ಚಾಮರಾಜನಗರ : ‘ಕಾಂಗ್ರೆಸ್ ಕಾರ್ಯಕರ್ತರಿಗೇ ಸಿದ್ದರಾಮಯ್ಯ ಬೈದಿದ್ದು, ಬಾದಾಮಿ ಕ್ಷೇತ್ರದಲ್ಲೂ ಅವರನ್ನ ಸೋಲಿಸಲು ಕಾಯುತ್ತಿದ್ದಾರೆ’ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ಚಾಮರಾಜನಗರದಲ್ಲಿ ನಡೆದ ಜನಸ್ವರಾಜ್ ಯಾತ್ರೆಯಲ್ಲಿ ಮಾತನಾಡಿದ ಅವರು, ‘ಮುಂದಿನ ಚುನಾವಣೆಯಲ್ಲಿ ಎಲ್ಲರೂ ಸೇರಿಕೊಂಡು ಸಿದ್ದರಾಮಯ್ಯ ಅವರನ್ನು ಸೋಲಿಸುತ್ತಾರೆ. ಉಪಚುನಾವಣೆಯಲ್ಲಿ ಕುರುಬರ ನಾಯಕ ನಾನೆ ಎಂದು ಸಿದ್ದರಾಮಯ್ಯ ಪ್ರಚಾರ ಮಾಡಿದರು.ಸಿಂದಗಿಯಲ್ಲಿ 35 ಸಾವಿರ ಕುರುಬರ ಮತಗಳು ಇದ್ದವಾದರೂ ಬಿಜೆಪಿ ಗೆದ್ದಿತು’ ಎಂದರು.
‘ಸುಳ್ಳಿಗೆ ಇನ್ನೊಂದೆ ಹೆಸರೇ ಸಿದ್ದರಾಮಯ್ಯ,ಕಾಂಗ್ರೆಸ್ ನಲ್ಲಿ ಎರಡು ಗುಂಪುಗಳಿದ್ದು, ಅಲ್ಪಸಂಖ್ಯಾತರ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಇದು ಜಗಜ್ಜಾಹೀರಾಗಿದೆ. ಲೋಕಸಭಾ ಚುನಾವಣೆಯಲ್ಲಿ ಈಗಾಗಲೇ ರಾಜ್ಯದ ಜನರು ದುರಹಾಂಕಾರದ ಕಾಂಗ್ರೆಸ್ ಗೆ ಬುದ್ಧಿ ಕಲಿಸಿದ್ದಾರೆ’ ಎಂದರು.
‘ಕಾಂಗ್ರೆಸ್ ನಿಂದ ಸೋಮಶೇಖರ್ ನೇತೃತ್ವದಲ್ಲಿ 17 ಜನರು ಬಿಜೆಪಿಗೆ ಬರದಿದ್ದರೆ ನಾನು ಮಂತ್ರಿಯಾಗುತ್ತಿರಲಿಲ್ಲ’ ಎಂದರು.
‘ಕಾಂಗ್ರೆಸ್ ಮುಳುಗುತ್ತಿರುವ ಹಡಗು.ಕಳೆದ ಬಾರಿ ಮೈಸೂರು-ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಲ್ಲಿ ದುಡ್ಡು ಹಂಚಿ ಗೆಲುವು ಸಾಧಿಸಿದರು.ಈ ಬಾರಿ ದುಡ್ಡು ತೆಗೆದುಕೊಳ್ಳುತ್ತೀರೋ ಬಿಡುತ್ತೀರೋ ಗೊತ್ತಿಲ್ಲಾ, ಆದರೆ ಈ ಬಾರಿ ರಘು ಕೌಟಿಲ್ಯ ಗೆ ಮತ ನೀಡಿ ಗೆಲ್ಲಿಸಿ. ರಘು ಕೌಟಿಲ್ಯ ವಿಜಯೋತ್ಸಕ್ಕೆ ನಾನು ಮತ್ತೆ ಚಾಮರಾಜನಗರಕ್ಕೆ ಬರುತ್ತೇನೆ’ ಎಂದರು.
‘ಲಸಿಕೆ ಹಾಕಿಸಿಕೊಂಡರೆ ಗಂಡಸ್ತನನ ಹೋಗುತ್ತದೆ ಎಂದು ಕಾಂಗ್ರೆಸ್ ನವರು ಅಪಪ್ರಚಾರ ಮಾಡಿದರು, ನಂತರದ ದಿನಗಳಲ್ಲಿ ಕಾಂಗ್ರೆಸ್ ನವರೇ ಕದ್ದು ಮುಚ್ಚಿ ಕ್ಯೂ ನಿಂತು ಲಸಿಕೆ ಹಾಕಿಸಿಕೊಂಡರು’ ಎಂದು ಸಚಿವ ಈಶ್ವರಪ್ಪ ಲೇವಡಿ ಮಾಡಿದರು.