ಧಾರವಾಡ: ಬೆಂಗಳೂರಿನ ಕಿರಣಕುಮಾರ ಮತ್ತು ದೀಪ್ತಿ ರಮೇಶ ಅವರು 3ನೇ ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟದ ಅನುಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಶೆಟಲ್ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಬಾಚಿದ್ದಾರೆ.
ಎಸ್‌ಡಿಎಂ ಡೆಂಟಲ್ ಬ್ಯಾಡ್ಮಿಂಟನ್ ಹಾಲ್‌ನಲ್ಲಿ ಗುರುವಾರ ನಡೆದ ಪುರುಷರ ಫೈನಲ್‌ನಲ್ಲಿ ಕಿರಣಕುಮಾರ ಅವರು ಅನಿರುದ್ಧ ದೇಶಪಾಂಡೆ ವಿರುದ್ಧ ಜಯಸಿ ಚಿನ್ನದ ಪದಕ ಗೆದ್ದರು. ಮಹಿಳೆಯರ ಫೈನಲ್‌ನಲ್ಲಿ ದೀಪ್ತಿ ರಮೇಶ 21-10, 21-8ರಿಂದ ಸುಲಭವಾಗಿ ಹುಬ್ಬಳ್ಳಿಯ ಮೇಘನಾ ಕುಲಕರ್ಣಿ ವಿರುದ್ಧ ಜಯ ಸಾಧಿಸಿದರು. ಮೇಘನಾ ರಜತ ಪದಕಕ್ಕೆ ಸಮಾಧಾನಗೊಂಡರು.
ಮಿಶ್ರ ಡಬಲ್ಸ್: ಮಿಶ್ರ ಡಬಲ್‌ನಲ್ಲಿ ಮೇಘನಾ ಕುಲಕರ್ಣಿ ಬೆಂಗಳೂರಿನ ಕಿರಣಕುಮಾರ ಜೊತೆಯಲ್ಲಿ ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ಶಿವಕುಮಾರ ಮತ್ತು ದೀಪ್ತಿ ರಮೇಶ ವಿರುದ್ಧ 21-17, 14-21, 21-15 ರಿಂದ ಜಯ ಗಳಿಸಿ ಆತಿಥೇಯರಿಗೆ ಚಿನ್ನದ ಪದಕ ತಂದು ಕೊಟ್ಟರು.
ಮಹಿಳೆಯರ ಡಬಲ್ಸ್‌ನಲ್ಲಿ ಹುಬ್ಬಳ್ಳಿಯ ಮೇಘನಾ ಮತ್ತು ಬೆಂಗಳೂರಿನ ಸವಿತಾ ಅವರು ಫೈನಲ್‌ನಲ್ಲಿ 21-12, 21-13 ರಿಂದ ಬೆಂಗಳೂರಿನ ಪೂಜಾ ಕಡೇಕರ ಮತ್ತು ಹುಬ್ಬಳ್ಳಿಯ ನವ್ಯಾ ಕಡೇಕರ ಮೇಲೆ ಸುಲಭ ಜಯದಿಂದ ಚಿನ್ನದ ಪದಕ ಗಳಿಸಿದರು.
ಮೇಘನಾ 2 ಚಿನ್ನ ಮತ್ತು 1 ಕಂಚಿನ ಪದಕ ಕೊರಳಿಗೇರಿಸಿಕೊಂಡರು. ಪುರುಷರ ಡಬಲ್ಸ್‌ನಲ್ಲಿ ಕಿರಣಕುಮಾರ ಮತ್ತು ವಸಂತಕುಮಾರ ಅವರು 21-17, 21-13 ರಿಂದ ಕುಶಲ್‌ರಾಜ ಮತ್ತು ಮಧುಸೂಧನ್ ಮೇಲೆ ಫೈನಲ್ ನಲ್ಲಿ ಜಯ ಗಳಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.