Advertisement
ಬಡತನದ ಕಾರಣದಿಂದ ಕಲಿತದ್ದು ಎರಡನೇ ತರಗತಿಯಾದರೂ ಯಕ್ಷಸಾಗರದಲ್ಲಿ ಇವರು ಸಂಪಾದಿಸಿರುವ ಜ್ಞಾನ ಅಪಾರ. 14ನೇ ವಯಸ್ಸಿನಲ್ಲೇ ಬಣ್ಣದ ಸಂಜೀವಯ್ಯನವರಲ್ಲಿ ಹೆಜ್ಜೆಗಾರಿಕೆಯನ್ನು ಕಲಿತು ಮಂದಾರ್ತಿ ಮೇಳದಲ್ಲಿ ಗೆಜ್ಜೆ ಕಟ್ಟಿದರು. ಗುರು ವೀರಭದ್ರ ನಾಯ್ಕ…, ವಂಡಾರು ಬಸವ, ಶ್ರೀನಿವಾಸ ನಾಯ್ಕ…, ಭಾಗವತರಾದ ಕುಂಜಾಲು ಶೇಷಗಿರಿ ಕಿಣಿ, ಹಿರಿಯಡ್ಕ ಗೋಪಾಲರಾಯರು, ಚೆಂಡೆ ಕಿಟ್ಟ ಮೊದಲಾದ ಯಕ್ಷದಿಗ್ಗಜರ ಮಾರ್ಗದರ್ಶನದಲ್ಲಿ ಪಳಗಿದ ಶೀನ ನಾಯ್ಕರು ಸವ್ಯಸಾಚಿಯಾಗಿ ರೂಪುಗೊಂಡರು. ಮಂದಾರ್ತಿ, ಕೊಡವೂರು,ಹಾಲಾಡಿ, ಪೆರ್ಡೂರು, ಮಾರಣಕಟ್ಟೆ, ಕಮಲ ಶಿಲೆ, ಗೋಳಿಗರಡಿ, ಅಮೃತೇಶ್ವರಿ, ಸಾಲಿಗ್ರಾಮಗಳಂತಹ ಬಡಗಿನ ಮೇಳಗಳಲ್ಲಿ ಮಾತ್ರವಲ್ಲದೆ ಪೊಳಲಿ ಮತ್ತು ಕರ್ನಾಟಕದಂತಹ ತೆಂಕಿನ ಮೇಳಗಳಲ್ಲಿಯು ತಿರುಗಾಟ ನಡೆಸಿದ ಖ್ಯಾತಿ ಶೀನ ನಾಯ್ಕರದ್ದು. ಸ್ತ್ರೀ ವೇಷಧಾರಿಯಾಗಿ ಭ್ರಮರ ಕುಂತಳೆ, ಪದ್ಮಗಂಧಿನಿ, ದ್ರೌಪದಿ ಪ್ರತಾಪದ ಸುಭದ್ರೆ, ಬಭುವಾಹನದ ಚಿತ್ರಾಂಗದೆ, ಸುಧನ್ವದ ಪ್ರಭಾವತಿ, ಸೈರಂಧ್ರಿ ಮುಂತಾದ ಪಾತ್ರಗಳು ಇವರಿಗೆ ಅಪಾರವಾದ ಜನಮನ್ನಣೆಯನ್ನು ದೊರಕಿಸಿಕೊಟ್ಟಿದ್ದವು.
ಪೌರಾಣಿಕ ಪ್ರಸಂಗಗಳ ಮುಖ್ಯ ಸ್ತ್ರೀ ಪಾತ್ರಗಳಲ್ಲೇ ಮಿಂಚುತ್ತಿದ್ದ ಶೀನ ನಾಯ್ಕರ ಹೆಸರಿನ ಮೊದಲು ಜಮದಗ್ನಿ ಬಿರುದು ಸೇರಿಕೊಂಡಿದ್ದು ಒಂದು ಸ್ವಾರಸ್ಯಕರ ಕಥೆ. ಮಾರಣಕಟ್ಟೆ ಮೇಳದಲ್ಲಿ ಪ್ರಧಾನ ಸ್ತ್ರೀವೇಷ ಪಾತ್ರಧಾರಿಯಾಗಿದ್ದ ಸಂದರ್ಭದಲ್ಲಿ ಅದೊಂದು ದಿನ ಮೇಳದ ಎರಡನೇ ವೇಷಧಾರಿ ಅಸೌಖ್ಯಗೊಂಡಿದ್ದರಿಂದ ನಿಗದಿಯಾಗಿದ್ದ ಪ್ರಸಂಗದ ಜಮದಗ್ನಿ ಮಹರ್ಷಿ ಪಾತ್ರವನ್ನು ನಿರ್ವಹಿಸುವ ಅನಿವಾರ್ಯತೆ ಶೀನ ನಾಯ್ಕರ ಹೆಗಲೇರುತ್ತದೆ. ಆ ದಿನ ಇವರ ಜಮದಗ್ನಿ ಪಾತ್ರ ಪ್ರೇಕ್ಷಕರನ್ನು ಹುಚ್ಚೆಬ್ಬಿಸುತ್ತದೆ. ಅಂದಿನಿಂದ ಶೀನ ನಾಯ್ಕರು ಯಕ್ಷಪ್ರೇಮಿಗಳ ಮನದಲ್ಲಿ ಜಮದಗ್ನಿ ಶೀನ ನಾಯ್ಕರಾಗಿ ಅಚ್ಚಳಿಯದ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ಜಮದಗ್ನಿ ಶೀನ ನಾಯ್ಕರನ್ನು ಕೇವಲ ಒಬ್ಬ ಕಲಾವಿದ ಮಾತ್ರವಲ್ಲದೆ ಮೇಳದ ಯಜಮಾನನೂ ಆಗಿದ್ದರು. ಆ ಕಾಲದಲ್ಲಿ ಬಯಲಾಟ ಮೇಳವಾಗಿದ್ದ ಪೆರ್ಡೂರು ಮೇಳವನ್ನು ಶೀನ ನಾಯ್ಕರು ನಡೆಸುತ್ತಿದ್ದರು. ಆರ್ಥಿಕ ಸಂಕಷ್ಟದ ಕಾರಣದಿಂದಾಗಿ ಮೇಳದ ಯಜಮಾನಿಕೆಯನ್ನು ಆಗಿನ್ನೂ ಯುವಕರಾಗಿದ್ದ ವೈ. ಕರುಣಾಕರ ಶೆಟ್ಟಿಯವರ ಹೆಗಲಿಗೇರಿಸಿದ ಶೀನ ನಾಯ್ಕರು ಆ ಬಳಿಕ ಅಜ್ಞಾತವಾಗಿಬಿಡುತ್ತಾರೆ. ಕರುಣಾಕರ ಶೆಟ್ಟಿಯವರು ಬಯಲಾಟ ಮೇಳವಾಗಿದ್ದ ಪೆರ್ಡೂರು ಮೇಳವನ್ನು ಬಳಿಕ ಡೇರೆ ಮೇಳವಾಗಿಸಿ ಬಡಗು ತಿಟ್ಟಿನ ಪ್ರತಿಷ್ಠಿತ ಮೇಳವನ್ನಾಗಿಸಿದ್ದು ಇತಿಹಾಸ. ಇದಕ್ಕೆಲ್ಲಾ ಕಾರಣಕರ್ತರಾಗಿದ್ದ ಜಮದಗ್ನಿ ಶೀನ ನಾಯ್ಕರನ್ನು ಕರುಣಾಕರ ಶೆಟ್ಟರು ಈಗಲೂ ನೆನಪಿಸಿಕೊಳ್ಳುತ್ತಾರೆ. ಸುದೀರ್ಘ ಕಾಲ ಯಕ್ಷಕಲಾ ಮಾತೆಯ ಸೇವೆಯನ್ನು ಮಾಡಿದ ಶೀನ ನಾಯ್ಕರು ಎಲೆ ಮರೆಯ ಕಾಯಿಯಂತೆ ಯಡಾಡಿಯಲ್ಲಿ ವಿಶ್ರಾಂತ ಜೀವನವನ್ನು ನಡೆಸುತ್ತಿದ್ದಾರೆ.
Related Articles
Advertisement