ಕುಂದಾಪುರ : ಡಾ| ಕೃಷ್ಣಮೂರ್ತಿ ಸರ್ಪಂಗಳ ಅವರ ನಿಗೂಢ ಸಾವಿನ ಪ್ರಕರಣ ಸಂಬಂಧ ಕುಂದಾಪುರ ಪೊಲೀಸರಿಂದ ತನಿಖೆ ನಡೆಯುತ್ತಿದ್ದು, ಕುಂದಾಪುರದ ಮೂಡ್ಲ ಕಟ್ಟೆಯ ರೈಲು ನಿಲ್ದಾಣ ದಿಂದ ಹಟ್ಟಿಯಂಗಡಿ ಕಡೆಗೆ ರೈಲು ಹಳಿಯಲ್ಲೇ ನಡೆದುಕೊಂಡು ಹೋಗಿರುವುದು ದೃಢಪಟ್ಟಿದೆ.
ಅವರ ದೇಹ ಕುಂದಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಹಟ್ಟಿಯಂಗಡಿ ಗ್ರಾಮದ ಕಾಡು ಅಜ್ಜಿಮನೆಯಲ್ಲಿಯ ರೈಲು ಹಳಿಯಲ್ಲಿ ನ. 9ರಂದು ಬೆಳಗ್ಗೆ ಪತ್ತೆಯಾಗಿತ್ತು.
ನ. 8ರಂದು ಮಧ್ಯಾಹ್ನ ತಮ್ಮ ಕ್ಲಿನಿಕ್‌ನಿಂದ ಹೊರಟು ಹೋದ ವೈದ್ಯರು ನಾಪತ್ತೆಯಾಗಿದ್ದರು. ಅದೇ ದಿನ ಕುಂದಾಪುರದ ಶಾಸಿŒ ಸರ್ಕಲ್ ಬಳಿಯಿಂದ ಖಾಸಗಿ ಬಸ್‌ನಲ್ಲಿ ಸಿದ್ದಾಪುರ ಕಡೆಗೆ ಸಂಚರಿಸಿದ್ದು, ದಾರಿ ಮಧ್ಯೆ ಎಲ್ಲಿಯೋ ಇಳಿದು ರಿಕ್ಷಾದಲ್ಲಿ ಮೂಡ್ಲಕಟ್ಟೆಯ ರೈಲು ನಿಲ್ದಾಣಕ್ಕೆ ಸಂಜೆ 5.40ರ ಸುಮಾರಿಗೆ ಬಂದಿರು ವುದು, ಬಳಿಕ ರೈಲ್ವೇ ಪ್ಲಾಟ್‌ಫಾರಂ ಮೂಲಕ ಮುಂದಕ್ಕೆ ನಡೆದು ಕೊಂಡು ಹೋಗುತ್ತಾ ಹಾಕಿದ್ದ ಬಟ್ಟೆಯನ್ನು ಬದಲಿಸಿಕೊಳ್ಳುತ್ತಿರುವ ದೃಶ್ಯ ಅಲ್ಲಿನ ಸಿಸಿ ಕೆಮರಾದಲ್ಲಿ ದಾಖಲಾಗಿದೆ.
ಆತ್ಮಹತ್ಯೆಯ ಬಳಿಕ ಗುರುತು ಸಿಗಬಾರದೆಂದು ಈ ರೀತಿ ಧರಿಸಿದ್ದ ಬಟ್ಟೆಯನ್ನು ಬದಲಿಸಿರಬಹುದು ಎನ್ನಲಾಗುತ್ತಿದೆ. ಹಾಗೇ ಮುಂದಕ್ಕೆ ಸುಮಾರು 5 ಕಿ.ಮೀ. ದೂರದ ಹಟ್ಟಿಯಂಗಡಿ ವರೆಗೆ ಹಳಿಯಲ್ಲಿಯೇ ನಡೆದು ಹೋಗಿರಬಹುದು ಎನ್ನುವ ಶಂಕೆ ಇದೆ. ಅವರಲ್ಲಿದ್ದ ಬ್ಯಾಗ್‌ಗಾಗಿ ಶೋಧ ಮುಂದುವರಿದಿದೆ. ಅದು ಲಭಿಸಿದರೆ ತನಿಖೆಗೆ ಪೂರಕವಾಗ ಬಹುದೆಂಬ ನಿರೀಕ್ಷೆ ಪೊಲೀಸರದು.
ದೇವರಿಗೆ ಮೊರೆ
ಕುಂಬಳೆ: ದಂತ ವೈದ್ಯ ಡಾ| ಕೃಷ್ಣಮೂರ್ತಿ ಅವರ ನಿಗೂಢ ಸಾವಿಗೆ ಕಾರಣವಾಗಿರುವ ಶಕ್ತಿಗಳನ್ನು ಮಟ್ಟಹಾಕುವಂತೆ ದೇವರಿಗೆ ಮೊರೆಹೊಗಲು ಮುಳ್ಳೇರಿಯ ಹವ್ಯಕ ಮಂಡಲ ನಿರ್ಣಯಿಸಿದೆ. ಅದರಂತೆ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ನ. 23ರ ಬೆಳಗ್ಗೆ 9.30ಕ್ಕೆ ರುದ್ರ ಪಾರಾಯಣ, 10.30ಕ್ಕೆ ಮಾತೆಯರಿಂದ ಶಿವಪಂಚಾಕ್ಷರೀ ಸ್ತೋತ್ರ ಪಠನ ಮತ್ತು ಸಾಮೂಹಿಕ ಪ್ರಾರ್ಥನೆ ನಡೆಸಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ವಿನಂತಿಸಲಾಗಿದೆ.