Advertisement
ಡೆಂಗ್ಯೂ ಮೊದಲಾದ ಪ್ರಾಣಹಾನಿಕರ ರೋಗಗಳು ಬಾಧಿಸಿ ಚಿಕಿತ್ಸೆಗೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಆಸ್ಪತ್ರೆ ಇದ್ದರೆ ವೈದ್ಯರಿಲ್ಲ, ವೈದ್ಯರಿದ್ದರೆ ವ್ಯವಸ್ಥೆ ಇಲ್ಲ ಎಂಬಂತಾಗಿದೆ. ಇದಕ್ಕೆ ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರವೂ ಹೊರತಲ್ಲ. ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆಯಿಂದ ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ನೀಡುವ ವ್ಯವಸ್ಥೆ ಮೊಟಕುಗೊಂಡಿರುವುದಲ್ಲದೆ ಹೊರ ರೋಗಿ ವಿಭಾಗದಲ್ಲಿಯೂ ಬಡರೋಗಿಗಳು ಚಿಕಿತ್ಸೆಗಾಗಿ ಅದೆಷ್ಟೋ ಹೊತ್ತು ಕ್ಯೂ ನಿಲ್ಲಬೇಕಾಗಿ ಬಂದಿದೆ. ಹವಾಮಾನ ವೈಪರೀತ್ಯದಿಂದ ಅನೇಕ ಮಂದಿಗೆ ಜ್ವರ ಹಾಗೂ ಇನ್ನಿತರ ರೋಗಗಳು ಬಾಧಿಸಿದ್ದು, ರೋಗಿಗಳ ಸಂಖ್ಯೆಯಲ್ಲಿಯೂ ಹೆಚ್ಚಳವುಂಟಾಗಿದೆ.
Related Articles
Advertisement
ರೋಗಿಗಳ ಪರದಾಟಅಸೌಖ್ಯ ಬಾಧಿಸಿ ಹಲವರು ಆಸ್ಪತ್ರೆಗೆ ಬಂದಾಗ ಇಲ್ಲಿನ ನಾಲ್ಕು ಮಂದಿ ವೈದ್ಯರು ಅಪರಾಹ್ನ 3 ಗಂಟೆ ತನಕ ತಪಾಸಣೆ ನಡೆಸಿ ಮರಳುತ್ತಾರೆ. ಸಂಜೆ 5 ಗಂಟೆಗೆ ದಾದಿಯರ ಸಹಿತ ಎಲ್ಲ ನೌಕರರೂ ಮರಳುತ್ತಿದ್ದು, ಅನಂತರ ಬರುವ ರೋಗಿಗಳಿಗೆ ಚಿಕಿತ್ಸೆ ಲಭಿಸುತ್ತಿಲ್ಲ. ಹಗಲು ಹೊತ್ತಿನಲ್ಲಿ ಬರುವ ರೋಗಿಗಳ ಪೈಕಿ ದಾಖಲಾಗಿ ಚಿಕಿತ್ಸೆ ಪಡೆಯಬೇಕಾದಲ್ಲಿ ಕಾಸರಗೋಡಿನ ಸರಕಾರಿ ಆಸ್ಪತ್ರೆಗೆ ಅಥವಾ ಇತರ ಖಾಸಗಿ ಆಸ್ಪತ್ರೆಗಳಿಗೆ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದೇ ಸ್ಥಿತಿ ಮುಂದುವರಿದರೆ ಈ ಭಾಗದ ಬಡ ರೋಗಿಗಳು ತೀವ್ರ ಸಂಕಷ್ಟ ಅನುಭವಿಸಲಿದ್ದಾರೆ. ಈ ಬಗ್ಗೆ ಅಧಿಕಾರಿಗಳು ತುರ್ತು ಗಮನ ಹರಿಸಿ ಅಗತ್ಯವುಳ್ಳ ವೈದ್ಯರನ್ನು ಹಾಗೂ ಸಿಬಂದಿಯನ್ನು ನೇಮಕಗೊಳಿಸಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸಮಸ್ಯೆ ಪರಿಹರಿಸಿ
ಬದಿಯಡ್ಕ ಪಂಚಾಯತ್‌ನ ಜನರಿಗೆ ಆಶ್ರಯವಾಗಿ ಇದೊಂದೇ ಆಸ್ಪತ್ರೆಯಿರುವುದು. ಆದರೆ ಸೂಕ್ತ ಚಿಕಿತ್ಸೆ ನೀಡಿ ಜನರಿಗೆ ನೆಮ್ಮದಿ ತರುವಲ್ಲಿ ಇದು ಸೋಲುತ್ತಿರುವುದು ಬೇಸರದ ವಿಷಯ. ನೇಮಕಗೊಂಡ ವೈದ್ಯರು ಹಾಗೂ ದಾದಿಯಂದಿರು ಎರಡೇ ತಿಂಗಳಲ್ಲಿ ವರ್ಗವಾಗಿ ಹೋಗುವುದು ಕಂಡುಬರುತ್ತದೆ. ಈ ಎಲ್ಲ ಸಮಸ್ಯೆಗಳನ್ನು ಸಕಾಲದಲ್ಲಿ ಪರಿಹರಿಸಿ ಜನರಿಗೆ ಸರಿಯಾದ ಚಿಕಿತ್ಸೆ ನೀಡುವಂತಾಗಬೇಕು.
– ನರೇಂದ್ರ.ಬಿ,
ಅಧ್ಯಕ್ಷರು, ಟ್ರೇಡರ್ ವೆಲ್ಫೆರ್ ಸೊಸೈಟಿ. -ಅಖೀಲೇಶ್ ನಗುಮುಗಂ