ವರದಿ: ಬಿ.ಟಿ. ಪತ್ತಾರ
ತೇರದಾಳ: ಕಬ್ಬು ಬೆಳೆ ಜತೆ ಅಂತರ ಬೆಳೆಯಾಗಿ ಚಂಡು ಹೂವು ಬೆಳೆದ ಸಸಾಲಟ್ಟಿ ಗ್ರಾಮದ ರೈತ ಹನಮಂತ ಸಲಬನ್ನವರ ಇತರರಿಗೆ ಮಾದರಿಯಾಗಿದ್ದಾರೆ. ಒಂದು ಎಕರೆ ಏಳು ಗುಂಟೆ ಜಮೀನಿನಲ್ಲಿ ಕಬ್ಬು ಬೆಳೆದಿರುವ ಹನಮಂತ ಸಲಬನ್ನವರ ಅಂತರ ಬೆಳೆಯಾಗಿ ಚಂಡು ಹೂವು ಹಚ್ಚಿದ್ದು, ಅದರಿಂದ ಸಹಸ್ರಾರು ರೂಪಾಯಿ ಆದಾಯ ಹೊಂದುವ ಮೂಲಕ ಕಬ್ಬು ಬೆಳೆ ಬೆಳೆಯಲು ತಗಲುವ ವೆಚ್ಚವನ್ನು ಅಂತರ ಬೆಳೆಯಾದ ಚಂಡು ಹೂವಿನಲ್ಲಿ ಸರಿದೂಗಿಸಿಕೊಂಡಿದ್ದಾರೆ.
ತಿಪಟೂರಿನ ಎವಿಟಿ ಕಂಪನಿಯೊಂದಿಗೆ ಒಡಬಂಡಿಕೆ ಮಾಡಿಕೊಂಡ ಹನಮಂತ ಸಲಬನ್ನವರ, ಎವಿಟಿ ಅವರಿಂದ ಚಂಡು ಹೂವು ಹಾಗೂ ಅದಕ್ಕೆ ಬೇಕಾಗುವ ಔಷಧಿ ಪಡೆದಿದ್ದಾರೆ. ಚಂಡು ಹೂವು ಫಸಲು ಬಂದ ಬಳಿಕ ಅದೇ ಕಂಪನಿಯವರು ಸಸಾಲಟ್ಟಿ ಗ್ರಾಮಕ್ಕೆ ಬಂದು ಹೂವು ತೆಗೆದುಕೊಂಡು ಹೋಗುವ ಬಗ್ಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಅದರಂತೆ ಕಳೆದ ಮೂರು ತಿಂಗಳ ಹಿಂದೆ ಚಂಡು ಹೂ ಹಚ್ಚಿದ ಹನಮಂತ, 4 ಅಡಿ 4 ಇಂಚಿಗೆ ಸಾಲಿನಿಂದ ಸಾಲಿಗೆ ಚಂಡು ಹೂವು ಬೀಜ ಹಚ್ಚಿದ್ದಾರೆ. ಬಳಿಕ ಒಂದು ಬಾರಿ ಔಷಧಿ ಸಿಂಪಡಿಸುವ ಕೆಲಸ ಮಾಡಿದ್ದಾರೆ. ಜತೆಗೆ ಮಗ್ಗಿ ಜಾಸ್ತಿ ಆಗುವುದು, ಹೂವು ಅರಳುವುದರ ಬಗ್ಗೆ ಔಷಧಿ ನೀಡಿದ್ದಾರೆ.
ಬೆಳೆಯ ನಡುವೆ ಕಸ-ಕಳೆ ಕೂಡ ಬೆಳೆದಿಲ್ಲ. ಇದರಿಂದ ಹೆಚ್ಚಿನ ಖರ್ಚು ಹನಮಂತ ಅವರಿಗೆ ತಗುಲಲಿಲ್ಲ. 7 ಟನ್ ಹೂ-ಚಂಡು ಹೂವು ಕೈಗೆ ಬಂದಿದೆ. ಇದುವರೆಗೆ 5 ಟನ್ ಹೂ ಬೆಳೆ ಬಂದಿದೆ. ಇನ್ನೂ ಎರಡು ಟನ್‌ದಷ್ಟು ಬೆಳೆ ಬರುವ ನಿರೀಕ್ಷೆ ಹೊಂದಿದ್ದಾರೆ. ಬೀಜ ವಿತರಿಸಿದ ತಿಪಟೂರಿನ ಎವಿಟಿ ಕಂಪನಿಯವರೇ ಸಸಾಲಟ್ಟಿಗೆ ಬಂದು ಪ್ರತಿ ಟನ್‌ಗೆ ಹತ್ತು ಸಾವಿರ ದರ ನಿಗದಿಗೊಳಿಸಿ ಅವರೇ ಖರೀದಿಸಿದ್ದಾರೆ. ಜತೆಗೆ ಸಾರಿಗೆ ಬಾಡಿಗೆ ಕೂಡ ಎವಿಟಿ ಕಂಪನಿಯವರೇ ಭರಿಸಿಕೊಂಡಿದ್ದಾರೆ. ಇದರಿಂದ ಇದುವರೆಗೆ ಐದು ಟನ್ ಹೂವು ಪಡೆದಿರುವ ಎವಿಟಿ, ಹನಮಂತ ಸಲಬನ್ನವರ ಅವರಿಗೆ 50 ಸಾವಿರ ಹಣ ನೀಡಿದ್ದಾರೆ. ಇನ್ನೂ 2 ಟನ್ ಬೆಳೆ ಬರುವ ನಿರೀಕ್ಷೆ ಇದ್ದು, ಅದರಿಂದ 20 ಸಾವಿರ ರೂ. ಬರುತ್ತದೆ. ಒಟ್ಟು 70 ಸಾವಿರ ರೂ.ಗಳ ಆದಾಯ ಪೈಕಿ ಹೂವು ಕೀಳಲು ಹನಮಂತ ಅವರು ಅಂದಾಜು ಹತ್ತು ಸಾವಿರ ಹಣ ನೀಡಿದ್ದು, ಇದರಿಂದ ಯಾವುದೇ ಖರ್ಚು ಇಲ್ಲದೇ 60 ಸಾವಿರ ಲಾಭ ಪಡೆದಿದ್ದಾರೆ.
ಒಂದು ಬೆಳೆಯ ಜತೆಗೆ ಅಂತರ ಬೆಳೆ ಬೆಳೆಯಲು ಹೊಂದಾಣಿಕೆ (ಒಡಬಂಡಿಕೆ) ವ್ಯವಸಾಯ ಮಾಡಿಕೊಳ್ಳುವ ಮೂಲಕ ಮೂಲ ಬೆಳೆ ಬಿತ್ತನೆ ಖರ್ಚು ನೀಗಿಸಿಕೊಳ್ಳುವ ಹೊಸ ಪ್ರಯೋಗ ರೈತರಿಗೆ ಹೊಸ ಆಸೆ ಮೂಡಿಸಿದೆ.