Advertisement

ಎರಡು ವರ್ಷವಾದ್ರೂ 7 ಸಾವಿರ ಮನೆ ಕಟ್ಟಿಲ್ಲ

12:27 PM Jul 04, 2019 | Team Udayavani |

ಶ್ರೀಶೈಲ ಕೆ. ಬಿರಾದಾರ
ಬಾಗಲಕೋಟೆ:
ಬಡವರಿಗೆ ಸ್ವಂತ ಸೂರು ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ವಿವಿಧ ಯೋಜನೆಗಳಡಿ ಆಶ್ರಯ ಮನೆ ಮಂಜೂರು ಮಾಡಿದರೂ ಜಿಪಂ ನಿರ್ಲಕ್ಷ್ಯದಿಂದ 7 ಸಾವಿರ ಮನೆಗಳ ನಿರ್ಮಾಣ ಆರಂಭವಾಗಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.

Advertisement

ನಿಜ, ಜಿಲ್ಲೆಯಲ್ಲಿ ಒಂದೆಡೆ ಆಶ್ರಯ ಮನೆಗಾಗಿ ಬಡವರು, ಶಾಸಕರು-ಅಧಿಕಾರಿಗಳೆಡೆಗೆ ನಿತ್ಯ ಎಡತಾಕುತ್ತಿದ್ದರೆ, ಇನ್ನೊಂದೆಡೆ ಮಂಜೂರಾದ ಮನೆಗಳೇ ನಿರ್ಮಾಣಗೊಂಡಿಲ್ಲ. ಹೀಗಾಗಿ ಜಿಲ್ಲೆಗೆ ಬರಬೇಕಿರುವ ಹೆಚ್ಚುವರಿ ಮನೆಗಳೂ ಮಂಜೂರಾಗುತ್ತಿಲ್ಲ ಎನ್ನಲಾಗಿದೆ.

ಎರಡು ವರ್ಷದಲ್ಲಿ 18 ಸಾವಿರ ಮನೆ: ಜಿಲ್ಲೆಯ ಆರು ತಾಲೂಕು ವ್ಯಾಪ್ತಿಯ 198 ಗ್ರಾ.ಪಂ.ಗಳಿಗೆ 2018-19 ಹಾಗೂ 2019-20ನೇ ಸಾಲಿಗೆ ಒಟ್ಟು 18,480 ಮನೆಗಳು ಮಂಜೂರಾಗಿವೆ. ಪ್ರಸಕ್ತ ಏಪ್ರಿಲ್ನಿಂದ ಜೂನ್‌ ಅಂತ್ಯದ ವರೆಗೆ 9,243 ಮನೆ ನಿರ್ಮಿಸಬೇಕಿತ್ತು. ಆದರೆ, ಈವರೆಗೆ 7,686 ಮನೆ ಪೂರ್ಣಗೊಂಡಿವೆ ಎಂದು ಜಿಪಂ ಅಧಿಕಾರಿಗಳು ಹೇಳುತ್ತಿದ್ದಾರೆ.

ಮೂರು ತಿಂಗಳ ಗುರಿಯಲ್ಲಿ ಮಾತ್ರ 7 ಸಾವಿರ ಮನೆಗಳು ನಿರ್ಮಾಣಗೊಂಡಿದ್ದು, ಎರಡು ವರ್ಷಗಳಿಂದ ನಿರ್ಮಾಣಗೊಳ್ಳದೇ ಇರುವ ಮನೆಗಳತ್ತ ಜಿಪಂ ಅಧಿಕಾರಿಗಳು ಗಮನ ಹರಿಸಿಲ್ಲ ಎಂಬ ಆರೋಪ, ಜಿಲ್ಲೆಯ ಜನಪ್ರತಿನಿಧಿಗಳಿಂದ ಕೇಳಿ ಬರುತ್ತಿದೆ.

7 ಸಾವಿರ ಮನೆ ಆರಂಭಿಸಿಲ್ಲ: ಮಂಜೂರಾದ ಒಟ್ಟು 18,480 ಆಶ್ರಯ ಮನೆಗಳಲ್ಲಿ 7,039 ಮನೆ ಆರಂಭಗೊಳಿಸಿಲ್ಲ. ಬಾದಾಮಿ-1306, ಬಾಗಲಕೋಟೆ-791, ಬೀಳಗಿ-559, ಹುನಗುಂದ-1300, ಜಮಖಂಡಿ-1711, ಮುಧೋಳ-1372 ಮನೆಗಳನ್ನು ಆರಂಭಿಸಿಲ್ಲ. ಬಾದಾಮಿ, ಹುನಗುಂದ ಹಾಗೂ ಮುಧೋಳ ತಾಲೂಕಿನಲ್ಲಿ ಅತಿಹೆಚ್ಚು ಮನೆಗಳು ಆರಂಭಿಸಿಲ್ಲ ಎಂಬುದು ಜಿಪಂ ದಾಖಲೆಗಳು ಹೇಳುತ್ತವೆ.

Advertisement

ಹಳ್ಳಿ ರಾಜಕೀಯ ಕಾರಣ ?: ಗ್ರಾಮೀಣ ಭಾಗದಲ್ಲಿ ಬಸವ ವಸತಿ ಹಾಗೂ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಮಂಜೂರಾದ ಆಶ್ರಯ ಮನೆಗಳು ಆರಂಭಗೊಳ್ಳದಿರಲು ಹಳ್ಳಿ ರಾಜಕೀಯ ಕಾರಣ ಎಂದು ಕೆಲವರು ಹೇಳುತ್ತಾರೆ. ಗ್ರಾಪಂ ಸದಸ್ಯರು ತಮಗೆ ಬೇಕಾದವರಿಗೆ ಮಾತ್ರ ಮನೆ ಮಂಜೂರು ಮಾಡಿಸುತ್ತಾರೆ, ಆ ಫಲಾನುಭವಿ ಸ್ವಂತ ಮನೆ ಹೊಂದಿದ್ದರೆ, ಅದಕ್ಕೆ ಅದೇ ಗ್ರಾಮದ ಬೇರೊಬ್ಬರು ತಕರಾರು ಅರ್ಜಿ ನೀಡಿ, ಸ್ಥಗಿತಗೊಳಿಸುತ್ತಾರೆ. ಮತ್ತೆ ಕೆಲವೆಡೆ ಗ್ರಾಮಸಭೆ ನಡೆಸಿ, ಮಂಜೂರಾದ ಮನೆಗಳನ್ನು ಸರಿಯಾಗಿ ಹಂಚಿಕೆ ಮಾಡುವುದಿಲ್ಲ. ಇದು ಆಶ್ರಯ ಮನೆಗಳ ನಿರ್ಮಾಣ ಕಾರ್ಯಕ್ಕೆ ಹಿನ್ನಡೆಯಾಗಲು ಕಾರಣ ಎಂಬುದು ಕೆಲವರ ಆರೋಪ.

ಮನೆಗಾಗಿ ಅಲೆದಾಟ ನಿಂತಿಲ್ಲ: ಜಿಲ್ಲೆಯ 3,53,852 ಕುಟುಂಬಗಳಲ್ಲಿ 61,675 ಕುಟುಂಬಕ್ಕೆ ಸ್ವಂತ ಸೂರಿಲ್ಲದಿದ್ದರೆ, 30,437 ಕುಟುಂಬಗಳಿಗೆ ಸ್ವಂತ ನಿವೇಶನವೂ ಇಲ್ಲ. ಇಷ್ಟೊಂದು ಕುಟುಂಬಗಳು ಸ್ವಂತ ಸೂರಿಗಾಗಿ ಪರದಾಡುತ್ತಿದ್ದರೆ, ಜಿಲ್ಲೆಗೆ ಮಂಜೂರಾದ ಸಾವಿರಾರು ಮನೆಗಳನ್ನು ನಿರ್ಮಿಸದೇ, ಉಳಿಸಿಕೊಂಡಿದ್ದರಿಂದ ಹೊಸ ಮನೆಗಳ ಮಂಜೂರಾತಿಗೆ ಹಿನ್ನಡೆಯಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.

ಹೊಸಬರ ಆಯ್ಕೆಗೆ ತಯಾರಿ: ಕಳೆದ ಎರಡು ವರ್ಷಗಳಿಂದ ಆಶ್ರಯ ಮನೆ ನಿರ್ಮಿಸಿಕೊಳ್ಳದ ಫಲಾನುಭಗಳನ್ನು ಬದಲಿಸಿ, ಹೊಸಬರ ಆಯ್ಕೆಗೆ ಜಿಪಂ ತಯಾರಿ ನಡೆಸಿದೆ ಎನ್ನಲಾಗಿದೆ. ಆದರೆ, ಈ ಪ್ರಕ್ರಿಯೆಗೆ ಗ್ರಾಪಂ ಮಟ್ಟದ ರಾಜಕೀಯ ಅಡ್ಡಿ ಬರುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಎರಡು ವರ್ಷವಾದರೂ ಮನೆ ನಿರ್ಮಿಸಿ ಕೊಳ್ಳದ ಫಲಾನುಭವಿಗಳಿಗೆ ಆಯಾ ಗ್ರಾಪಂನಿಂದ ನೋಟಿಸ್‌ ನೀಡಿ, ಅಂತಿಮ ಗಡುವು ನೀಡಲಾಗುತ್ತದೆ. ಆ ಬಳಿಕವೂ ಮನೆ ನಿರ್ಮಾಣ ಆರಂಭಿಸಿರುವ ಕುರಿತು ದಾಖಲೆ ಒದಗಿಸದಿದ್ದರೆ, ಅಂತಹ ಫಲಾನುಭವಿಗಳನ್ನು ಆಯ್ಕೆ ಪಟ್ಟಿಯಿಂದ ಕೈಬಿಡಲು ರಾಜೀವ ಗಾಂಧಿ ವಸತಿ ನಿಗಮಕ್ಕೆ ವರದಿ ನೀಡಲಾಗುತ್ತದೆ ಎಂದು ಜಿಪಂ ಅಧಿಕಾರಿಗಳು ತಿಳಿಸಿದ್ದಾರೆ.

ಸಾಧನೆ ಮಾಡಲಾಗಿದೆ. ಕೆಲವರಿಗೆ ಹಲವು ಬಾರಿ ಹೇಳಿದರೂ ಮನೆ ನಿರ್ಮಿಸಲು ಮುಂದಾಗಿಲ್ಲ. ಅಂತಹ ಫಲಾನುಭವಿಗಳಿಗೆ ಅಂತಿಮ ಸೂಚನೆ ನೀಡಲಾಗುತ್ತಿದೆ. 7 ಸಾವಿರ ಫಲಾನುಭವಿಗಳು ಈವರೆಗೆ ಮನೆ ನಿರ್ಮಿಸಿಕೊಂಡಿಲ್ಲ.
ವಿ.ಎಸ್‌. ಹಿರೇಮಠ,
ಜಿಪಂ ಯೋಜನಾ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next