ಬಾಗಲಕೋಟೆ : ಜಿಲ್ಲೆಯ ಮುಧೋಳ ಸಿಪಿಐ ಕಚೇರಿಯಲ್ಲಿ ಗುಪ್ತ ವಾರ್ತೆ ಸಿಬ್ಬಂಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆಗೂ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಇದರಿಂದ ಲಾಕ್ ಡೌನ್ ಕಡ್ಡಾಯ ಅನುಷ್ಠಾನಕ್ಕಾಗಿ ಕೋವಿಡ್-19 ವಿರುದ್ಧ ಹೋರಾಡುತ್ತಿದ್ದ ಪೊಲೀಸರಲ್ಲೂ ಭೀತಿ ಹೆಚ್ಚಿದೆ.
ರಾಜ್ಯ ಸರ್ಕಾರ ಬುಧವಾರ ಮಧ್ಯಾಹ್ನ ಕೋವಿಡ್-19 ಸೋಂಕಿತರ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ರೋಗಿ
ಸಂಖ್ಯೆ ಪಿ-262ನೇ ವ್ಯಕ್ತಿ, ಮುಧೋಳದಲ್ಲಿ ಸೋಂಕು ತಗುಲಿದ ಇಬ್ಬರು ವ್ಯಕ್ತಿಗಳಿದ್ದ ಮದರಸಾ ಸುತ್ತ ಕರ್ತವ್ಯ ನಿರ್ವಹಿಸುತ್ತಿದ್ದ 39 ವರ್ಷದ ಪೊಲೀಸ್ ಪೇದೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಪೇದೆ ಮೂಲತಃಜಮಖಂಡಿಯವರಾಗಿದ್ದು, ಮುಧೋಳದ ಸಿಪಿಐ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಮಾ.27ರಂದು ಮದರಸಾದಲ್ಲಿ ಲಾಕ್ ಡೌನ್ ಉಲ್ಲಂಘಿಸಿ, ಸಾಮೂಹಿಕ ಪ್ರಾರ್ಥನೆ ನಡೆಸುತ್ತಿದ್ದ ವೇಳೆ ಮೊದಲಿಗೆ ಅಲ್ಲಿಗೆ ಭೇಟಿ ನೀಡಿ, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಇದೇ ಪೇದೆ. ಅಲ್ಲದೇ ಜಮಖಂಡಿಂದ ನಿತ್ಯ ಮುಧೋಳಕ್ಕೆ ಬಂದು ಹೋಗುತ್ತಿದ್ದ ಅವರು, ಜಮಖಂಡಿಯಲ್ಲಿ ಮನೆ ಹೊಂದಿದ್ದಾರೆ. ಈಗ ಪೇದೆಗೆ ಸೋಂಕು ಖಚಿತವಾದ ಹಿನ್ನೆಲೆಯಲ್ಲಿ ಅವರ ಮನೆಯವರು, ಇಲಾಖೆಯಲ್ಲಿ ಕೆಲಸ ಮಾಡುವಾಗ ಅವರೊಂದಿಗೆ ನೇರ, ಪ್ರಾಥಮಿಕ ಹಾಗೂ ದ್ವಿತೀಯ ಹಂತದಲ್ಲಿ ಸಂಪರ್ಕಕ್ಕೆ ಬಂದಿರುವ ಪ್ರತಿಯೊಬ್ಬರನ್ನೂ ತಪಾಸಣೆಗೆ ಒಳಪಡಿಸಲು ಜಿಲ್ಲಾಡಳಿತ ನಿರ್ಧರಿಸಿದ್ದು, ಈಗಾಗಲೇ ಪ್ರಥಮ ಹಂತದಲ್ಲಿ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಗಂಟಲು ಮಾದರಿ ಪಡೆದು, ಪರೀಕ್ಷೆಗೆ ರವಾನಿಸಲಾಗುತ್ತಿದೆ.
ಕಳೆದ ಎರಡು ದಿನಗಳಿಂದ ತೀವ್ರ ಜ್ವರ ಹಾಗೂ ನಿರಂತರ ಸೀನುವ ಸಮಸ್ಯೆಗೆ ಒಳಗಾಗಿದ್ದ ಪೊಲೀಸ್ ಪೇದೆಗೆ ಜಮಖಂಡಿಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಕೋವಿಡ್-19 ಶಂಕೆ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಪರೀಕ್ಷೆಗೆ ಒಳಪಡಿಸಿದ್ದು, ಕೋವಿಡ್-19 ಖಚಿತಪಟ್ಟಿದೆ. ಸಧ್ಯ ಅವರನ್ನು ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಟ್ಯೂಶನ್ ಹೇಳುವ ಶಿಕ್ಷಕಿ ಪತಿಗೆ ಸೋಂಕು :
ಬಾಗಲಕೋಟೆ ಹಳೆಯ ನಗರದಲ್ಲಿ ಈಗಾಗಲೇ 10 ಸೋಂಕು ಪ್ರಕರಣ ಪತ್ತೆಯಾದ ಪ್ರದೇಶದಲ್ಲೇ ಬುಧವಾರ ಮತ್ತೊಂದು ಪ್ರಕರಣ ಪತ್ತೆಯಾಗಿದೆ. ಕಳೆದ ಏ.9ರಂದು ಕೋವಿಡ್-19 ಖಚಿತಪಟ್ಟ ರೋಗಿ ಸಂಖ್ಯೆ ಪಿ 186 ನ ನಾಲ್ಕು ವರ್ಷದ ಮಗುವಿನೊಂದಿಗೆ ಸಂಪರ್ಕವಿದ್ದ 52 ವರ್ಷದ ಪುರುಷ (ಪಿ262)ನಿಗೂ ಸೋಂಕು ಖಚಿತಪಟ್ಟಿದೆ. ಈ ಪುರುಷನ ಪತ್ನಿ ಮನೆಯಲ್ಲಿ ಮಕ್ಕಳಿಗೆ ಟ್ಯೂಶನ್ ಹೇಳುತ್ತಿದ್ದರು. ಈ ಪುರುಷನ ಪತ್ನಿಗೂ ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಒಟ್ಟಾರೆ, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ವರೆಗೆ ಒಟ್ಟು 14 ಜನರಿಗೆ ಸೋಂಕು ದೃಢಪಟ್ಟಿದ್ದು, ಅದರಲ್ಲಿ ಒಬ್ಬ ವೃದ್ಧ ಮೃತಪಟ್ಟಿದ್ದಾನೆ. ಇದೀಗ ಟ್ಯೂಶನ್ ಹೇಳುವ ಮಹಿಳೆಯ ಪತಿ ಹಾಗೂ ಮುಧೋಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆಗೆ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಜನರನ್ನು ತಪಾಸಣೆಗೆ ಒಳಪಡಿಸಬೇಕಾದ ತುರ್ತು ಅನಿವಾರ್ಯತೆ ಜಿಲ್ಲಾಡಳಿತಕ್ಕಿದೆ.