ಬನಹಟ್ಟಿ: ಕಳೆದ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಸರಕಾರ ಪ್ರತಿ ಯೊಂದು ಸಮು ದಾಯ ಆರೋಗ್ಯ ಕೇಂದ್ರ ದಲ್ಲಿ ಆಕ್ಸಿಜನ್ ವ್ಯವಸ್ಥೆ ಮಾಡಲು ಹಣ ಬಿಡುಗಡೆ ಮಾಡಿ ಎಲ್ಲ ರೀತಿಯಿಂದಲೂ ಕಾರ್ಯ ನಿರ್ವಹಿಸಿತ್ತು. ಆದರೆ, ಅದು ಲೋಕಾರ್ಪಣೆಯಾಗಿಲ್ಲ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತಯಾರಾಗಿರುವ ಆಕ್ಸಿಜನ್ ವ್ಯವಸ್ಥೆ ಇದುವರೆಗೂ ಲೋಕಾರ್ಪಣೆಯಾಗಿಲ್ಲ. ಕೂಡಲೇ ಲೋಕಾರ್ಪಣೆ ಮಾಡಬೇಕು ಎಂದು ಮಾಜಿ ಸಚಿವೆ ಉಮಾಶ್ರೀ ಆಗ್ರಹಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಈಗಾಗಲೇ ಶೇ. 90ರಷ್ಟು ತಾಂತ್ರಿಕ ಕೆಲಸಗಳಾಗಿ ಅನೇಕ ತಿಂಗಳು ಕಳೆದರೂ ಲೋಕಾರ್ಪಣೆ ಯಾಗದಿರುವುದು ದುರದೃಷ್ಟಕರ. ಈ ಬಗ್ಗೆ ನಾನು ಒತ್ತಾಯಿಸಿ ಸರಕಾರಕ್ಕೆ ಪತ್ರ ಬರೆದಿದ್ದೆ. ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, ಡಿಸಿಎಂ ಗೋವಿಂದ ಕಾರಜೋಳ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಸಂಬಂಧಪಟ್ಟ ಸಚಿವರಿಗೆ ಒತ್ತಾಯಿಸಿದ್ದೇನೆ.
ಮೂರನೇ ಅಲೆ ಆರಂಭದಿಂದ ತೊಂದರೆ ಆಗಬಹುದೆಂಬ ತಜ್ಞರು ನೀಡಿರುವ ವರದಿ ಗಮನಿಸಿದರೆ ಇಂತಹ ಸೌಲಭ್ಯಗಳು ಅವಶ್ಯವಾಗಿದೆ. ಆ ದೃಷ್ಟಿಯಿಂದ ಬನಹಟ್ಟಿ ಮತ್ತು ಮಹಾಲಿಂಗಪುರ ಸರಕಾರಿ ಆಸ್ಪತ್ರೆಯಲ್ಲಿ ತಯಾರಿರುವ ಸೆಂಟ್ರಲ್ ಆಕ್ಸಿಜನ್ ಸಿಸ್ಟಮ್‌ನ್ನು ತಾಂತ್ರಿಕವಾಗಿ ಪರಿಶೀಲಿಸಿ, ಪ್ರಮಾಣಿಕರಿಸಬೇಕು.
ಅದರ ಜತೆ ಮಹಾಲಿಂಗಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿಯೂ ಶೀಘ್ರ ಆಕ್ಸಿಜನ್ ಬೆಡ್ ವ್ಯವಸ್ಥೆ ಪ್ರಾರಂಭಿಸಬೇಕೆಂದು ಉಮಾಶ್ರೀ ಒತ್ತಾಯಿಸಿದರು.