ಬಾಗಲಕೋಟೆ: ಶಾಲೆ, ವಸತಿ ನಿಲಯಗಳಲ್ಲಿ ಊಟ ಮಾಡಿದ ಬಳಿಕ ಮಿಕ್ಕುವ ಆಹಾರವನ್ನು ಇಷ್ಟು ದಿನ ಚೆಲ್ಲಲ್ಲಾಗುತ್ತಿತ್ತು. ಆದರೆ ಇನ್ನು ತಿಪ್ಪೆಗೆ ಎಸೆಯುವಂತಿಲ್ಲ. ಅದು ಹಳಸಿದರೂ ಅದನ್ನು ಚರಂಡಿಗೆ ಹಾಕುವಂತಿಲ್ಲ. ಬದಲಾಗಿ ಇದನ್ನು ಸಾವಯವ ಗೊಬ್ಬರ ತಯಾರಿಸಲು ಬಳಸಲಾಗುತ್ತಿದೆ.
Advertisement
ಜಿಲ್ಲೆಯ ಸರ್ಕಾರಿ ವಸತಿ ನಿಲಯಗಳು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳಲ್ಲಿ ಇಂತಹ ಕಾರ್ಯಕ್ಕೆ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪ ಸಂಖ್ಯಾತರ ಇಲಾಖೆ ಮುಂದಾಗಿದೆ.
Related Articles
Advertisement
ತಯಾರಿಕೆ ಹೇಗೆ?: ಈ ಪೈಪ್ ಕಾಂಪೋಸ್ಟ್ ತಯಾರಿಕೆಗೆ ಸಮಯ, ಕೂಲಿಕಾರರ ಅಗತ್ಯತೆ ಬೇಕಾಗಿಲ್ಲ. ಅತ್ಯಂತ ಸರಳ ಹಾಗೂ ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಗೊಬ್ಬರ ತಯಾರಿಸಲು ಸಾಧ್ಯವಿದೆ. 10 ಇಲ್ಲವೇ 20 ಇಂಚಿನ 10 ಅಡಿ ಉದ್ದದ ಪೈಪ್ ಖರೀದಿಗೆ ರೂ. 250 ಬೇಕಾಗುತ್ತದೆ. ಅಂತಹ ಎರಡು ಪೈಪ್ ಖರೀದಿಸಿ, ಆ ಪೈಪ್ ಅನ್ನು ಶಾಲೆ, ವಸತಿ ನಿಲಯ ಆವರಣದಲ್ಲಿ ಎರಡು ಅಡಿ ಅಂತರಕ್ಕೆ ಒಂದರಂತೆ ಒಂದು ಅಡಿ ನೆಲ ಅಗೆದು ಅಳವಡಿಸಬೇಕು. ಬಳಿಕ ಪೈಪ್‌ನ ಮೇಲಿನ ತುದಿಯಿಂದ 1 ಕೆ.ಜಿ. ಬೆಲ್ಲ ಮತ್ತು 1 ಕೆ.ಜಿ. ಆಕಳು ಇಲ್ಲವೇ ಎಮ್ಮೆಯ ಸೆಗಣಿ ಹಾಕಬೇಕು. ಬಳಿಕ ಪ್ರತಿದಿನ ಶಾಲೆ, ವಸತಿ ನಿಲಯಗಳಲ್ಲಿ ಉಳಿಯುವ ಮುಸುರೆ, ಮಿಕ್ಕ ಆಹಾರ, ಹೆಚ್ಚಿ ಉಳಿದ ಹಸಿ ತರಕಾರಿ ಎಲ್ಲವನ್ನೂ ಅದಕ್ಕೆ ಹಾಕುತ್ತ ಹೋಗಬೇಕು.
ಆ ಪೈಪ್ ತುಂಬಿದ ಬಳಿಕ ಅದನ್ನು ಭದ್ರವಾಗಿ ಮುಚ್ಚಿ (ಒಳಗೆ ನೀರು ಹೋಗದಂತೆ)ಬೇಕು. ಅದನ್ನು 45 ದಿನಗಳ ಕಾಲ ಹಾಗೆಯೇ ಬಿಡಬೇಕು. ಆ ವೇಳೆ ಇನ್ನೊಂದು ಪೈಪ್‌ಗೆ ಮುಸುರೆ, ಮಿಕ್ಕ ಆಹಾರ ಹಾಕಬೇಕು. 45 ದಿನಗಳಲ್ಲಿ ಅತ್ಯಂತ ಉಪಯುಕ್ತವಾದ ಪೈಪ್ ಕಾಂಪೋಸ್ಟ್ ಸಿದ್ಧಗೊಳ್ಳುತ್ತದೆ. ಅದನ್ನು ಸಾವಯವ ಕೃಷಿ ಪದ್ಧತಿಗೆ ಬಳಸು ಯೋಗ್ಯವಾಗಿದೆ ಎಂಬುದು ಈಗಾಗಲೇ ಬಳಕೆ ಮಾಡಿದವರ ಅಭಿಪ್ರಾಯ.
ಎಷ್ಟಿವೆ ಶಾಲೆ- ಹಾಸ್ಟೇಲ್‌ಗಳು: ಜಿಲ್ಲೆಯಲ್ಲಿ 688 ಕಿರಿಯ ಪ್ರಾಥಮಿಕ ಶಾಲೆ, 1235 ಹಿರಿಯ ಪ್ರಾಥಮಿಕ ಶಾಲೆ, 471 ಪ್ರೌಢಶಾಲೆಗಳಿವೆ. ಅವುಗಳಲ್ಲಿ ನಿತ್ಯ ಮಕ್ಕಳಿಗೆ ಬಿಸಿಯೂಟ ತಯಾರಿಸಿ ಉಣಬಡಿಸುವ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಶೇ.80ರಷ್ಟಿವೆ. ಸರ್ಕಾರಿ 461 ಕಿರಿಯ ಪ್ರಾಥಮಿಕ ಶಾಲೆ, 9 ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, 841 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, 104 ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, 183 ಸರ್ಕಾರಿ ಪ್ರೌಢಶಾಲೆ, 124 ಅನುದಾನಿತ ಪ್ರೌಢಶಾಲೆಗಳಿವೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ನಿತ್ಯ ಬಿಸಿಯೂಟ ತಯಾರಿಸಲಾಗುತ್ತದೆ.
ಸಮಾಜ ಕಲ್ಯಾಣ ಇಲಾಖೆಯಡಿ 31 ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ, 9 ಬಾಲಕಿಯರ ವಸತಿ ನಿಲಯ, ಮೆಟ್ರಿಕ್ ನಂತರದ 9 ಬಾಲಕರ ಹಾಗೂ 6 ಬಾಲಕಿಯರ ವಸತಿ ನಿಲಯಗಳಿವೆ. ಅಲ್ಲದೇ 2 ಪರಿಶಿಷ್ಟ ಜಾತಿ ವಿದ್ಯಾರ್ಥಿ ನಿಲಯಗಳು, 3 ಆಶ್ರಮ ವಸತಿ ಶಾಲೆಗಳು, 43 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಹಾಸ್ಟೇಲ್‌ಗಳು, 39 ಮೆಟ್ರಿಕ್ ನಂತರದ ಹಾಸ್ಟೇಲ್ ಗಳು, ಬಿಸಿಎಂ ಇಲಾಖೆಯಡಿ ಬರುವ 24 ಅನುದಾನಿತ ಹಾಸ್ಟೇಲ್‌ಗಳು (ಮೆಟ್ರಿಕ್ ಪೂರ್ವ), 75 ಮೆಟ್ರಿಕ್ ನಂತರದ ಅನುದಾನಿತ ಹಾಸ್ಟೇಲ್ ಗಳಿವೆ. ಅಲ್ಪಸಂಖ್ಯಾತರ ಇಲಾಖೆಯಡಿ ಮೆಟ್ರಿಕ್ ಪೂರ್ವ 5, ಮೆಟ್ರಿಕ್ ನಂತರದ 10, ಅನುದಾನಿತ 2 ವಸತಿ ನಿಲಯ ಇವೆ.
ಒಟ್ಟಾರೆ, ಸರ್ಕಾರಿ ಮತ್ತು ಅನುದಾನಿತ ಶಾಲೆ, ಪ್ರೌಢಶಾಲೆ, ವಸತಿ ನಿಲಯಗಳು ಒಳಗೊಂಡು ನಿತ್ಯ ಬಿಸಿ ಊಟ ಹಾಗೂ ವಸತಿ ನಿಲಯಗಳಲ್ಲಿ ಊಟ ನೀಡುವ ಶಾಲೆ-ಹಾಸ್ಟೇಲ್‌ಗಳಲ್ಲಿರುವ ಮಿಕ್ಕ ಆಹಾರವನ್ನು ಪೈಪ್ ಕಾಂಪೋಸ್ಟ್ ಮೂಲಕ ಗೊಬ್ಬರ ತಯಾರಿಸಲು ಜಿಪಂನಿಂದ ಸಂಬಂಧಿಸಿದ ಇಲಾಖೆಗಳಿಗೆ ಲಿಖೀತ ಆದೇಶ ಮಾಡಲಾಗಿದೆ.
ಸಿಇಒ ಗಂಗೂಬಾಯಿ ಮಾನಕರ ತುಳಸಿಗೇರಿ ಶಾಲೆಯಲ್ಲಿ ಈ ಕಾರ್ಯಕ್ಕೆ ಚಾಲನೆ ನೀಡಿದ್ದು, ಎಲ್ಲ ಶಾಲೆಗಳಲ್ಲಿ ಎಸ್‌ಡಿಎಂಸಿ ಅನುದಾನ (ಕೇವಲ ರೂ. 500 ವೆಚ್ಚ) ಬಳಸಲಾಗುತ್ತಿದೆ.