ಮರವಂತೆ: ಬಡಾಕೆರೆ ಯಿಂದ ನಾವುಂದ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಸಂಪೂರ್ಣ ಜರ್ಝರಿತಗೊಂಡಿದ್ದು, ಸುಮಾರು 3 ಕಿ.ಮೀ. ದೂರದ ರಸ್ತೆಯಲ್ಲಿ ವಾಹನ ಸಂಚಾರವೇ ದುಸ್ತರಗೊಂಡಿದೆ.
ನಾಡ ಗ್ರಾ.ಪಂ. ವ್ಯಾಪ್ತಿಯ ರಸ್ತೆ ಯಾಗಿದ್ದು, ನಾವುಂದ ರಾಷ್ಟ್ರೀಯ ಹೆದ್ದಾರಿ ಯಿಂದ ಬಡಾಕೆರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ಇದಾಗಿದೆ. ರಸ್ತೆಯ ಸುಮಾರು 3 ಕಿ.ಮೀ. ದೂರದವರೆಗೆ ಹೊಂಡಗಳಿಂದ ಕೂಡಿದ್ದು, ವಾಹನ ಸವಾರರು ಸಂಕಷ್ಟ ಪಡುವಂತಾಗಿದೆ.
ಪ್ರಮುಖ ರಸ್ತೆ ನಾವುಂದದಿಂದ ಆರಂಭಗೊಂಡು ಬಡಾಕೆರೆ, ಕೊಣಿR, ತಾರಿಬೇರು, ಗುಡ್ಡೆ ಹೊಟೇಲ್‌ವರೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ನಿತ್ಯವೂ ನೂರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ನಾವುಂದದಿಂದ ಗುಡ್ಡೆಹೋಟೆಲ್‌ವರೆಗೆ ಸುಮಾರು 8 ಕಿ.ಮೀ. ದೂರವಿದ್ದು, ಈ ಪೈಕಿ ಬಡಾಕೆರೆಯವರೆಗಿನ 3 ಕಿ.ಮೀ. ರಸ್ತೆಯಂತೂ ಡಾಮರೆಲ್ಲ ಎದ್ದು ಹೋಗಿ, ಸಂಪೂರ್ಣ ಹದಗೆಟ್ಟಿದೆ. ಬಡಾಕೆರೆ ಭಾಗದಿಂದ ನಾವುಂದ, ಮರವಂತೆ, ಕುಂದಾಪುರ, ಬೈಂದೂರು ಕಡೆಗೆ ಸಂಚರಿಸಲು ಇದೇ ರಸ್ತೆಯನ್ನು ಆಶ್ರಯಿಸಿದ್ದಾರೆ.
ಅಲ್ಲಲ್ಲಿರುವ ಹೊಂಡಮಯ ರಸ್ತೆಯಿಂದಾಗಿ ಸೈಕಲ್, ಬೈಕ್, ಆಟೋ ಚಾಲಕರು, ಇತರ ವಾಹನ ಸವಾರರು ಪರಿತಪಿಸುವಂತಾಗಿದೆ. ಮಳೆಯಿಂದಾಗಿ ರಸ್ತೆಯಲ್ಲಿ ನೀರು ನಿಂತು ಗುಂಡಿಗಳು ಕಾಣ ದಂತಾಗಿದೆ. ಮುಖ್ಯ ರಸ್ತೆಯಾಗಿದ್ದು, ನಿತ್ಯ ನೂರಾರು ಮಂದಿ ಇದೇ ರಸ್ತೆಯನ್ನು ಆಶ್ರಯಿಸಿದ್ದಾರೆ. ಆದಷ್ಟು ಬೇಗ ಈ ರಸ್ತೆ ಅಭಿವೃದ್ಧಿಗೆ ಸಂಬಂಧಪಟ್ಟವರು ಮುಂದಾಗಲಿ ಎನ್ನುವುದಾಗಿ ಸಾರ್ವ ಜನಿಕರು ಒತ್ತಾಯಿಸಿದ್ದಾರೆ.
ಶಾಸಕರಿಗೆ ಮನವಿ: ನಾವುಂದ – ಬಡಾಕೆರೆ ಮುಖ್ಯ ರಸ್ತೆಯ ಅಭಿವೃದ್ಧಿ ಬಗ್ಗೆ ಈಗಾಗಲೇ ಶಾಸಕರಿಗೆ ಮನವಿ ಸಲ್ಲಿಸಿದ್ದು, 1 ಕೋ.ರೂ. ಅನುದಾನ ನೀಡುವುದಾಗಿ ಹೇಳಿದ್ದಾರೆ. ದೊಡ್ಡ ರಸ್ತೆಯಾಗಿರುವುದರಿಂದ ಹೆಚ್ಚಿನ ಅನುದಾನ ಬೇಕಿರುವುದರಿಂದ ವಿಳಂಬವಾಗಿದೆ. ನಾಡ ವ್ಯಾಪ್ತಿಯಲ್ಲಿ ಈಗಗಾಲೇ ಇನ್ನುಳಿದ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಶಾಸಕರು ಸ್ಪಂದಿಸಿದ್ದಾರೆ. –
ದಿನೇಶ್ ಶೆಟ್ಟಿ, ಅಧ್ಯಕ್ಷರು, ನಾಡ ಗ್ರಾ.ಪಂ.