ಹುಬ್ಬಳ್ಳಿ: ಗೌರವಯುತ ಜೀವನ ನಡೆಸಬೇಕೆಂಬ ಅರಿವು ಮನಸಿನಲ್ಲಿ ಮೂಡಿದಾಗ ದುಶ್ಚಟಗಳು ದೂರವಾಗಲು ಸಾಧ್ಯ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಸೋದರಿ ಪದ್ಮಲತಾ ನಿರಂಜನಕುಮಾರ ಹೇಳಿದರು. ಮದ್ಯಪಾನ ಸಂಯಮ ಮಂಡಳಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಹಯೋಗದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕಲಘಟಗಿಯ ಎಪಿಎಂಸಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ವ್ಯಸನಮುಕ್ತ ಸಾಧಕರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ವ್ಯಸನಗಳಿಂದ ಮುಕ್ತರಾಗಬೇಕೆಂಬ ಭಾವನೆ ಮನಸ್ಸಿನಲ್ಲಿ ಮೂಡಬೇಕು. ವ್ಯಸನದಿಂದ ನಾನು ನನ್ನ ಜೀವನ ಹಾಳು ಮಾಡಿಕೊಳ್ಳುತ್ತಿದ್ದೇನೆ. ಕಳೆದು ಹೋದ ಗೌರವವನ್ನು ಮತ್ತೆ ಸಂಪಾದಿಸಬೇಕು. ಕುಟುಂಬದ ಸದಸ್ಯರ ಮುಖದಲ್ಲಿ ಮತ್ತೆ ಮಂದಹಾಸ ಮೂಡಬೇಕೆಂಬ ಮನಸ್ಥಿತಿ ಬಂದಾಗ ಎಲ್ಲ ಕೆಟ್ಟ ಚಟಗಳಿಂದ ವಿಮುಖರಾಗಲು ಸಾಧ್ಯ ಎಂದರು.
ದುಶ್ಚಟಕ್ಕೀಡಾದವರು ಪ್ರಜ್ಞಾಹೀನರಾಗಿ ಬದುಕುತ್ತಾರೆ. ದೈಹಿಕ ಆರೋಗ್ಯ ಹಾಳು ಮಾಡಿಕೊಳ್ಳುವುದಲ್ಲದೇ ಆರ್ಥಿಕವಾಗಿ ತೊಂದರೆಗೀಡಾಗುತ್ತಾರೆ. ಅಲ್ಲದೇ ಕುಟುಂಬದ ಸದಸ್ಯರ ನೆಮ್ಮದಿಯನ್ನೂ ಹಾಳು ಮಾಡುತ್ತಾರೆ. ಜನರ ಸ್ಥಿತಿಯನ್ನು ಮನಗಂಡು ಡಾ| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಅವರ ಬಳಗ ಜಾಗೃತಿ ಮೂಡಿಸುತ್ತಿದೆ ಎಂದು ಹೇಳಿದರು.
ಸರಕಾರದ ಇಬ್ಬಗೆ ನೀತಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧಾರವಾಡ ಜಿಲ್ಲೆ ನಿರ್ದೇಶಕ ದಿನೇಶ ಎಂ. ಮಾತನಾಡಿ, ಸರಕಾರ ಒಂದು ಕಡೆ ಮದ್ಯ ಮಾರಾಟ ಹೆಚ್ಚಳಕ್ಕೆ ಗುರಿ ನೀಡಿ, ಇನ್ನೊಂದು ಕಡೆ ಮದ್ಯಪಾನ ಸಂಯಮ ಮಂಡಳಿಯಿಂದ ಮದ್ಯಪಾನ ಸೇವನೆ ಕಡಿಮೆಗೆ ಯತ್ನಿಸುತ್ತಿರುವುದು ಇಬ್ಬಗೆ ನೀತಿಯಾಗಿದೆ. ರಾಜ್ಯದಲ್ಲಿ ಶೇ. 21 ಜನರು ಮದ್ಯಪಾನ ವ್ಯಸನಕ್ಕಂಟಿಕೊಂಡಿದ್ದಾರೆ. ಪ್ರತಿ ವರ್ಷ 18,000 ಕೋಟಿ ರೂ. ಮದ್ಯಪಾನದಿಂದ ರಾಜ್ಯ ಸರಕಾರಕ್ಕೆ ಆದಾಯ ಹೋಗುತ್ತದೆ ಎಂದು ಹೇಳಿದರು.
ಹನ್ನೆರಡು ಮಠದ ಶ್ರೀ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಅಧ್ಯಕ್ಷತೆ ವಹಿಸಿದ್ದರು. ಸೀತಾರಾಮ ಶೆಟ್ಟಿ, ವಸಂತ ಅರ್ಕಾಚಾರ, ಬೂದಪ್ಪ ಹುರಕಡ್ಲಿ, ಮುತ್ತಪ್ಪ ಅಂಗಡಿ, ವಿದ್ಯಾ ಬಾವನವರ, ಈರಪ್ಪ ದಾಸನಕೊಪ್ಪ, ಅಣ್ಣಪ್ಪ ದೇಸಾಯಿ ಇದ್ದರು. ಸಾರಾಯಿ ಬಿಟ್ಟು ಮನುಷ್ಯನಾದೆ: ವ್ಯಸನ ಮುಕ್ತಗೊಂಡ ಜಗದೀಶ ಬ್ಯಾಳಿ ಮಾತನಾಡಿ, ಮದ್ಯದ ಚಟಕ್ಕೆ ಬಿದ್ದು ಮನುಷ್ಯತ್ವ ಎಂಬುದನ್ನೇ ಮರೆತಿದ್ದೆ. ಕುಟುಂಬದ ಸದಸ್ಯರೊಂದಿಗೆ ಹಾಗೂ ಗ್ರಾಮದ ಜನರೊಂದಿಗೆ ಅನಗತ್ಯವಾಗಿ ಜಗಳ ಮಾಡುತ್ತಿದ್ದೆ. ಆದರೆ ಈಗ ವ್ಯಸನದಿಂದ ಮುಕ್ತನಾದ ಬಳಿಕ ಕುಟುಂಬದ ಸದಸ್ಯರೊಂದಿಗೆ ಆತ್ಮೀಯವಾಗಿ ಬದುಕುತ್ತಿದ್ದೇನೆ. ಕಳೆದೊಂದು ವರ್ಷದಲ್ಲಿ ಕಷ್ಟಪಟ್ಟು ದುಡಿದು 3 ಲಕ್ಷ ರೂ. ಸಂಪಾದಿಸಿದ್ದೇನೆ ಎಂದರು.
250 ವ್ಯಸನಮುಕ್ತ ಸಾಧಕರನ್ನು ಸತ್ಕರಿಸಲಾಯಿತು. ಮದ್ಯ ವ್ಯಸನಿಗಳ ಚಟ ಬಿಡಿಸಲು ಪ್ರಯತ್ನಿಸಿದ ಶಿವರಡ್ಡಿ ಹಾಗೂ ಮಂಜುನಾಥ ಅನಗೋಡಿ ಅವರಿಗೆ ಜಾಗೃತಿ ಮಿತ್ರ ಪ್ರಶಸ್ತಿ ನೀಡಲಾಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು. ಹಳಿಯಾಳ ಕ್ರಾಸ್‌ನಿಂದ ಎಪಿಎಂಸಿವರೆಗೆ ದುಶ್ಚಟ ವಿರುದ್ಧ ಜನಜಾಗೃತಿ ಜಾಥಾ ನಡೆಯಿತು. ವಿವಿಧ ಕಲಾ ತಂಡಗಳು ಪಾಲ್ಗೊಂಡಿದ್ದವು.