ಪಾಂಡವಪುರ: ತಾಲೂಕಿನ ಬೇಬಿ ಗ್ರಾಮದ ಬೇಬಿಕೆರೆಗೆ ಸೋಮವಾರ ಶಾಸಕ ಸಿ.ಎಸ್.ಪುಟ್ಟರಾಜು, ಬೇಬಿಮಠದ ಶ್ರೀತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಬೇಬಿಬೆಟ್ಟದ ಶ್ರೀಗುರುಸಿದ್ದೇಶ್ವರ ಸ್ವಾಮೀಜಿ ಅವರು ಬಾಗಿನ ಅರ್ಪಿಸಿದರು.
ನೀರು ತುಂಬಿಸುವ ಯೋಜನೆಗೆ ಚಾಲನೆ: ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ತಾಲೂಕಿನ ಬೇಬಿಗ್ರಾಮದ ಕೆರೆಗೆ ಕೆಆರ್‌ಎಸ್‌ನಿಂದ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಕೆರೆಗಳನ್ನು ಭರ್ತಿ ಮಾಡಿ, ಜನರಿಗೆ ನೀರಾವರಿ ಸೌಲಭ್ಯ ಕಲ್ಪಿಸಿಕೊಡಬೇಕು ಎನ್ನುವ ಉದ್ದೇಶದಿಂದ ಕೆಆರ್‌ಎಸ್ ಹಿನ್ನೀರಿನ ಪ್ರದೇಶದಲ್ಲಿರುವ ಮಲ್ಲಿಗೆರೆ ಏತನೀರಾವರಿ ಯೋಜನೆಯಲ್ಲಿ ಡಿಂಕಾ, ಬನ್ನಂಗಾಡಿ, ಕಟ್ಟೇರಿ ಹಾಗೂ ಹೊನಗಾನಹಳ್ಳಿ ಗ್ರಾಪಂ ವ್ಯಾಪ್ತಿ ಸುಮಾರು 18 ಕೆರೆಗಳನ್ನು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದೆ.
ಈಗಾಗಲೇ ಯೋಜನೆಯ ಕಾಮಗಾರಿ ಆರಂಭಗೊಂಡಿದೆ. ಸುಮಾರು 600 ಮೀಟರ್ ಉದ್ದದಷ್ಟು ಪೈಪ್‌ಲೈನ್ ಕೆಲಸ ನಡೆದಿದೆ. ಕೆಲಸ ಪೂರ್ಣಗೊಂಡರೆ, ಕೆಆರ್‌ಎಸ್‌ನಲ್ಲಿ ಕೇವಲ 90 ಅಡಿ ನೀರಿದ್ದರೂ ಕೆಆರ್‌ಎಸ್‌ನಿಂದ ಕೆರೆಗಳಿಗೆ ನೀರು ತುಂಬಿಸಬಹುದಾಗಿದೆ ಎಂದು ತಿಳಿಸಿದರು.
ಗಂಗಾಮಾತೆಗೆ ಗೌರವ: ಬೇಬಿಮಠದ ಶ್ರೀತ್ರಿನೇತ್ರ ಮಹಂತಶಿವಯೋಗಿ ಸ್ವಾಮೀಜಿ ಮಾತನಾಡಿ, ಜಗತ್ತಿನಲ್ಲಿ ಕೆರೆಗಳಿಗೆ ಬಾಗಿನ ಅರ್ಪಿಸುವ ಸಂಸ್ಕೃತಿ ಹೊಂದಿದೆ ಎಂದರೆ ಅದು ನಮ್ಮ ಭಾರತ ದೇಶದಲ್ಲಿ ಮಾತ್ರ. ನೀರನ್ನು ಗಂಗಾಮಾತೆ ಎಂದು ಕರೆಯುವ ನಾವು, ನಮ್ಮ ತಾಯಿಗೆ ಹೇಗೆ ಗೌರವ ಕೊಡುತ್ತೇವೆಯೋ, ಹಾಗೇ ಗಂಗಾಮಾತೆಯನ್ನುಗೌರವಿಸುತ್ತೇವೆ. ಹೀಗಾಗಿ ನೀರು ಪಾವಿತ್ರತೆಯನ್ನು ಹೊಂದಿದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ನದಿಗಳ ಜೋಡಣೆ ಹಾಗೂಕೆರೆ, ಕಟ್ಟೆಗಳ ಸಂರಕ್ಷಣೆಯನ್ನು ಮಾಡಬೇಕಾಗಿದೆ. ಇಲ್ಲವಾದರೆ, ಮುಂದಿನ ದಿನಗಳಲ್ಲಿ ನಮ್ಮ ಮನುಕುಲ ಅಪಾರವಾದ ಸಮಸ್ಯೆ ಎದುರಿಸಬೇಕಾ ಗುತ್ತದೆ ಎಂದು ಬೇಸರವ್ಯಕ್ತಪಡಿಸಿದರು.
ತಾಪಂ ಸದಸ್ಯ ಅಲ್ಪಳ್ಳಿ ಗೋವಿಂದಯ್ಯ, ಸಣ್ಣನೀರಾವರಿ ಇಲಾಖೆ ಎಇಇ ಶ್ರೀನಿವಾಸಲು, ಎಇ ಕೋಡಿಗೌಡ, ಟಿ.ಪಿ.ಶಿವಕುಮಾರ್, ಪಿಡಿಒ ತಮ್ಮಣ್ಣ, ಮುಖಂಡರಾದ ಚಂದ್ರಪ್ಪ, ಗಿರೀಶ್, ಚಿಕ್ಕಪಾಪಣ್ಣ, ಮಹದೇವಪ್ಪ, ನಿಂಗೇಗೌಡ, ಸ್ವಾಮಿ, ನಾಗರಾಜು, ಬಿ.ಪಿ.ಪುಟ್ಟರಾಜು, ವೈದ್ಯನಾಥ್ ಹಾಜರಿದ್ದರು.