ನನ್ನಮ್ಮ ಒಲೆ ಒರೆಸುವ ಮಸಿ ಬಟ್ಟೆಯನ್ನು ಎಂದೂ ಮನೆಯ ಎದುರು ಅಂಗಳದ ನೇಕೆಯಲ್ಲಿ ಹರವಲು ಬಿಡುತ್ತಿರಲಿಲ್ಲ. ಅಲ್ಲಿ ಏನಿದ್ದರೂ ಶುಭ್ರವಾದ ಬಟ್ಟೆಗಳಿಗಷ್ಟೇ ಗೆಣೆಯ ಮೇಲೆ ಹಾರಾಡಲು ಅವಕಾಶ. ತುಂಡು ತುಂಡು ನೆಲಒರಸು, ಮಸಿ ಬಟ್ಟೆ, ಧೂಳು ಒರೆಸುವ ಬಟ್ಟೆಗಳಿಗೆಲ್ಲ ಅವರೆ ಚಪ್ಪರದ ಮೇಲೆ ಹರವಲು ಅವಕಾಶ. ಬಹುಶಃ ಎಷ್ಟು ಒಗೆದರೂ ಮಡಿಯಾಗದ ಆ ತುಂಡು ಅರಿವೆಗಳನ್ನು ಎದುರುಗಡೆ ಹಾಕಿದರೆ ನೋಡಿದವರು ಏನಂದುಕೊಳ್ಳುವರು ಅನ್ನೋ ಉದ್ದೇಶವೂ ಇರಬಹುದು. ಹಿತ್ತಲು ಮಾತ್ರ ಯಾವ ಆಕ್ಷೇಪಣೆಗಳೂ ಇಲ್ಲದೆ ಕೊಳೆ ಬಟ್ಟೆಯನ್ನೆಲ್ಲ ಶುಭ್ರವಾಗಿ ಕಾಣಿಸುವಲ್ಲಿ ನಿರಂತರ ಸಹಾಯಕ್ಕೆ ಒದಗಿ ಬರುತ್ತಿತ್ತು ಅನ್ನಿಸುತ್ತದೆ. ನಾನು ನನ್ನಮ್ಮನ ಪಾಲಿಸಿಯನ್ನೇ ಅನುಸರಿಸುತ್ತ ಬಂದರೂ ಈಗ ನನಗೋ ಹಿತ್ತಲೆಂದರೆ ಎಲ್ಲದರ ಕೊಳೆ ತೆಗೆದು ಮಡಿಯಾಗಿಸುವ ತಾಣ ಅಂತನ್ನಿಸುತ್ತದೆ. ಇಲ್ಲಿ ಯಾವುದೇ ಮುಚ್ಚು ಮರೆಯಿಲ್ಲ. ನಾವು ನಾವಾಗಿಯೇ ಇರಲು ಸಾಧ್ಯವಾಗಬಹುದಾದಂತಹ ಸಹಜ ತಾಣ. ಒಪ್ಪಓರಣವಿಲ್ಲದೆಯೂ ಬೆಳೆದುನಿಂತ ದಾಸವಾಳ, ಮಲ್ಲಿಗೆ, ಕನಕಾಂಬರ ಗಿಡದ ತುಂಬಾ ಅದೆಷ್ಟು ಹೂವು. ಮನೆಯ ಎದುರುಗಡೆ ನೆಟ್ಟ ಅಲಂಕಾರಿಕ ಗಿಡಗಳಿಗೆ ನೀರುಣಿಸಿದಂತೆ ಇದಕ್ಕೆ ಖಾಯಂ ಶಿಸ್ತುಬದ್ಧವಾಗಿ ನೀರುಣಿಸ ಬೇಕಿಲ್ಲ, ಬಟ್ಟೆ ತೊಳೆದ ನೀರು, ಪಾತ್ರೆ ತೊಳೆದು ಚೆಲ್ಲುವ ನೀರು, ಬಚ್ಚಲ ನೀರು ಇವಿಷ್ಟೇ ಸಾಕು. ಯಾವ ತಕರಾರುಗಳಿಲ್ಲದೆಯೂ ಅವನ್ನೆಲ್ಲ ಹೀರಿಕೊಂಡು ನಿಂತ ಜಾಗದಲ್ಲೇ ಸೊಂಪಾಗಿ ಬೆಳೆಯುತ್ತದೆ. ಆದರೆ, ಹಿತ್ತಲಿನ ಘಮಲು ಸದ್ದಿಲ್ಲದೇ ಅಂಗಳದವರೆಗೂ ಬಂದು ಹಾದುಹೋಗುತ್ತದೆ.
ನಮ್ಮ ಹೆಣ್ಮಕ್ಕಳ ಬದುಕು ಕೂಡ ಹಿತ್ತಲಿನಲ್ಲಿ ಹರಡಿಕೊಂಡ ಸುಗಂಧದಂತೆ ಭಾಸವಾಗುತ್ತದೆ. ಅದಕ್ಕೇ ಇರಬೇಕು ಹೆಣ್ಮಕ್ಕಳಿಗೂ ಹಿತ್ತಲಿಗೂ ಎಲ್ಲಿಲ್ಲದ ನಂಟು. ಹೊಸಮನೆ ಕಟ್ಟುವ ಸಂದರ್ಭದಲ್ಲಿ ಹಿತ್ತಲು ಒಂದಿಷ್ಟು ಇರಬೇಕು ಅನ್ನೋ ವಿಚಾರದಲ್ಲಿ ನಮ್ಮ ಹೆಂಗಳೆಯರು ಮೂಗು ತೂರಿಸಿಯೇ ತೂರಿಸುತ್ತಾರೆ. ಅವರ ಅಸ್ತಿತ್ವ ಗಟ್ಟಿಗೊಳ್ಳುವುದೇ ಅಲ್ಲಿ ಅನ್ನುವುದು ಅವರ ಬಲವಾದ ನಂಬಿಕೆ. ಹಿತ್ತಲೆಂದರೆ ನನಗೆ ಎಲ್ಲವೂ. ಬಹುಶಃ ನಮ್ಮೆಲ್ಲ ಹಳ್ಳಿಯ ಹೆಣ್ಮಕ್ಕಳಿಗೂ.
ಮೌನವೆಲ್ಲ ಮಾತಾಗುವುದು, ಎದೆಯ ಬಿಕ್ಕುಗಳಿಗೆಲ್ಲ ಸಾಂತ್ವನ ಸಿಗುವುದು, ಯಾವುದೋ ನೆನೆಕೆಯಲ್ಲಿ ಎಲ್ಲ ಮರೆತು ಹಾಯಾಗುವುದು ಎಲ್ಲವೂ ಹಿತ್ತಲಿನಲ್ಲಿಯೇ. ಸಂಜೆ ಹೊತ್ತಿನಲ್ಲಿ ಎಲ್ಲಾ ಕೆಲಸ ಆದ ನಂತರ ಹಿತ್ತಲಿನಲ್ಲಿ ಓಡಾಡಿಕೊಂಡಿರುವುದೆಂದರೆ ನನಗೆ ಬಲು ಪ್ರಿಯವಾದ ಕೆಲಸ. ಅಲ್ಲಿಗೆ ಯಾರೂ ಆಗಾಗ್ಗೆ ಬಂದು ನಿಶ್ಯಬ್ದವನ್ನು ಕದಡಿ ಹೋಗುವುದಿಲ್ಲ. ಸುಮ್ಮಗೆ ಹಿತ್ತಲಿನಲ್ಲಿ ಬೆಳೆದ ಕರಿಬೇವು, ಸೀತಾಫಲ, ಪೇರಳೆ ಇವುಗಳನ್ನೆಲ್ಲ ಮಾತಾಡಿಸುತ್ತಾ ಹೆಜ್ಜೆ ಹಾಕುವಾಗ ಯಾವುದೋ ಹಿತವಾದ ಗಾಳಿ ಬೀಸುತ್ತದೆ, ನೆನಪುಗಳು ತೆರೆದುಕೊಳ್ಳುತ್ತದೆ. ಹಾಗೇ ಗೊತ್ತೇ ಆಗದಂತೆ ಕವಿತೆಯೊಂದು ಬಳಿ ಬಂದು ಮೈದಡವಿ ಮಾತಿಗೆ ನಿಲ್ಲುತ್ತದೆ. ಎದೆಯ ದನಿಗೆ ಕಿವಿಯಾಗುತ್ತಾ ಒಳಗಿನ ದುಗುಡಗಳೆಲ್ಲ ಕರಗಿ ಹಾಡಾಗುವಾಗ ಅದೆಂಥ ದಿವ್ಯ ಅನುಭೂತಿ. ಹಿತ್ತಲೆಂಬ ಧ್ಯಾನ ನಮ್ಮನ್ನು ಅನವರತ ಪೊರೆಯುತ್ತ ಪರಂಪರೆಯನ್ನು ದಾಟಿಸುವ ಕೊಂಡಿಯಂತೆ ಗೋಚರಿಸುತ್ತದೆ. ನನ್ನಜ್ಜಿ, ನನ್ನಮ್ಮ, ನಾನು ನೋಡಿದ ಅಕ್ಕಪಕ್ಕದ ಆಂಟಿಯಂದಿರು ಎಲ್ಲರೂ ಹಿತ್ತಲಿನ ಒಡನಾಟ ಬೆಳೆಸಿಕೊಂಡವರೆ. ಪಾದಗಳು ಯಾಕೆ ಹಿತ್ತಲಿನ ಕಡೆಗೇ ಚಲಿಸುತ್ತವೆ ? ಅಂತಹ ಒಂದು ಅಯಸ್ಕಾಂತೀಯ ಗುಣ ಅಲ್ಲಿ ಏನಿದೆಯೆನ್ನುವಂಥದ್ದು.
ಇನ್ನು ತೀರಾ ಪರಿಚಿತರು ಆಚೆ ಮನೆಯಾಕೆಯನ್ನು ಮಾತನಾಡಿಸಿಕೊಂಡು ಬರುವ ಅಂತ ಮನೆಯ ಹೊಸಿಲ ಬಳಿ ಹೋಗಿ ನಿಂತು ಯಾರೂ ಕಾಣದಿದ್ದರೆ, ಸೀದಾ ಅವರು ಹೋಗುವುದು ಹಿತ್ತಲಿಗೆಯೇ. ಮುಂಬಾಗಿಲಿನಲ್ಲಿ ನಿಂತು ಕರೆದರೆ ಸುಲಭಕ್ಕೆ ಓಗೊಡದ ಆಕೆ, ಕರೆಯದೇ ಸಿಗುವುದು ಹಿತ್ತಲಿನಲ್ಲಿಯೇ. ಮನೆಯ ಹಿಂಬದಿ ಮೆಟ್ಟಿಲಿನಲ್ಲಿ ಅಕ್ಕಿ ಆರಿಸುತ್ತಲೋ, ಮನೆಯ ಹಿಂದೆ ಚೊಕ್ಕಟ ಮಾಡುತ್ತಲೋ ಅಥವಾ ಏನೂ ಇಲ್ಲದಿದ್ದರೆ ಹಿತ್ತಲಿನಲ್ಲಿ ನೆಟ್ಟ ದಾಸವಾಳ, ಹಬ್ಬಂತಿಗೆಗಳ ಜೊತೆಗೆ ಮಾತಿಗಿಳಿಯುತ್ತ ಯಾವುದೋ ಲೋಕದಲ್ಲಿ ತನ್ನ ಇಹವನ್ನ ಮರೆತಿರುತ್ತಾಳೆ. ಮನೆಯ ಹಿತ್ತಲು ಸುಂದರವಾಗಿ, ಚೊಕ್ಕಟವಾಗಿ ಅಲ್ಲೊಂದು ತೊಂಡೆ, ಮಲ್ಲಿಗೆ ಬಳ್ಳಿ, ಬಸಳೆ ಚಪ್ಪರ ಬೀಡುಬಿಟ್ಟಿದೆಯೆಂದಾದರೆ ಅದು ಆ ಮನೆಯಾಕೆಯ ಸ್ವಸ್ಥ ಮನಸ್ಸಿಗೆ ಕನ್ನಡಿ ಹಿಡಿದಂತಿರುತ್ತದೆ. ಬಹುಶಃ ತೆರೆಮರೆಯಲ್ಲಿಯೇ ಉಳಿದರೂ, ಎದುರಿಗೆ ಸುಲಭಕ್ಕೆ ಸಿಗದಿದ್ದರೂ ಹೇಗೆ ನೇಪಥ್ಯದಲ್ಲೇ ಉಳಿದು ಬದುಕನ್ನ ಸೃಜನಶೀಲವಾಗಿ ಕಳೆಯಬಹುದು ಎಂಬುದ್ದಕ್ಕೆ ನಮ್ಮ ಎಲ್ಲ ಹೆಣ್ಣುಮಕ್ಕಳ ಹಿಂಬದಿಯ ಹಿತ್ತಲೇ ಸಾಕ್ಷಿ ಹೇಳಬಲ್ಲದು. ಅಥವಾ ಮುಂಬಾಗಿಲಿನ ಪಾರುಪತ್ಯವಿಡೀ ಗಂಡಸರ ಅಧಿಪತ್ಯಕ್ಕೆ ಒಳಪಟ್ಟ ಮೇಲೆ ಬಂದವರಿಗೆ, ಕುಂತವರಿಗೆ ಕಾಫಿ, ಟೀ, ಸಮಾರಾಧನೆಯಷ್ಟೇ ಇವರ ಕೆಲಸ. ಉಳಿದಂತೆ ಅವರ ಸಭೆಗೆ ಕಿಂಚಿತ್ತೂ ಕಿವಿಗೊಡದಂತೆ ಆಕೆ ಹಿತ್ತಲಿನಲ್ಲಿಯೇ ಕಳೆದುಹೋಗಿ ಬಿಡುತ್ತಾಳೆ. ಅದಕ್ಕೇ ಇರಬೇಕು ಗಂಡಸರಿಗೆ ಹಿಂಬಾಗಿಲಿನ ಮೂಲಕ ಬರುವ ಪ್ರವೇಶ ಇಲ್ಲ. ಏನಿದ್ದರೂ ಅವರ ಕಾರುಬಾರು ಎಲ್ಲಾ ಪಡಸಾಲೆಯಲ್ಲಿಯೇ.
ಸಂಜೆಯ ಹೊತ್ತಿಗೆ ಮೊಗ್ಗು ಮಾಲೆಕಟ್ಟಿ ಅಲ್ಲೇ ಚಪ್ಪರದ ಮೇಲೆ ಇಬ್ಬನಿ ಬೀಳಲು ಇಟ್ಟರೆ ಮಾರನೇ ದಿನ ಹೂಗಳು ದಂಡೆಯಲಿ ಒತ್ತೂತ್ತಾಗಿ ಹದವಾಗಿ ಅರಳಿ ನಗುತ್ತವೆ. ಒಂದಷ್ಟು ಮಕ್ಕಳ ಜಡೆಗೆ ಸಿಕ್ಕಿಸಿ ಕಳುಹಿಸಿದರೆ ಮತ್ತುಳಿದ ದಂಡೆಯನ್ನು ತನ್ನ ಹೆರಳಿಗೆ ಸಿಕ್ಕಿಸಿ ತನಗೆ ತಾನೇ ಹದವಾಗಿ ಸಿಂಗರಿಸಿಕೊಂಡು ಅಡುಗೆ ಮನೆಯಿಂದ ಹಿತ್ತಲಿಗೂ ಹಿತ್ತಲಿನಿಂದ ಅಡುಗೆ ಮನೆಗೂ ನೂರೆಂಟು ನೆಪಕಟ್ಟಿಕೊಂಡು ಬಿಡುವಿಲ್ಲದೆ ಆಕೆ ಓಡುತ್ತಿರುತ್ತಾಳೆ. ಹಿತ್ತಲಿಗೂ ಅಷ್ಟೆ, ಅವಳ ಪಾದದ ಸದ್ದೇ ಉಸಿರು, ಜೀವ ಚೈತನ್ಯ. ತಮ್ಮಷ್ಟಕ್ಕೆ ತಾವೇ ಖುಷಿಯಾಗಿರಲು ಈ ಹಿತ್ತಲ ಸಖ್ಯವನ್ನು ಬೆಳೆಸಿಕೊಂಡು ನಿಸೂರಾಗುತ್ತಾರೆ ಹೆಣ್ಣು ಮಕ್ಕಳು.
ಚಿಟ್ಟೆ , ಹಕ್ಕಿ, ದುಂಬಿ ಮನಬಂದಂತೆ ಹಾರುವುದು, ಚಪ್ಪರದ ಮೇಲೆ ತೊಳೆದ ಬೇಳೆಕಾಳುಗಾಳು ಮೈ ಒಣಗಿಸಿಕೊಳ್ಳುವುದು, ಹೊಟ್ಟೆ ತುಂಬಿದ ನೆಲಗುಬ್ಬಿ ಅತ್ತಿಂದಿತ್ತ ಕುಪ್ಪಳಿಸುತ್ತ ನೀರಿನ ತೊಟ್ಟಿಯಲ್ಲಿ ಜಳಕ ಮಾಡುವುದು, ಕಾಗೆಯೊಂದು ಮರದ ಮೇಲೆ ಕುಳಿತು ತನ್ನ ಬಳಗವನ್ನೆಲ್ಲ ಕೂಗಿ ಕರೆಯುವುದು, ಎಲ್ಲವೂ ಹಿತ್ತಲೆಂಬ ಜಗತ್ತಿನಲ್ಲಿ. ಎಲ್ಲ ನವಿರುತನಗಳನ್ನ ಹೀರಿಕೊಳ್ಳುತ್ತಲೇ ಹೂವಂತಹ ಕವಿತೆ ಮೆಲ್ಲನೆ ಅರಳಿಕೊಳ್ಳುವುದು ಇಲ್ಲಿಯೇ.
ಸ್ಮಿತಾ ಅಮೃತರಾಜ್