗ್ನದಂತೆ ಮಾಡಿಟಿದ್ದಾರೆ. ಆರು ವರ್ಷವಾದರೂ ಜನರ ಬಾಯಿಗೆ ಒಂದು ಹನಿ ನೀರು ಬಿದ್ದಿಲ್ಲ. ಅಧಿಕಾರಿಗಳು ಈ ವರ್ಷ ಪೂರ್ಣಗೊಳಿಸಿ ಕುಡಿಯುವ ನೀರು ಕೊಡಲೇಬೇಕು ಎಂದು ಶಾಸಕ ಡಾ|ವೀರಣ್ಣ ಚರಂತಿಮಠ ಸೂಚನೆ ನೀಡಿದರು.
ಬೀಳಗಿ ತಾಲೂಕು ಹೆರಕಲ್ ಬಳಿ ಘಟಪ್ರಭಾ ನದಿ ಪಾತ್ರದಲ್ಲಿರುವ ಬಿಟಿಡಿಎ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಯ ಯೋಜನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳೊಂದಿಗೆ ಮಂಗಳವಾರ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನವನಗರ ಯೂನಿಟ್-1, 2 ಹಾಗೂ 3ಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆಗಾಗಿ ನಾನು ಹಿಂದೆ ಶಾಸಕನಾಗಿದ್ದ ವೇಳೆ ಬಿಟಿಡಿಎದಿಂದ ಈ ಯೋಜನೆ ಕೈಗೊಳ್ಳಲಾಗಿತ್ತು. 2013-14ನೇ ಸಾಲಿನಲ್ಲಿ ಅನುಮೋದನೆ ದೊರೆತಿದ್ದು, 2014ರಲ್ಲಿ ಕಾಮಗಾರಿ ಆರಂಭಗೊಂಡಿದೆ. 2015ರ ವೇಳೆಗೆ ಕಾಮಗಾರಿ ಪೂರ್ಣಗೊಳಿಸಿ, ನೀರು ಕೊಡಬೇಕಿತ್ತು. ಐದು ವರ್ಷ ನಾನು ಶಾಸಕನಾಗಿರಲಿಲ್ಲ. ಅಷ್ಟೊತ್ತಿಗೆ ಯೋಜನೆಯೂ ಕುಂಟಿತಗೊಂಡಿತು. 2013-14ರಲ್ಲಿ ಆರಂಭಗೊಂಡ ಯೋಜನೆ, ಈಗ 2019 ಬಂದರೂ ಮುಗಿದಿಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.
72 ಕೋಟಿ ಯೋಜನೆಗೆ 92 ಕೋಟಿ ಸೇತುವೆ: ಮುಂದಾಲೋಚನೆ ಇಲ್ಲದ ಅಧಿಕಾರಿಗಳ ಬೇಜವಾಬ್ದಾರಿಯಿಂದ 72 ಕೋಟಿ ಮೊತ್ತದ ಈ ಯೋಜನೆಗೆ ಅನಗವಾಡಿ ಸೇತುವೆ ಬಳಿ ಪೈಪ್‌ಲೈನ್ ಅಳವಡಿಸಲು ಮತ್ತೂಂದು ಸೇತುವೆ ನಿರ್ಮಾಣಕ್ಕೆ 92 ಕೋಟಿ ಮೊತ್ತದ ಯೋಜನೆ ಸಿದ್ಧಪಡಿಸಿದ್ದಾರೆ. ಇಷ್ಟೊಂದು ದುಂದುವೆಚ್ಚದ ಯೋಜನೆ ಮಾಡಲು ನಾನು ಇರುವವರೆಗೂ ಬಿಡುವುದಿಲ್ಲ. ಸಮುದ್ರದ ಆಳದಲ್ಲಿ ಪೈಪ್‌ಲೈನ್ ಅಳವಡಿಸುವ ತಂತ್ರಜ್ಞಾನ ಬೆಳೆದಿದೆ. ಆದರೆ, ಘಟಪ್ರಭಾ ನದಿಯಲ್ಲಿ ಪೈಲ್ ಹಾಕಿದರೆ ತಾಂತ್ರಿಕ ತೊಂದರೆಯಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದು ಕೇಳಿ ನನಗೇ ಶಾಕ್ ಆಗುತ್ತಿದೆ ಎಂದರು.
ಘಟಪ್ರಭಾ ನದಿ ಬಳಿ 10 ಕೋಟಿ ವೆಚ್ಚದಲ್ಲಿ ಪೈಪ್‌ಲೈನ್‌ಗೆ ಕಾಂಕ್ರಿಟ್ ವಾಲ್ ಹಾಕಿ, ಬಳಿಕ ಏರ್ ವಾಲ್ ಬಿಡಬೇಕು. ಇಲ್ಲವೇ ಹೆರಕಲ್ದಿಂದ ಆನದಿನ್ನಿ ಬ್ಯಾರೇಜ್ ವರೆಗೆ ಈ ನೀರು ಹರಿಸಿ, ಅಲ್ಲಿಂದ ಈಗಿರುವ ಜಾಕವೆಲ್ ಮೂಲಕ ನಗರಕ್ಕೆ ನೀರು ಕೊಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಅಲ್ಲದೇ ಮೂಲ ಯೋಜನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ 4.90 ಕೋಟಿ ಮೊತ್ತದ ಯೋಜನೆ ಆರಂಭಗೊಂಡಿದ್ದು, ಶೀಘ್ರ ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ. ಅಧಿಕಾರಿಗಳು ಪುನಃ ವಿಳಂಬ ಮಾಡಿದರೆ ನಾನು ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಒಪ್ಪಿಕೊಂಡ ಅಧಿಕಾರಿಗಳು: ಹೆರಕಲ್ದಿಂದ ಬಾಗಲಕೋಟೆಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆ ವಿಳಂಬವಾಗಿರುವುದನ್ನು ಸ್ವತಃ ಬಿಟಿಡಿಎ ಅಧಿಕಾರಿಗಳು ಒಪ್ಪಿಕೊಂಡರು. ಶಾಸಕರೊಂದಿಗೆ ಆಗಮಿಸಿದ್ದ ಬಿಟಿಡಿಎ ಮುಖ್ಯ ಎಂಜಿನಿಯರ್ ಅಶೋಕ ವಾಸನದ, ಎಇಇ ಮೋಹನ ಹಲಗತ್ತಿ, ಸೂಪರಿಡೆಂಟ್ ಎಂಜಿನಿಯರ್ ಕೆ.ಎಸ್. ಜಂಬಾಳೆ ಮುಂತಾದವರು, ಯೋಜನೆ ವಿಳಂಬಕ್ಕೆ ಹಲವು ಕಾರಣಗಳಿವೆ. ಸಧ್ಯ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿ ಚಾಲ್ತಿಯಿದ್ದು, ಹೆರಕಲ್ದಿಂದ ಆನದಿನ್ನಿ ಬ್ಯಾರೇಜ್ ವರೆಗೆ ನದಿಯಲ್ಲಿ ನೀರು ತುಂಬಿಸಿಕೊಂಡು, ಅಲ್ಲಿಂದ ಈಗಾಗಲೇ ಚಾಲ್ತಿ ಇರುವ ಯೋಜನೆಯಿಂದ ನೀರು ಕೊಡಲಾಗುವುದು. ನವನಗರ ಬೆಳೆದಂತೆ ನೀರಿನ ಅವಶ್ಯಕತೆ ಹೆಚ್ಚಾಗಲಿದ್ದು, ಆಗ ಅನಗವಾಡಿ ಬಳಿ ಸೇತುವೆ ನಿರ್ಮಿಸಿ, ಪೈಪ್‌ಲೈನ್ ಅಳವಡಿಸುವ ಯೋಜನೆ ಕೈಗೊಳ್ಳುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಿಟಿಡಿಎ ಮಾಜಿ ಅಧ್ಯಕ್ಷ ಸಿ.ವಿ. ಕೋಟಿ ಸೇರಿದಂತೆ ಬಿಟಿಡಿಎ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ಹೆರಕಲ್ ಯೋಜನೆ ಕುರಿತು ಉದಯವಾಣಿ ಕಳೆದ ತಿಂಗಳು ಐದು ದಿನಗಳ ವಿಶೇಷ ಸರಣಿ ವರದಿ ಪ್ರಕಟಿಸಿತ್ತು. ಬಳಿಕ ಬಿಟಿಡಿಎ ಅಧಿಕಾರಿಗಳೂ ಎಚ್ಚೆತ್ತುಕೊಂಡು, ವಿದ್ಯುತ್ ಸಂಪರ್ಕ ಕಾಮಗಾರಿ ತೀವ್ರಗೊಳಿಸಿದ್ದರು. ಅಲ್ಲದೇ ಈ ಯೋಜನೆ ಅನುಷ್ಠಾನಕ್ಕೆ ಮೂಲ ಕಾರಣರಾದ ಶಾಸಕ ಚರಂತಿಮಠ ಕೂಡ, ಕುಡಿಯುವ ನೀರಿನ ಯೋಜನೆಯೊಂದು ಆರು ವರ್ಷಗಳ ಕಾಲ ಪೂರ್ಣಗೊಳ್ಳದಕ್ಕೆ ಬೇಸರ ವ್ಯಕ್ತಪಡಿಸಿದರು. ಇಡೀ ಯೋಜನೆಯ ಸಾಧಕ-ಬಾಧಕ ಹಾಗೂ ವಾಸ್ತವ ಅರಿಯಲು ಪತ್ರಕರ್ತರು ಹಾಗೂ ಬಿಟಿಡಿಎ ಅಧಿಕಾರಿಗಳೊಂದಿಗೆ ಮಂಗಳವಾರ ಯೋಜನಾ ಸ್ಥಳಕ್ಕೆ ಭೇಟಿ ನೀಡಿದರು.