ಬದಿಯಡ್ಕ: ಕನ್ನಡ ಮ್ಯಾಟ್ರಿಮೊನಿ ಆ್ಯಪ್ ಮೂಲಕ ಪರಿಚಯಗೊಂಡ ಇಂಗ್ಲೆಂಡ್‌ನಲ್ಲಿ ವಾಸಿಸುವ ಯುವತಿ ಕುಂಬ್ಡಾಜೆ ನಿವಾಸಿಯ 5,67,299 ರೂ. ಲಪಟಾಯಿಸಿರುವುದಾಗಿ ದೂರು ನೀಡಲಾಗಿದೆ.
ಇದರಂತೆ ಬದಿಯಡ್ಕ ಪೊಲೀಸರು ಇಂಗ್ಲೆಂಡ್‌ನಲ್ಲಿ ವಾಸಿಸುವ ಪ್ರಿಯಾಂಕ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಕುಂಬ್ಡಾಜೆ ಮವ್ವಾರು ಪಾವೂರು ನಿವಾಸಿ ಪಿ.ಅಶ್ವಿನ್ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ.
ಅಶ್ವಿನ್ ಕನ್ನಡ ಮ್ಯಾಟ್ರಿಮೊನಿ ಆ್ಯಪ್ ಮೂಲಕ ಪ್ರಿಯಾಂಕ ಎಂಬ ಹೆಸರಿನಲ್ಲಿ ಪರಿಚಯಗೊಂಡ ಯುವತಿ ತಾನು ಇಂಗ್ಲೆಂಡ್‌ನಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದ್ಧಳು. ಅನಂತರ ಅವರಿಬ್ಬರು ವಾಟ್ಸಪ್ ಮೂಲಕ ಮಾತುಕತೆ ನಡೆಸಿದ್ದರೆನ್ನಲಾಗಿದೆ. ಈ ಮಧ್ಯೆ ಬೆಲೆ ಬಾಳುವ ಸಾಮಗ್ರಿಗಳು ಹಾಗು ಡಾಲರ್ ಪಾರ್ಸೆಲ್ ಮೂಲಕ ಕಳುಹಿಸಿಕೊಟ್ಟಿರುವುದಾಗಿಯೂ, ಅವು ಲಭಿಸಬೇಕಾದರೆ 5 ಲಕ್ಷ ರೂಪಾಯಿ ಕಳುಹಿಸಿಕೊಡಬೇಕೆಂದು ಪ್ರಿಯಾಂಕ ತಿಳಿಸಿದ್ದಳು. ಅದರಂತೆ 2023 ಡಿ.23 ರಿಂದ 2024 ಜನವರಿ 8 ರ ವರೆಗಿನ ಕಾಲಾವಧಿಯಲಲ್ಲಿ 5,67,299 ರೂ.ಕಳುಹಿಸಿಕೊಟ್ಟಿರುವುದಾಗಿ ಅಶ್ವಿನ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಹಣ ಕಳುಹಿಸಿಕೊಟ್ಟ ನಂತರ ಪ್ರಿಯಾಂಕಳ ಕುರಿತು ಯಾವುದೇ ಮಾಹಿತಿ ಲಭಿಸಿಲ್ಲ. ಆಕೆ ಕಳುಹಿಸಿದ್ದಾಳೆನ್ನಲಾದ ಯಾವುದೇ ಸಾಮಗ್ರಿಗಳು ಲಭಿಸಿಲ್ಲ. ಇದರಿಂದ ವಂಚನೆಗೀಡಾಗಿರುವುದಾಗಿ ತಿಳಿದ ಅಶ್ವಿನ್ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ.
ಹಾನಿಗೀಡಾದ ಚಂದ್ರಗಿರಿ ರಸ್ತೆ : ವ್ಯಾಪಕ ಪ್ರತಿಭಟನೆ
ಕಾಸರಗೋಡು: ಕಾಸರಗೋಡು ಕಾಂಞಂಗಾಡ್ ರಾಜ್ಯ ರಸ್ತೆಯಲ್ಲಿ ಚಂದ್ರಗಿರಿ ಸೇತುವೆ ಬಳಿ ಇಂಟರ್‌ಲಾಕ್ ನಡೆಸಿ ದುರಸ್ತಿಗೊಳಿಸಿದ ರಸ್ತೆ ಮತ್ತೆ ಹಾನಿಗೀಡಾಗಿದ್ದು, ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ. ರಸ್ತೆ ಕಾಮಗಾರಿಯಲ್ಲಿ ನಡೆದ ಲೋಪದೋಷವೇ ಮತ್ತೆ ಹಾನಿಗೀಡಾಗಲು ಕಾರಣವೆಂದು ಆರೋಪಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಮುಸ್ಲಿಂ ಯೂತ್ ಲೀಗ್ ಕಾಸರಗೋಡು ಮುನಿಸಿಪಲ್ ಕಮಿಟಿ ನೇತೃತ್ವದಲ್ಲಿ ಕಾರ್ಯಕರ್ತರು ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯೂಟೀವ್ ಎಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿದರು. ಬಳಿಕ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ತೆರವುಗೊಳಿಸಿದರು.
ಕಾಸರಗೋಡು ಪ್ರಸ್ ಕ್ಲಬ್ ಜಂಕ್ಷನ್‌ನಿಂದ ಚಂದ್ರಗಿರಿ ರಸ್ತೆಯಲ್ಲಿ 25 ಲಕ್ಷ ರೂ. ಖರ್ಚು ಮಾಡಿ ಇತ್ತೀಚೆಗಷ್ಟೇ ಇಂಟರ್‌ಲಾಕ್ ಅಳವಡಿಸಲಾಗಿತ್ತು. ಆದರೆ ಕೆಲಸ ಮುಗಿದು ಕೆಲವೇ ಗಂಟೆಗಳೊಳಗೆ ರಸ್ತೆ ಹಾನಿಗೀಡಾಗಿದೆ. ವಾಹನಗಳು ಸಂಚರಿಸತೊಡಗಿದಾಗ ಒಂದು ಭಾಗದಲ್ಲಿ ಇಂಟರ್‌ಲಾಕ್ ಹೂತುಹೋಗಿದ್ದು, ಮತ್ತೂಂದು ಭಾಗದಲ್ಲಿ ಅಲುಗಾಡತೊಡಗಿದೆ. ಘನ ವಾಹನಗಳು ಸಂಚರಿಸಿದುದೇ ಇಂಟರ್‌ಲಾಕ್ ಹಾನಿಗೀಡಾಗಲು ಕಾರಣವೆಂದು ಸಂಬಂಧಪಟ್ಟವರು ಹೇಳುತ್ತಿದ್ದಾರೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಹಾನಿಗೀಡಾದ ರಸ್ತೆಯನ್ನು ಮತ್ತೆ ದುರಸ್ತಿಗೊಳಿಸಲಾಗುತ್ತಿದೆ.