ಮಾಜಿತಾ(ಅಮೃತಸರ್): ಪಂಜಾಬ್ ನಲ್ಲಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕಾಂಗ್ರೆಸ್ ಪಕ್ಷದ ಹುರಿಯಾಳು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಅಧಿಕೃತವಾಗಿ ಘೋಷಿಸಿದ್ದು, ಒಂದು ವೇಳೆ ಜಿದ್ದಾಜಿದ್ದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಸಾಧಿಸಿದರೆ ಅಮರೀಂದರ್ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಂಜಾಬ್ ನಲ್ಲಿ ಮೂರು ದಿನಗಳ ಕಾಲ ಪ್ರಚಾರ ಕೈಗೊಂಡಿರುವ ರಾಹುಲ್ ಗಾಂಧಿ ಇಂದು ಮಾಜಿತಾದಲ್ಲಿ ಪಕ್ಷದ ಸಮಾವೇಶ ಉದ್ದೇಶಿಸಿ ಮಾತನಾಡುತ್ತ, ಪಂಜಾಬ್ ನಲ್ಲಿ ಒಂದು ವೇಳೆ ಕಾಂಗ್ರೆಸ್ ಗೆಲುವು ಸಾಧಿಸಿದರೆ ಸಿಂಗ್ ಮುಖ್ಯಮಂತ್ರಿ ಪಟ್ಟ ಅಲಂಕರಿಸಲಿದ್ದಾರೆ ಎಂದು ಹೇಳಿದರು.
ಅಮರೀಂದರ್ ಸಿಂಗ್ ಪಂಜಾಬ್ ನ ಮುಖ್ಯಮಂತ್ರಿಯಾದರೆ, ರಾಜ್ಯದ ಅಭಿವೃದ್ಧಿಗಾಗಿ ಕಠಿಣ ಶ್ರಮವಹಿಸಲಿದ್ದಾರೆ ಎಂದ ರಾಹುಲ್ ಗಾಂಧಿ, ಎಸ್ ಎಡಿ, ಬಿಜೆಪಿ ಮೈತ್ರಿಕೂಟದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪಂಜಾಬ್ ನಲ್ಲಿ ಅಧಿಕಾರದ ಗದ್ದುಗೆ ಹಿಡಿದ ಪ್ರಕಾಶ್ ಸಿಂಗ್ ಬಾದಲ್ ಸರ್ಕಾರ ರಾಜ್ಯದ ಜನರನ್ನು ಲೂಟಿಗೈದಿರುವುದಾಗಿ ಆರೋಪಿಸಿದರು. ಒಂದು ಒಂದು ಕಳ್ಳ ಹಾದಿಯಿಂದ ಪಂಜಾಬ್ ಜನರನ್ನು ಈ ಸರ್ಕಾರ ಲೂಟಿ ಮಾಡಿದೆ ಎಂದು ದೂರಿದರು.
ರಾಜ್ಯದಲ್ಲಿನ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದರೆ ಬಾದಲ್ ಸರ್ಕಾರ ರೈತರಿಗೆ ನೀರನ್ನೇ ಒದಗಿಸುತ್ತಿಲ್ಲ ಎಂದು ಟೀಕಿಸಿದರು.