ಬಾಗಲಕೋಟೆ: ಆದ್ಯತಾ ವಲಯದಲ್ಲಿ ಬರುವ ಎಲ್ಲ ಫ್ರಂಟ್‌ಲೈನ್ ವಾರಿಯರ್ಗಳಿಗೆ ಲಸಿಕಾಕರಣ ಕಾರ್ಯವನ್ನು ಜೂನ್ 1ರೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ.ರಾಜೇಂದ್ರ, ನೋಡಲ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ಕೋವಿಡ್ ನಿಯಂತ್ರಣದ ಮಾರ್ಗಸೂಚಿ ಹಾಗೂ ಲಸಿಕಾಕರಣ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆದ್ಯತಾ ವಲಯದಲ್ಲಿ ಬರುವ ಹೆಸ್ಕಾಂ, ನೀರು ಸರಬರಾಜು ಸಿಬ್ಬಂದಿ, ಶಿಕ್ಷಕರು, ಸಾರಿಗೆ ಸಿಬ್ಬಂದಿಗಳು, ಆಟೋ-ಕ್ಯಾಬ್ ಚಾಲಕರು, ಕಾರ್ಮಿಕರು, ಅಂಗವಿಕಲರು, ಅಂಚೆ, ಬ್ಯಾಂಕ್ ನೌಕರರಿಗೆ, ಗ್ಯಾಸ್ ಸರಬರಾಜು ವಿತರಕರು, ಎಪಿಎಂಸಿ ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯ ಚುರುಕುಗೊಳಿಸಿ ಎಲ್ಲ ನೋಡಲ್ ಅಧಿಕಾರಿಗಳು ಆಸಕ್ತಿಯಿಂದ ಪೂರ್ಣಗೊಳಿಸಲು ತಿಳಿಸಿದರು. ಜಿಲ್ಲೆಯ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರವಾರು ತಮ್ಮ ಉಪಕೇಂದ್ರಗಳಲ್ಲಿ ಲಸಿಕಾರಣ ಪ್ರಗತಿ ಬಗ್ಗೆ ಆಯಾ ತಾಲೂಕು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಬೇಕು. ಅಲ್ಲದೇ ಲಸಿಕಾರಣದ ಬಗ್ಗೆ ಪೋರ್ಟಲ್‌ನಲ್ಲಿ ದಾಖಲಿಸಬೇಕು. ಬಾಕಿ ಉಳಿದಿದ್ದರೆ ಎರಡು ದಿನಗಳಲ್ಲಿ ಪೂರ್ಣಗೊಳಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಆದ್ಯತಾ ವಲಯ ಹಾಗೂ ಎರಡನೇ ಡೋಸ್ ಲಸಿಕಾರಣ ಕಾರ್ಯ ಜೂನ್ 1ಕ್ಕೆ ಪೂರ್ಣಗೊಳಿಸುವ ಜವಾಬ್ದಾರಿ ಜಿಲ್ಲಾ ಮತ್ತು ತಾಲೂಕುಮಟ್ಟದ ನೋಡಲ್ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಎ.ಎನ್.ದೇಸಾಯಿ ಮಾತನಾಡಿ, ಜಿಲ್ಲೆಯಲ್ಲಿ 24 ಸಾವಿರ ಕೋವಾಕ್ಸಿನ್ ಮೊದಲನೇ ಡೋಸ್ ಪಡೆದವರಲ್ಲಿ ಬಾಕಿ ಉಳಿದಿದ್ದು, ಈಗಾಗಲೇ ನಮ್ಮಲ್ಲಿ 12800 ಡೋಸ್ ಲಸಿಕೆ ಲಭ್ಯವಿರುತ್ತದೆ. ಹೊಸದಾಗಿ 9 ಸಾವಿರ ಕೋವಾಕ್ಸಿನ್ ಲಸಿಕೆ ಸರಬರಾಜು ಆಗಿರುತ್ತದೆ. 45 ವರ್ಷ ಮೇಲ್ಪಟ್ಟವರಿಗೆ ಕೋವಿಶಿಲ್ಡ್ ಲಸಿಕೆ ಬಂದಿದ್ದು, ಎರಡನೇ ಡೋಸ್ ನೀಡುವುದಾಗಿ ಸಭೆಗೆ ತಿಳಿಸಿದರು.
ಸಿಇಒ ಟಿ.ಭೂಬಾಲನ ಮಾತನಾಡಿ, ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿ ಮನೆ ಮನೆ ಸರ್ವೇ ಕಾರ್ಯ 3-4 ದಿನಗಳಲ್ಲಿ ಮೊದಲ ಸುತ್ತಿನ ಕಾರ್ಯ ಪೂರ್ಣಗೊಳಿಸಬೇಕು. ಗ್ರಾಮದ ಪ್ರತಿಯೊಂದು ಕುಟುಂಬಸ್ಥರ ಪಲ್ಸ್, ಆಕ್ಸಿಮಿಟರ್ ಚೆಕ್ ಮಾಡಬೇಕು. ಅಲ್ಲದೇ ಬ್ಲಾಕ್ ಫಂಗಸ್ ಬಗ್ಗೆ ತಿಳಿವಳಿಕೆ ನೀಡಬೇಕು. ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದವರನ್ನು ದಾಖಲಿಸಲು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಮಾತನಾಡಿ, ಲಾಕ್‌ಡೌನ್ ಸಂದರ್ಭದಲ್ಲಿ ಪ್ರಾರಂಭದಲ್ಲಿ ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿತ್ತು. ಆದರೆ ಈಗ ಅವುಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಜಿಲ್ಲೆಯಲ್ಲಿ ಜಾತ್ರೆಗಳು ನಡೆಯದಂತೆ ಕ್ರಮ ವಹಿಸಬೇಕು. ಜಾತ್ರೆಗಳು ನಡೆಯುತ್ತಿರುವ ಬಗ್ಗೆ ಮಾಹಿತಿ ಲಭ್ಯವಾದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ|ವಿಜಯ ಕಂಠಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ|ಅರವಿಂದ ಪಟ್ಟಣಶೆಟ್ಟಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ| ಕುಸುಮಾ ಮಾಗಿ ಮುಂತಾದವರು ಉಪಸ್ಥಿತರಿದ್ದರು.