ಚಿಕ್ಕಮಗಳೂರು: ಮೀಸಲಾತಿ ಹೆಸರಿನಲ್ಲಿ ಸಂಘ ಪರಿವಾರ ಹಿಂದುಳಿದ ಜಾತಿಗಳನ್ನು ಒಡೆಯುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಆರೋಪಿಸಿದರು.
ಬುಧವಾರ ನಗರದ ಮಾರ್ಕೆಟ್ ರಸ್ತೆಯ ಕನಕ ಹಾಲ್‌ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ಏರ್ಪಡಿಸಿದ್ದ ಸಮಿತಿಯ ಸ್ಥಾಪಕ ಪ್ರೊ| ಬಿ.ಕೃಷ್ಣಪ್ಪನವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಇದುವರೆಗೂ ದಲಿತ ವರ್ಗಕ್ಕೆ ಸಂಪೂರ್ಣ ಮೀಸಲಾತಿ ದೊರೆತಿಲ್ಲ, ಈ ವಿಷಯ ಯಾವುದೇ ಶಾಸನ ಸಭೆ ಅಥವಾ ಲೋಕಸಭೆಯಲ್ಲಿ ಚರ್ಚೆಯಾಗಿಲ್ಲ, ಇದನ್ನು ಪ್ರಶ್ನಿಸುವವರು ಯಾರೂ ಇಲ್ಲ, ಎಲ್ಲಾ ಸರ್ಕಾರಗಳು ಮೇಲ್ವರ್ಗದ ಪರವಾಗಿವೆ ಎಂದರು.
ಸಂಘ ಪರಿವಾರ ಮೀಸಲಾತಿ ಹೆಸರಿನಲ್ಲಿ ದಲಿತರ ದಿಕ್ಕು ತಪ್ಪಿಸುತ್ತಿದೆ. ಆ ಸಮುದಾಯದ ಜಾತಿಗಳನ್ನು ವಿಂಗಡಿಸುತ್ತಿದೆ. ಕೇವಲ ಶೇ.3 ರಷ್ಟಿರುವ ಬ್ರಾಹ್ಮಣ ಸಮುದಾಯದ ಹಿತ ಕಾಪಾಡುವ ನಿಟ್ಟಿನಲ್ಲಿ ಹಿಂದುಳಿದ ಜಾತಿಗಳನ್ನು ಒಡೆಯುವ ಹುನ್ನಾರ ನಡೆಸಿದೆ ಎಂದು ದೂರಿದ ಅವರು, ದಲಿತ ವರ್ಗ ಅರ್ಥ ಮಾಡಿಕೊಳ್ಳಬೇಕು. ತಮ್ಮ ಹಕ್ಕುಗಳಿಗಾಗಿ ಮತ್ತೆ ಚಳುವಳಿ ಆರಂಭಿಸುವ ಕುರಿತು ಚಿಂತನೆ ನಡೆಸಬೇಕು ಎಂದರು.
ಸಮಿತಿಯ ಜಿಲ್ಲಾ ಸಂಚಾಲಕ ಕೆ.ಸಿ.ವಸಂತ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಪ್ರೊ| ಬಿ.ಕೃಷ್ಣಪ್ಪನವರ ಆದರ್ಶಗಳನ್ನು ದಲಿತ ಸಮುದಾಯ ಮೈಗೂಡಿಸಿಕೊಳ್ಳಬೇಕು. ಅವರ ಆಶಯ ಮತ್ತು ಕನಸುಗಳ ಈಡೇರಿಕೆಗೆ ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಸ್.ಎನ್.ಮಲ್ಲಪ್ಪ, ತಾಲೂಕು ಸಂಚಾಲಕ ಚಂದ್ರಪ್ಪ, ಕಡೂರು ಸಂಚಾಲಕ ಬಿ.ಎನ್.ಚೌಡಪ್ಪ, ಮುಖಂಡರಾದ ಎಚ್.ಈ.ದೊಡ್ಡಯ್ಯ, ವಿ.ಧರ್ಮೇಶ್, ಬಾಲರಾಜ್, ದಲಿತ ನೌಕರರ ಒಕ್ಕೂಟದ ಅಧ್ಯಕ್ಷ ಭೀಮಯ್ಯ ಉಪಸ್ಥಿತರಿದ್ದರು.