ವರದಿ : ಶ್ರೀಶೈಲ ಕೆ. ಬಿರಾದಾರ
ಬಾಗಲಕೋಟೆ: ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವ ಕಾಲವೊಂದಿತ್ತು. ಆದರೆ, ಕೊರೊನಾ ಮೊದಲ ಅಲೆ ಮತ್ತು ಎರಡನೇ ಅಲೆ ಕಾಲಿಟ್ಟಿದ್ದೇ ತಡ, ಬಡವರು-ಶ್ರೀಮಂತರೆನ್ನದೇ ಸರ್ಕಾರಿ ಆಸ್ಪತ್ರೆಯನ್ನೇ ಸ್ಮರಿಸುತ್ತಿದ್ದಾರೆ. ಸದ್ಯ ಇಡೀ ಜಿಲ್ಲೆಯ ಏಕೈಕ ದೊಡ್ಡ ಸರ್ಕಾರಿ ಆಸ್ಪತ್ರೆ ಎಂಬ ಖ್ಯಾತಿ ಪಡೆದ ಜಿಲ್ಲಾ ಸರ್ಕಾರಿ ಆಸ್ಪತ್ರೆ ಕೊರೊನಾ ಸಂಕಷ್ಟದ ಕಾಲದಲ್ಲಿ ಸಾವಿರಾರು ಜನರಿಗೆ ಆಪತ್ಭಾಂದವ ಆಗಿದೆ.
ಹೌದು. ಸದ್ಯ ಜಿಲ್ಲಾಸ್ಪತ್ರೆಗೆ ಎಲ್ಲಿಲ್ಲದ ಬೇಡಿಕೆ. ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ಶ್ರೀಮಂತರು, ಗಣ್ಯರು, ದೊಡ್ಡವರು, ಸಣ್ಣವರು ಹೀಗೆ ಪ್ರತಿಯೊಬ್ಬರೂ ಜಿಲ್ಲಾಸ್ಪತ್ರೆಗೆ ಕರೆ ಮಾಡಿ, ನಮಗೊಂದು ಬೆಡ್ ವ್ಯವಸ್ಥೆ ಮಾಡಿ ಎಂದು ಕೇಳಿಕೊಳ್ಳುವ ಪ್ರಸಂಗ ಬಂದಿದೆ. ಅಷ್ಟೇ ವಿಧೇಯತೆಯಿಂದ ಜಿಲ್ಲಾಸ್ಪತ್ರೆಯ ವೈದ್ಯರು, ನರ್ಸ್‌ಗಳು, ಅಧಿಕಾರಿಗಳು, ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಹಗಲು-ರಾತ್ರಿ ಎನ್ನದೇ ಶ್ರಮಿಸುತ್ತಿದ್ದಾರೆ.
ಸಕಲ ಸೌಲಭ್ಯ: ಜಿಲ್ಲೆಗೆ ಕಳೆದ ಮಾರ್ಚ್ 16ರಿಂದ ಕೊರೊನಾ 2ನೇ ಅಲೆ ಕಾಲಿಟ್ಟಿದ್ದು, ಅಂದಿನಿಂದ ಇಡೀ ಜಿಲ್ಲಾ ಆಸ್ಪತ್ರೆಯನ್ನು ಕೊರೊನಾ ಆಸ್ಪತ್ರೆಯನ್ನಾಗಿ 2ನೇ ಬಾರಿ ಪರಿವರ್ತಿಸಲಾಗಿದೆ. ಕಳೆದ ವರ್ಷ ಕೊರೊನಾ ಮೊದಲ ಅಲೆ ಕಾಲಿಟ್ಟ ಬಳಿಕ ಜಿಲ್ಲಾಸ್ಪತ್ರೆಯ ಸೌಲಭ್ಯ, ವ್ಯವಸ್ಥೆಗಳಲ್ಲೂ ಮಹತ್ವದ ಬದಲಾವಣೆಗಳಾಗಿವೆ. ವೈದ್ಯರ ಕೊರತೆ, ಆಕ್ಸಿಜನ್ ಬೆಡ್, ಐಸಿಯು ಬೆಡ್, ವೆಂಟಿಲೇಟರ್ ಎಲ್ಲವೂ ದ್ವಿಗುಣಗೊಂಡಿವೆ. ಹೀಗಾಗಿ ಸೌಲಭ್ಯ ಒದಗಿಸುವಲ್ಲಿ ಜಿಲ್ಲಾಸ್ಪತ್ರೆ, ಯಾವ ಖಾಸಗಿ ಆಸ್ಪತ್ರೆಗೂ ಹಿಂದೆ ಬಿದ್ದಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಒಟ್ಟು 350 ಬೆಡ್‌ಗಳಿದ್ದು, ಅದರಲ್ಲಿ 40 ಐಸಿಯು (ವೆಂಟಿಲೇಟರ್ ಸಹಿತ) ಬೆಡ್ ಗಳಿವೆ. 240 ಆಕ್ಸಿಜನ್ ಬೆಡ್‌ಗಳಿದ್ದು, ಇನ್ನುಳಿದ ಸಾಮಾನ್ಯ ಬೆಡ್‌ಗಳಿವೆ.
ನೀಗಿದ ಆಕ್ಸಿಜನ್ ಕೊರತೆ ಕೊರತೆ: ಜಿಲ್ಲಾಸ್ಪತ್ರೆಗೆ ನಿತ್ಯವೂ 3 ಕೆಎಲ್ ಆಕ್ಸಿಜನ್ ಅಗತ್ಯವಿದ್ದು, ಕಳೆದ 15 ದಿನಗಳ ಹಿಂದೆ ನಿತ್ಯ 1.50 ಕೆ.ಎಲ್‌ವರೆಗೆ ಮಾತ್ರ ಪೂರೈಕೆಯಾಗುತ್ತಿತ್ತು. ಆಗ ಬಿವಿವಿ ಸಂಘದ ಕಾರ್ಯಾಧ್ಯಕ್ಷರೂ ಆಗಿರುವ ಬಾಗಲಕೋಟೆ ಶಾಸಕ ಡಾ|ವೀರಣ್ಣ ಚರಂತಿಮಠ ತಮ್ಮ ಕುಮಾರೇಶ್ವರ ಆಸ್ಪತ್ರೆಗೆ ಬಂದಿದ್ದ 1.50 ಟನ್ ಆಕ್ಸಿಜನ್ ಅನ್ನು ಜಿಲ್ಲಾಸ್ಪತ್ರೆಗೆ ನೀಡುವ ಮೂಲಕ ಆಕ್ಸಿಜನ್ ಕೊರತೆ ನೀಗಿಸಿದ್ದರು. ಸದ್ಯ ಕಳೆದ 15 ದಿನಗಳಿಂದ ನಿತ್ಯ 13 ಕೆ.ಎಲ್ ಆಕ್ಸಿಜನ್ ಪೂರೈಕೆಯಾಗುತ್ತಿದ್ದು, ಮೊದಲು ಜಿಲ್ಲಾಸ್ಪತ್ರೆಗೆ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ ಜಿಲ್ಲಾಸ್ಪತ್ರೆಗೆ ಸದ್ಯಕ್ಕೆ ಆಕ್ಸಿಜನ್ ಕೊರತೆ ಇಲ್ಲ.
ಹಗಲಿರುಳು ಶ್ರಮಿಸುವ ವೈದ್ಯರ ತಂಡ: ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ|ಪ್ರಕಾಶ ಬಿರಾದಾರ ನೇತೃತ್ವದ ಜಿಲ್ಲಾಸ್ಪತ್ರೆಯ ತಂಡ, ಸೋಂಕಿತರ ಚಿಕಿತ್ಸೆ, ಆರೈಕೆ ಹಾಗೂ ಸರ್ವ ರೀತಿಯ ಸೇವೆಗೆ ಹಗಲಿರುಳು ಶ್ರಮಿಸುತ್ತಿದೆ. ಐದು ಬೆರಳು ಸಮನಾಗಿರಲ್ಲ ಎಂಬಂತೆ ಜಿಲ್ಲಾಸ್ಪತ್ರೆಯಲ್ಲೂ ಕೆಲವೇ ಕೆಲವು ಮೈಗಳ್ಳ ಸಿಬ್ಬಂದಿ ಬಿಟ್ಟರೆ ಬಹುತೇಕರು ನಿಜವಾದ ಕೊರೊನಾ ವಾರಿಯರ್ ಆಗಿ ಸೇವೆಗೆ ನಿಂತಿದ್ದಾರೆ. ಹಿರಿಯ ತಜ್ಞ ವೈದ್ಯರಾದ ಡಾ|ಚಂದ್ರಕಾಂತ ಜವಳಿ, ಡಾ|ಎಸ್.ಎಫ್. ಇನಾಮದಾರ, ಡಾ|ಗಿರೀಶ ಸಂಗಮ, ಡಾ|ಅರುಣಕುಮಾರ ಹಳ್ಳಿ, ಸೂಪರ್‌ವೈಜರ್ ಡಾ|ಶಕುಂತಲಾ ವಿ. ಸೇರಿದಂತೆ ಸುಮಾರು 23ಜನ ವೈದ್ಯರು, 80ಕ್ಕೂ ಹೆಚ್ಚು ಸರ್ನ್ಗಳು, 45ಕ್ಕೂ ಹೆಚ್ಚು ವಿವಿಧ ಸಿಬ್ಬಂದಿ ಒಳಗೊಂಡ ತಂಡ ಕೆಲಸ ಮಾಡುತ್ತಿದೆ.