Advertisement

ಡಿಸಿ ಕಚೇರಿ ಎದುರು ಬೊಬ್ಬೆ ಹಾಕಿದ ಮಹಿಳೆಯರು

05:46 PM Oct 03, 2019 | Team Udayavani |

ಬಾಗಲಕೋಟೆ: ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧ ಮಾಡುವಂತೆ ಒತ್ತಾಯಿಸಿ ಮದ್ಯ ನಿಷೇಧ ಆಂದೋಲನ ಕರ್ನಾಟಕ  ಘಟನೆ ನೇತೃತ್ವದಲ್ಲಿ ಜಿಲ್ಲೆಯ ನೂರಾರು ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಬೊಬ್ಬೆ ಹಾಕಿ ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಗೋವಿಂದ ಕಾರಜೋಳ ಮನವಿ ಪಡೆಯಲು ಬರುವಂತೆ ಪಟ್ಟು ಹಿಡಿದರು. ಡಿಸಿಎಂ ಕಾರಜೋಳರು ಮನವಿ ಪಡೆಯಲು ತಡ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನಕ್ಕೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ತಡೆದರು. ಅಲ್ಲದೇ ಬೊಬ್ಬೆ ಹಾಕಿ, ಸರ್ಕಾರ ಹಾಗೂ ಜನ ಪ್ರತಿನಿಧಿಗಳ ವಿರುದ್ಧ ಘೋಷಣೆ, ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ವೇಳೆ ಹಲವು ಮುಖಂಡರು ಮಾತನಾಡಿ, ಗಾಂಧೀಜಿ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ಮದ್ಯದ ನಿಷೇಧದ ಕನಸು ನನಸು ಮಾಡಬೇಕು. ಮದ್ಯ ಸೇವನೆ ಕಡಿಮೆ ಮಾಡುವ ನಿಟ್ಟಿನಲ್ಲಿ ದೇಶದ ಸಂವಿಧಾನದ ಅನುಚ್ಛೇದ 47ರಲ್ಲಿ ರಾಜ್ಯಗಳಿಗೆ ನೀಡಲಾದ ನಿರ್ದೇಶನದಂತೆ ಮದ್ಯ ಮುಕ್ತ ಕರ್ನಾಟಕ ನೀತಿಯತ್ತ ಸಾಗುವ ಸಲುವಾಗಿ ಮೂರು ತಿಂಗಳೊಳಗೆ ಸಮಿತಿ ರಚಿಸಿ, ಸರ್ಕಾರದ ನೀತಿ ಜಾರಿಗೊಳಿಸಬೇಕು.

ವಾಸ್ತವದಲ್ಲಿ ಸರ್ಕಾರವೇ ಮದ್ಯ ಸೇವನೆ ಮಾಡುವವರ ಸಂಖ್ಯೆ ಹೆಚ್ಚಿಸುತ್ತಿದೆ. ಕಳೆದ ಎಂಟು ವರ್ಷಗಳಲ್ಲಿ ಅಬಕಾರಿ ಇಲಾಖೆಯ ಆದಾಯ, 9 ಸಾವಿರ ಕೋಟಿಯಿಂದ 20 ಸಾವಿರ ಕೋಟಿಗೆ ಏರಿಕೆಯಾಗಿದೆ. ಹೀಗಾಗಿ ಮದ್ಯ ಸೇವನೆ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ನಮಗೆ ಮದ್ಯ ಬೇಡ ಶಿಕ್ಷಣ ಬೇಕು, ಬೀರು ಬೇಡ ನೀರು ಬೇಕು ಎಂದು ಘೋಷಣೆ ಕೂಗಿದರು. ಬಳಿಕ ಡಿಸಿಎಂ ಗೋವಿಂದ ಕಾರಜೋಳ, ಶಾಸಕರಾದ ಡಾ|ವೀರಣ್ಣ ಚರಂತಿಮಠ, ಆನಂದ ಸಿದ್ದು ನ್ಯಾಮಗೌಡ, ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ| ಕೆ. ರಾಜೇಂದ್ರ ಅವರಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು.

Advertisement

ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಎಲ್‌ .ಬಿ. ಗೌಡರ, ಎನ್‌.ಎನ್‌. ಕಟ್ಟಿಮನಿ, ಎಸ್‌.ಎಸ್‌. ಹೊಸಮನಿ, ಶಾಂತಾಂಬಾ ಅಂಗಡಿ ಸೇರಿದಂತೆ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next