ಬದಿಯಡ್ಕ : ಹಿರಿಯ ದಂತ ವೈದ್ಯ ಡಾ| ಕೃಷ್ಣಮೂರ್ತಿ ಸರ್ಪಂಗಳ ಅವರ ನಿಗೂಢ ಸಾವಿನ ಕುರಿತ ಸಮಗ್ರ ತನಿಖೆಯ ಅಂಗ ವಾಗಿ ಕುಂದಾಪುರದ ಪೊಲೀಸ್ ಇನ್‌ಸ್ಪೆಕ್ಟರ್ ಗೋಪಿಕೃಷ್ಣ ನೇತೃತ್ವದ ಪೊಲೀಸರ ತಂಡ ಮಂಗಳವಾರ ಬದಿಯಡ್ಕಕ್ಕೆ ಆಗಮಿಸಿ ಸ್ಥಳೀಯ ಪೊಲೀಸರಿಂದ ಮಾಹಿತಿ ಕಲೆಹಾಕಿತು.
ನ. 8ರಂದು ಡಾ| ಕೃಷ್ಣಮೂರ್ತಿ ಅವರು ಕ್ಲಿನಿಕ್‌ನಿಂದ ತೆರಳಿ ನಾಪತ್ತೆಯಾಗಿದ್ದರು. ಮರುದಿನ ಕುಂದಾಪುರ ಸಮೀಪದ ತೀರಾ ಗ್ರಾಮೀಣ ಭಾಗದ ರೈಲು ಹಳಿಯಲ್ಲಿ ಛಿದ್ರವಾಗಿದ್ದ ಮೃತ
ದೇಹವೊಂದು ಪತ್ತೆಯಾಗಿತ್ತು. ನ. 10ರಂದು ಕೃಷ್ಣಮೂರ್ತಿ ಅವರ ಪುತ್ರಿ ಅದು ತನ್ನ ತಂದೆಯದೇ ದೇಹ ಎಂದು ಗುರುತಿಸಿದ್ದರು. ಅತ್ತ ಬದಿಯಡ್ಕ ಪೊಲೀಸರು ವೈದ್ಯರ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ವೈದ್ಯರ ಸಾವಿಗೆ ಕಾರಣರಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಐವರನ್ನು ಬಂಧಿಸಿದ್ದರು.
ಇತ್ತ ಪ್ರಕರಣದ ಸಮಗ್ರ ತನಿಖೆ ನಡೆಸಬೇಕೆಂದು ಡಾ| ಕೃಷ್ಣಮೂರ್ತಿ ಅವರ ಪುತ್ರಿ ಡಾ| ವರ್ಷಾ ಮಂಗಳೂರಿನಲ್ಲಿ ಕರ್ನಾಟಕದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಉಡುಪಿಯ ಎಸ್‌ಪಿ ಅಕ್ಷಯ್ ಮಚ್ಚಿಂದ್ರ ಹಾಕೆ ಅವರ ಆದೇಶದಂತೆ ಕುಂದಾಪುರ ಪೊಲೀಸರು ಕೂಡ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ : ಹಾಡಹಗಲೇ ಕಲಬುರಗಿಯಲ್ಲಿ ಮಾರಾಕಾಸ್ತ್ರದಿಂದ ದಾಳಿ ಮಾಡಿ ವಿದ್ಯಾರ್ಥಿಯ ಕೊಲೆ