Advertisement

ಎಲ್ಕೆಜಿ-ಆಂಗ್ಲ ಮಾಧ್ಯಮಕ್ಕೆ ಬಂತು ಬೇಡಿಕೆ

10:15 AM May 30, 2019 | Naveen |

ಬಾಗಲಕೋಟೆ: ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ ಹಾಗೂ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಕಲಿಕೆಗೆ ಬುಧವಾರದಿಂದ ಜಿಲ್ಲೆಯ 28 ಸರ್ಕಾರಿ ಶಾಲೆಗಳಲ್ಲಿ ಆರಂಭಿಸಲಾಗಿದ್ದು, ಶಿಕ್ಷಣ ಇಲಾಖೆಯ ನಿರೀಕ್ಷೆಗೂ ಮೀರಿ ಬೇಡಿಕೆ ಬಂದಿದೆ.

Advertisement

ಜಿಲ್ಲೆಯ 8 ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಎಲ್ಕೆಜಿ ಮತ್ತು 1ನೇ ತರಗತಿ ಆಂಗ್ಲ ಮಾಧ್ಯಮಕ್ಕೆ ಪ್ರವೇಶ ಪಡೆಯಲು ಸರ್ಕಾರ ಅವಕಾಶ ಕಲ್ಪಿಸಿದ್ದು, ಇನ್ನು 20 ಸರ್ಕಾರಿ ಹಿರಿಯ ಪ್ರಾಥಮಿಕ, ಆರ್‌ಎಂಎಸ್‌ಎ ಶಾಲೆಗಳಲ್ಲಿ 1ನೇ ತರಗತಿಯ ಆಂಗ್ಲ ಮಾಧ್ಯಮ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಕೆಪಿಎಸ್‌ ಶಾಲೆ ಹೊರತುಪಡಿಸಿ, ಉಳಿದ 20 ಶಾಲೆಗಳಲ್ಲಿ ಎಲ್ಕೆಜಿ ಪ್ರವೇಶಕ್ಕೆ ಅವಕಾಶವಿಲ್ಲ.

ಆದರೆ, ಈ ಮಾಹಿತಿ ಜಿಲ್ಲೆಯ ಪಾಲಕರಿಗೆ ಸರಿಯಾಗಿ ಇಲ್ಲದ ಕಾರಣ, ಪ್ರತಿಯೊಂದು ಸರ್ಕಾರಿ ಶಾಲೆಯಲ್ಲೂ ಆಂಗ್ಲ ಮಾಧ್ಯಮದ 1ನೇ ತರಗತಿಗೆ ಪ್ರವೇಶ ಪಡೆದುಕೊಳ್ಳಿ ಎಂದು ಪಾಲಕರು ದುಂಬಾಲು ಬೀಳುತ್ತಿರುವುದು ಬುಧವಾರ ಕಂಡುಬಂತು.

ತಾಲೂಕಿನ ನೀಲಾನಗರ (ಶಿರೂರ ತಾಂಡಾ)ದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಬಾಲಕಿಯರ ಪ್ರೌಢ ಶಾಲೆಯಲ್ಲಿ 1ನೇ ತರಗತಿಯ ಆಂಗ್ಲ ಮಾಧ್ಯಮಕ್ಕೆ 30 ವಿದ್ಯಾರ್ಥಿಗಳ ಪ್ರವೇಶಕ್ಕೆ ಸರ್ಕಾರ ಗುರಿ ನೀಡಿದೆ. 30ಕ್ಕಿಂತ ಹೆಚ್ಚು ವಿದ್ಯಾರ್ಥಿಗಳ ಪ್ರವೇಶ ಪಡೆಯಲು ಅವಕಾಶವಿಲ್ಲ. ಆದರೆ, ನೀಲಾನಗರ ತಾಂಡಾದಲ್ಲಿ ಮೊದಲ ದಿನವೇ 60ಕ್ಕೂ ಹೆಚ್ಚು ಪಾಲಕರು, ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಪ್ರವೇಶ ಪಡೆಯಬೇಕು ಎಂದು ಶಿಕ್ಷಕರಿಗೆ ಒತ್ತಾಯ ಮಾಡುತ್ತಿದ್ದರು.

ಇನ್ನು ಬಾದಾಮಿ ತಾಲೂಕಿನ ಹಾಗೂ ಬೀಳಗಿ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯ ನೀರಬೂದಿಹಾಳ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಕರ್ನಾಟಕ ಪಬ್ಲಿಕ್‌ ಸ್ಕೂಲ್ ಆಗಿದ್ದು, ಇಲ್ಲಿ ಎಲ್ಕೆಜಿ ಪ್ರವೇಶಕ್ಕೆ ಮೊದಲ ದಿನವೇ 80 ವಿದ್ಯಾರ್ಥಿಗಳ ಪಾಲಕರು ಬಂದಿದ್ದರು. ಎಲ್ಕೆಜಿಗೆ 30 ಹಾಗೂ 1ನೇ ತರಗತಿ ಆಂಗ್ಲ ಮಾಧ್ಯಮಕ್ಕೆ 30 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿದೆ. ಆದರೆ, ಎಲ್ಕೆಜಿಗೆ 80 ಮಕ್ಕಳು ಬಂದಿದ್ದು, ಪಾಲಕರಿಗೆ ಏನು ಹೇಳಬೇಕೆಂದು ತೋಚದ ಸ್ಥಿತಿಯಲ್ಲಿ ಶಿಕ್ಷಕರಿದ್ದಾರೆ.

Advertisement

ಜಿಲ್ಲೆಯಾದ್ಯಂತ ಆರಂಭ: ಜಿಲ್ಲೆಯ ಆರು ತಾಲೂಕಿನ ಏಳು ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯ 8 ಕರ್ನಾಟಕ ಪಬ್ಲಿಕ್‌ ಸ್ಕೂಲ್ (ಎಲ್ಕೆಜಿ ಮತ್ತು 1ನೇ ತರಗತಿ ಆಂಗ್ಲ ಮಾಧ್ಯಮ) ಹಾಗೂ ಉಳಿದ 20 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ 1ನೇ ತರಗತಿ ಶಾಲೆಗಳಿಗೆ ಪ್ರವೇಶ ಪಡೆಯುವ ಪ್ರಕ್ರಿಯೆ ಜತೆಗೆ ಮೊದಲ ದಿನದ ಶಾಲೆಗಳು ಆರಂಭಗೊಂಡವು.

ಎಲ್ಕೆಜಿ ಮತ್ತು 1ನೇ ತರಗತಿ ಆಂಗ್ಲ ಮಾಧ್ಯಮಕ್ಕೆ ಪ್ರವೇಶ ಪಡೆಯಲು ಜೂನ್‌ 10ರವರೆಗೆ ಇಲಾಖೆ ಅವಕಾಶ ಕಲ್ಪಿಸಿದ್ದು, ಮೊದಲ ದಿನವೇ ಭಾರಿ ಬೇಡಿಕೆ ಬಂದಿದೆ. ಗುರಿಗೆ ಮೀರಿ ಮಕ್ಕಳು ಪ್ರವೇಶ ಪಡೆಯಲು ಬರುತ್ತಿದ್ದು, ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ಎಲ್ಕೆಜಿ ಮತ್ತು 1ನೇ ತರಗತಿ ಆಂಗ್ಲ ಮಾಧ್ಯಮಕ್ಕೆ ಜಿಲ್ಲೆಯಲ್ಲಿ ನಿರೀಕ್ಷೆ ಮೀರಿ ಬೇಡಿಕೆ ಬಂದಿದೆ. ನಾನು ನೀಲಾನಗರ ಶಾಲೆಗೆ ಭೇಟಿ ನೀಡಿದ್ದ ವೇಳೆ, 30 ಮಕ್ಕಳ ಪ್ರವೇಶಕ್ಕೆ ಅವಕಾಶವಿದ್ದು, ಅಲ್ಲಿ 60 ಜನ ಪಾಲಕರು ಬಂದಿದ್ದು. ನೀರಬೂದಿಹಾಳ ಕೆಪಿಎಸ್‌ ಶಾಲೆಯಲ್ಲಿ ಮೊದಲ ದಿನವೇ 80 ಜನ ಮಕ್ಕಳು ಪ್ರವೇಶಕ್ಕಾಗಿ ಶಾಲೆಗೆ ಬಂದಿದ್ದು. ಎಲ್ಕೆಜಿ ಮತ್ತು 1ನೇ ತರಗತಿಗೆ ತಲಾ 30 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲು ಅವಕಾಶವಿದೆ. ಈ ವರ್ಷ ಪ್ರಾಯೋಗಿಕ ಆರಂಭ ಇದಾಗಿದ್ದು, ಪಾಲಕರಿಗೆ ತಿಳಿ ಹೇಳಿ, ಮೊದಲ ಬಂದವರಿಗೆ ಪ್ರವೇಶ ಕಲ್ಪಿಸಲಾಗುತ್ತಿದೆ.
ಬಿ.ಎಚ್. ಗೋನಾಳ,ಡಿಡಿಪಿಐ

ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ ಮತ್ತು 1ನೇ ತರಗತಿ ಆಂಗ್ಲ ಮಾಧ್ಯಮಕ್ಕೆ ಹೆಚ್ಚು ಬೇಡಿಕೆ ಬರುತ್ತಿದೆ. ಒಂದು ವಿಧಾನಸಭೆ ಕ್ಷೇತ್ರಕ್ಕೆ ನಾಲ್ಕು ಶಾಲೆಗಳಂತೆ 28 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಪಾಲಕರ ಬೇಡಿಕೆ ಹೆಚ್ಚಿದ್ದರಿಂದ ಆಂಗ್ಲ ಮಾಧ್ಯಮ ಕಲಿಕೆಗೆ ಅವಕಾಶ ಕಲ್ಪಿಸುವ ಶಾಲೆ ಹೆಚ್ಚಿಸಲು ಸರ್ಕಾರಕ್ಕೆ ಒತ್ತಡ ಹಾಕುತ್ತೇವೆ. ಈ ವರ್ಷ ಪ್ರವೇಶ ಸಿಗದಿದ್ದರೆ ಪಾಲಕರು ನಿರಾಸೆಯಾಗಬಾರದು. ಮುಂದಿನ ಶೈಕ್ಷಣಿಕ ವರ್ಷದಿಂದ ಹೆಚ್ಚಿನ ಶಾಲೆಗಳಲ್ಲಿ ಆರಂಭಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.
• ಗಂಗೂಬಾಯಿ (ಬಾಯಕ್ಕ) ಮೇಟಿ,
ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next