ನನಗೆ ಬದರಿಯನ್ನು ಕಾಣಬೇಕೆಂಬ ಹಂಬಲ ಬಹಳ ಇತ್ತು. ಯಾಕೆಂಬುದಕ್ಕೆ ಉತ್ತರ ಗಳಿರಲಿಲ್ಲ. ಸುತ್ತಲೂ ಹಿಮಾಲಯದಿಂದ ಆವೃತ್ತವಾದ ಪ್ರದೇಶ, ಹತ್ತಿರದಲ್ಲೇ ಹರಿ ಯುವ ಅಲಕಾನಂದ, ಮಧ್ಯದಲ್ಲಿರುವ ಬದರೀನಾಥ-ಹೀಗೆಲ್ಲ ಹೋಗಿ ಬಂದವರಲ್ಲಿ ಕೇಳಿದ್ದೆ. ಕೆಲವು ಪತ್ರಿಕೆಗಳಲ್ಲಿ ಬಂದ ಲೇಖನಗಳನ್ನೂ ಓದಿದ್ದೆ. ಅದೂ ಒಂದು ಕಾರಣವಿರಬಹುದು. ನನಗೆ ಮೊದಲಿಂದಲೂ ಲ್ಯಾಂಡ್‌ಸ್ಕೇಪ್ ಗಳೆಂದರೆ ಇಷ್ಟ. ಸುತ್ತಲೂ ಹಸಿರು, ಜಲಪಾತ, ಕಣಿವೆ ಎಂದರೆ ಖುಷಿ.
ಒಮ್ಮೆ ಹರಿದ್ವಾರ, ಋಷಿಕೇಶ ಎಲ್ಲವೂ ತಿರುಗಿ ಬದರೀನಾಥಕ್ಕೆ ಹೋದೆವು. ಸುತ್ತಲೂ ಹಿಮಾ ಲಯ. ನನ್ನ ಲ್ಯಾಂಡ್‌ಸ್ಕೇಪ್‌ನ ಹಂಬಲ ತಣಿಯಿತು. ಬದರೀನಾಥನ ದರ್ಶನ ಬಹಳ ಚೆನ್ನಾಗಿ ಆಯಿತು. ಅಲಕಾನಂದ ಶುಭ್ರತೆ ಕಂಡು ಬೆರಗಾದೆ.
ಎಲ್ಲವೂ ಮುಗಿದು, ಮರುದಿನ ನಾವು ನಾಲ್ಕೇ ಮಂದಿ ಅಲ್ಲೇ ಹತ್ತಿರದ (ಸುಮಾರು 7 ಕಿಮೀ) ವಸುಧಾರಾ ಜಲಪಾತ ನೋಡಲು ಹೊರಟೆವು. ಏರುಹಾದಿಯಲ್ಲಿ ಏಳು ಕಿ.ಮೀ ನಡೆಯಬೇಕು. ನಡೆಯಲು ಆರಂಭಿಸಿದೆವು. ಒಬ್ಬರ ಹಿಂದೆ ಒಬ್ಬರು. ನಾನು ಕಡೆಯವನಲ್ಲಿದ್ದೆ. ಸುಮಾರು 5 ಕಿ.ಮೀ ಎತ್ತರಕ್ಕೆ ಹೋದ ಮೇಲೆ ದಣಿವಾಯಿತು, ಅಲ್ಲೇ ಕೆಳಗೆ ಕುಳಿತು ಸುತ್ತಲೂ ಗಮನಿಸಿದೆ. ಸಂಪೂರ್ಣ ಹಿಮಾಲಯ ನನ್ನನ್ನು ಆವರಿಸಿತ್ತು. ನಾನೊಬ್ಬನೇ ಅಲ್ಲಿ. ಯಾವ ಗದ್ದಲವೂ ಇಲ್ಲ. ನನ್ನ ಗೆಳೆಯರೂ ದೂರ ಸಾಗಿದ್ದರು. ನಾನು ಕೈಯಿಂದಲೇ ಬರುವುದಾಗಿ ಸನ್ನೆ ಮಾಡಿದ್ದೆ. ಕೆಳಗೆ ಹರಿಯುವ ನದಿ, ಹಸಿರು ಎಲ್ಲವೂ ಇತ್ತು. ಅಲ್ಲಿದ್ದ ಆ ನೀರವ ಮೌನ ಇದುವರೆಗೆ ಅನುಭವಿಸದ ಸಂಗತಿಯಾಗಿತ್ತು. ನನ್ನ ಎದೆಯುಸಿರು ನನಗೆ ಕೇಳಿಸುವಷ್ಟು ನಿಶ್ಶಬ್ದ. ಅಲ್ಲೇ ಹತ್ತು ನಿಮಿಷ ಕಣ್ಮುಚ್ಚಿಕೊಂಡು ಕುಳಿತೆ. ಮನದೊಳಗೂ ಮೌನ ವ್ಯಾಪಿಸಿದಂತಾಯಿತು. ಆಗಿನ ಖುಷಿ ನನಗೆ ಬದುಕಿನಲ್ಲಿ ಹೊಸತನ ವನ್ನು ತುಂಬಿದ್ದು ನಿಜ. ಯಾಕೆಂದರೆ, ಮೌನ-ನಿಶ್ಶಬ್ದದ ಮೌಲ್ಯ ಅರಿವಾದದ್ದೇ ಆಗ.
ಅಂದಿನಿಂದ ನಿತ್ಯವೂ ರಾತ್ರಿಯೋ, ಬೆಳಗ್ಗೆಯೋ ಹತ್ತು ನಿಮಿಷ ಅಂಥದೊಂದು ಮೌನವನ್ನು ನನ್ನೊಳಗೆ ಸ್ಥಾಪಿಸಲು ಪ್ರಯತ್ನಿಸು ತ್ತೇನೆ. ಆ ಪ್ರಯತ್ನವೇ ನನ್ನನ್ನು ಇಂದಿಗೂ ಹಿಂದಿಗಿಂತ ಹೆಚ್ಚು ಖುಷಿಯಾಗಿಟ್ಟಿದೆ. ಎರಡು ವರ್ಷಕ್ಕೊಮ್ಮೆಯಾದರೂ ನನ್ನ ಧ್ಯಾನ ಸ್ಥಳಕ್ಕೆ ಭೇಟಿ ನೀಡಿ ಬರುತ್ತಿದ್ದೇನೆ.
ಶ್ಯಾಮಲಾ, ಉಡುಪಿ