ಬಾದಾಮಿ: 2007ರಲ್ಲಿ ಮಂಜೂರಾಗಿರುವ ಬಾದಾಮಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರಥಮ ದರ್ಜೆ ಪದವಿ ಕಾಲೇಜುಗಳಿಗೆ ಸ್ವಂತ ಕಟ್ಟಡವಿಲ್ಲ. ಪದವಿ ಕಾಲೇಜು ಪ್ರಾಥಮಿಕ ಶಾಲೆಯಲ್ಲಿ ಮತ್ತು ಪದವಿ ಪೂರ್ವ ಕಾಲೇಜು ತರಗತಿ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ.
ಪದವಿ ಪೂರ್ವ ಕಾಲೇಜು: ನಗರದ ಹೊರವಲಯದ ಸರ್ಕಾರಿ ಪ್ರೌಢಶಾಲೆಯಲ್ಲಿ ಎರಡು ಕೊಠಡಿ ಹೊಂದಿರುವ ಪದವಿ ಪೂರ್ವ ಕಾಲೇಜು 2007ರಲ್ಲಿ ಮಂಜೂರಾಗಿ ಕಾರ್ಯನಿರ್ವಹಿಸುತ್ತಿದೆ. ಸದರಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ದಾಖಲಾಗಿದ್ದು, ಅಗತ್ಯ ಕೊಠಡಿಗಳಿಲ್ಲದಿರುವುದರಿಂದ ಪಿಯು ಕಾಲೇಜು ವರ್ಗ ನಡೆಸುವುದು ತೊಂದರೆಯಾಗುತ್ತಿದೆ.
ಪದವಿ ಕಾಲೇಜು;ಸರ್ಕಾರಿ ಪದವಿ ಕಾಲೇಜು 2007ರಲ್ಲಿ ಮಂಜೂರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಸಹಿತ ಇದುವರೆಗೂ ಸ್ವಂತ ಕಟ್ಟಡ ಭಾಗ್ಯ ಒದಗಿಬಂದಿಲ್ಲ. ನ್ಯಾಕ್ ಮಾನ್ಯತೆಗೆ ಸ್ವಂತ ಕಟ್ಟಡ, ಮೈದಾನ, ಮೂಲಸೌಲಭ್ಯ, ಅಗತ್ಯ ಸಿಬ್ಬಂದಿ ಅಗತ್ಯ. ಆದರೆ ಈ ನಾಲ್ಕು ಅಂಶಗಳು ಇಲ್ಲಿನ ಸರಕಾರಿ ಕಾಲೇಜಿಗಿಲ್ಲ. ಪ್ರಸಕ್ತ ವರ್ಷ ಸುಮಾರು 485ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಪದವಿ ಕಾಲೇಜಿನ ತರಗತಿಗಳು ನಗರದ ಶಾಸಕರ ಮಾದರಿ ಶಾಲೆಯಲ್ಲಿ ತರಗತಿ ನಡೆಯುತ್ತಿದ್ದು, ಇದರಿಂದ ಪ್ರಾಥಮಿಕ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ. ಪದವಿ ಕಾಲೇಜಿನಲ್ಲಿ 10 ಜನ ಕಾಯಂ ಮತ್ತು 20 ಜನ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಇದೇ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪದವಿ ಕಾಲೇಜು ವರ್ಗಗಳು ನಡೆಯುವುದರಿಂದ ಬೆಳಗ್ಗೆ ಪದವಿ ತರಗತಿ ಮತ್ತು ಮಧ್ಯಾಹ್ನ ಪ್ರಾಥಮಿಕ ಶಾಲೆಯ ಮಕ್ಕಳಿಗೆ ವರ್ಗಗಳು ಪಾಳೆಯಾಧಾರದ ಮೇಲೆ ನಡೆಯುತ್ತಿವೆ. ಸ್ವಂತ ಕಟ್ಟಡ ಇಲ್ಲದೇ ಪದವಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಬಿಎಸ್‌ಸಿ ವಿಭಾಗ ಆರಂಭವಾಗಿಲ್ಲ; ಸದರಿ ಪದವಿ ಕಾಲೇಜು ಆರಂಭವಾಗಿನಿಂದ ಬಿಎಸ್‌ಸಿ ವಿಭಾಗ ಆರಂಭಕ್ಕೆ ಅನುಮತಿ ನೀಡಿದ್ದರೂ ಸಹಿತ ಇದುವರೆಗೂ ಕೊಠಡಿಗಳ ಕೊರತೆಯಿಂದ ಆರಂಭವಾಗಿಲ್ಲ. ಬಿಎಸ್‌ಸಿ ವಿಭಾಗಕ್ಕೆ ಪ್ರಯೋಗಾಲಯ, ಕೊಠಡಿ ಸೇರಿದಂತೆ ಹೆಚ್ಚಿನ ಕೊಠಡಿಗಳ ಅವಶ್ಯಕತೆಯಿದೆ.
ಪದವಿ ಕಾಲೇಜು ಮಿನಿ ವಿಧಾನಸೌಧಕ್ಕೆ ಸ್ಥಳಾಂತರ: ನೂತನ ಮಿನಿವಿಧಾನಸೌಧ ನಿರ್ಮಾಣಕ್ಕಾಗಿ ರೂ.10 ಕೋಟಿ ಅನುದಾನ ಮಂಜೂರಾಗಿದ್ದು, ಶೀಘ್ರ ಕಾಮಗಾರಿ ಆರಂಭವಾಗಲಿದೆ. ಮಿನಿವಿಧಾನಸೌಧಕ್ಕೆ ತಾಲೂಕಾಡಳಿತ ವರ್ಗಾವಣೆಯಾದ ನಂತರ ಪದವಿ ಕಾಲೇಜು ಯರಗೊಪ್ಪ ಕ್ರಾಸ್‌ನಲ್ಲಿರುವ ಮಿನಿವಿಧಾನಸೌಧಕ್ಕೆ ಸ್ಥಳಾಂತರವಾಗಲಿದೆ.