ಬಾದಾಮಿ: ಕೆಶಿಪ್ ವತಿಯಿಂದ ನಿರ್ಮಿಸಲಾಗುತ್ತಿರುವ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿ ವಿಳಂಬ ಮತ್ತು ಸ್ಮಾರಕಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ವಿಳಂಬದಿಂದ ಈ ಬಾರಿ ಐತಿಹಾಸಿಕ ಬಾದಾಮಿಗೆ ಬರುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ.
ನಿರ್ಲಕ್ಷ್ಯ ಧೋರಣೆ
ಬಾದಾಮಿ ಪಟ್ಟಣದಲ್ಲಿ ಮತ್ತು ಬಾಚಿನಗುಡ್ಡದಿಂದ ರಾಂಪುರದವರೆಗೆ 8 ಕಿಮೀ. ರಸ್ತೆ ಕಾಮಗಾರಿ ಎರಡು ವರ್ಷದಿಂದ ಸ್ಥಗಿತವಾಗಿರುವುದರಿಂದ ಬಾದಾಮಿ, ಪಟ್ಟದಕಲ್ಲು ಮತ್ತು ಐಹೊಳೆ ಸ್ಮಾರಕಗಳಿಗೆ ಪ್ರವಾಸಿಗರು ಬಾರದೇ ಇರುವ ಕಾರಣ ಪ್ರವಾಸೋದ್ಯಮದ ಪರಿಣಾಮ ಬೀರಿದೆ ಎಂದು ಪುರಾತತ್ವ ಇಲಾಖೆಯ ದಾಖಲೆ ತಿಳಿಸುತ್ತವೆ.
ಹಿಂದಿನ ಎರಡು-ಮೂರು ವರ್ಷಗಳಲ್ಲಿ ಸ್ಮಾರಕಗಳಿಗೆ ಸಂದರ್ಶಿಸಿದ ಪ್ರವಾಸಿಗರ ಸಂಖ್ಯೆಯು ಅಕವಾಗಿದೆ. ಆದರೆ, ಕಳೆದ ಅಕ್ಟೋಬರ್, ನವೆಂಬರ್, ಡಿಸೆಂಬರ್ ಮತ್ತು ಜನವರಿಯಲ್ಲಿ ಪ್ರವಾಸಿಗರ ಸಂಖ್ಯೆ ಬಹಳಷ್ಟು ಇಳಿಮುಖವಾಗಿದೆ.
ಪಟ್ಟದಕಲ್ಲು ಹೆದ್ದಾರಿ ರಸ್ತೆ ಮುಕ್ತಾಯದ ಹಂತದಲ್ಲಿದೆ. ಆದರೆ, ಹೃದಯ ಯೋಜನೆಯಡಿ ಆರು ತಿಂಗಳ ಹಿಂದೆ ಪ್ರಾರಂಭವಾದ ಬಾದಾಮಿ ಮೇಣಬಸದಿಗೆ ಹೋಗುವ ಸಂಪರ್ಕ ರಸ್ತೆ ಕಾಮಗಾರಿ ಇನ್ನೂ ಆಮೆಗತಿಯಲ್ಲಿ ಸಾಗಿದೆ. ಗುಹಾಂತರ ದೇವಾಲಯ ವೀಕ್ಷಣೆಗೆ ಬಂದ ಪ್ರವಾಸಿಗರು ಇಲ್ಲಿ ಪರದಾಡುವಂತಾಗಿದೆ. ರಾಜ್ಯದ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಮೂಲಭೂತ ಸೌಕರ್ಯ ಒದಗಿಸಲು ಸುಮಾರು 500 ಕೋಟಿ ವಿಶೇಷ ಪ್ಯಾಕೇಜ್ ನೀಡಲು ಸಿಎಂ ಕುಮಾರಸ್ವಾಮಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದ್ದರು. ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯನವರು ಬಾದಾಮಿ, ಪಟ್ಟದಕಲ್ಲು, ಐಹೊಳೆ ಪ್ರವಾಸಿ ತಾಣ ಅಭಿವೃದ್ಧಿಗೆ 800 ಕೋಟಿ ಅನುದಾನ ಒದಗಿಸಲು ಪತ್ರ ಬರೆದು ಮನವಿ ಮಾಡಿದ್ದರು. ಆದರೆ 2019-20 ನೇ ಸಾಲಿನ ಬಜೆಟ್‌ನಲ್ಲಿ ಬಾದಾಮಿ ಪ್ರವಾಸಿ ತಾಣ ಅಭಿವೃದ್ಧಿಗೆ 25 ಕೋಟಿ ರೂ.ಅನುದಾನ ನೀಡಲಾಗಿದೆ.
ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯನವರ ವಿಶೇಷ ಕಾಳಜಿಯಿಂದ ಕೆರೂರ ಏತ ನೀರಾವರಿಗೆ 300 ಕೋಟಿ ರೂ., ಬಾದಾಮಿ ಐತಿಹಾಸಿಕ ಪ್ರವಾಸಿ ತಾಣಗಳ ಅಭಿವೃದ್ಧಿಗೆ 25 ಕೋಟಿ ರೂ., ಸೋಮನಕೊಪ್ಪ ಶ್ರದ್ದಾನಂದ ಮಠಕ್ಕೆ 1 ಕೋಟಿ ರೂ.ಅನುದಾನ ಮಂಜೂರಿಯಾಗಿದೆ. ಬರುವ ದಿನಗಳಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಿದೆ.
•ಮಹೇಶ ಹೊಸಗೌಡ್ರ,
ಸಿದ್ದರಾಮಯ್ಯ ಆಪ್ತ.
ಬಾದಾಮಿ ಐತಿಹಾಸಿಕ ತಾಣಗಳ ಅಭಿವೃದ್ಧಿಗೆ ರಾಜ್ಯ ಬಜೆಟ್‌ನಲ್ಲಿ 25 ಕೋಟಿ ರೂ. ಅನುದಾನ ನೀಡಲಾಗಿದೆ. ಈ ಅನುದಾನ ಸಾಲದು. ಬರುವ ದಿನಮಾನಗಳಲ್ಲಿ ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯನವರ ಪ್ರಭಾವದಿಂದ ಇನ್ನಷ್ಟು ಅನುದಾನ ತಂದು ಬಾದಾಮಿ ಪ್ರವಾಸಿ ತಾಣ ಅಭಿವೃದ್ಧಿಪಡಿಸಲು ಮನವಿ ಸಲ್ಲಿಸಲಾಗುವುದು.
•ಎಚ್.ಎಸ್.ವಾಸನ,
ಅಧ್ಯಕ್ಷರು ನಿಸರ್ಗ ಬಳಗ ಬಾದಾಮಿ.