Advertisement

ಇ-ಆಡಳಿತದಲ್ಲಿ ಹಿಂದುಳಿದ ಬಿಬಿಎಂಪಿ!

01:03 AM Oct 15, 2019 | Lakshmi GovindaRaju |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಆಡಳಿತ (ಕಾಗದ ರಹಿತ) ಅಳವಡಿಸಿಕೊಂಡು ಜನ ಸ್ನೇಹಿ ವಾತಾವರಣ ನಿರ್ಮಾಣ ಮಾಡುವಲ್ಲಿ ವಿಳಂಬವಾಗುತ್ತಿದ್ದು, ಖುದ್ದು ಪಾಲಿಕೆಯ ಸದಸ್ಯರೇ ಇ-ಆಡಳಿತಕ್ಕೆ ಒಗ್ಗಿಕೊಳ್ಳುತ್ತಿಲ್ಲ. ಕಾಗದ ರಹಿತ ಆಡಳಿತಕ್ಕೆ ಒತ್ತು ನೀಡುವ ಉದ್ದೇಶದಿಂದ ಕಳೆದ ವರ್ಷ ಪಾಲಿಕೆಯ ಎಲ್ಲ ಸದಸ್ಯರಿಗೂ ಟ್ಯಾಬ್‌ ನೀಡಲಾಗಿತ್ತು. ಆದರೆ, ಬೆರಳೆಣಿಕೆ ಸದಸ್ಯರು ಮಾತ್ರ ಅದನ್ನು ಬಳಸುತ್ತಿದ್ದು, ಟ್ಯಾಬ್‌ ನೀಡಿದ ಮೂಲ ಆಶಯವೇ ಕಮರಿದೆ.

Advertisement

ಬಿಬಿಎಂಪಿಯ ನಡಾವಳಿ, ಸುತ್ತೋಲೆ, ಸಭೆಯ ನಿರ್ಣಯಗಳು, ಮಾಹಿತಿ, ಆದೇಶ ಹಾಗೂ ಕಚೇರಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಇಮೇಲ್‌ ಮೂಲಕವೇ ಕಳುಹಿಸಿ ಸಮಯ ಉಳಿತಾಯ ಮಾಡುವ ಹಾಗೂ ಕಾಗದ ರಹಿತ ವ್ಯವಸ್ಥೆಗೆ ಒತ್ತು ನೀಡುವ ಉದ್ದೇಶದಿಂದ ಟ್ಯಾಬ್‌ಗಳನ್ನು ಪರಿಚಯಿಸಿರುವುದಾಗಿ ಹೇಳಲಾಗಿತ್ತು.

ಬಿಬಿಎಂಪಿಯಲ್ಲಿ ಹಿಂದೆ ಹಲವಾರು ಭ್ರಷ್ಟಾಚಾರ ಪ್ರಕರಣಗಳು ನಡೆದಿದ್ದು, ಅವುಗಳ ತನಿಖೆ ನಡೆಸಲು ಮುಂದಾದಾಗ ಕಡತ ನಾಪತ್ತೆಯಾಗಿರುವ ಪ್ರಕರಣಗಳು ವರದಿಯಾಗಿವೆ. ಜತೆಗೆ, ಲೆಕ್ಕಪರಿಶೋಧಕರು ಹತ್ತಾರು ಬಾರಿ ಕಡತಗಳನ್ನು ಸಲ್ಲಿಸುವಂತೆ ತಿಳಿಸಿದರೂ ಅಧಿಕಾರಿಗಳು ಸಲ್ಲಿಸುವುದಿಲ್ಲ. ಬಿಬಿಎಂಪಿಯ ಮಹತ್ವದ ದಾಖಲೆಗಳಿಗೆ ಬೆಂಕಿ ಹಚ್ಚಿದಂತಹ ಉದಾಹರಣೆಗಳೂ ಇವೆ. ಹೀಗಾಗಿ, ಇ-ಆಡಳಿತ ಮಹತ್ವ ಪಡೆದುಕೊಂಡಿದೆ. ಆದರೆ, ಇಂದಿಗೂ ಅದು ವೇಗ ಪಡೆದುಕೊಂಡಿಲ್ಲ.

ಇ-ಆಫೀಸ್‌ ತಂತ್ರಾಂಶದ ವೇಗವೂ ಕಡಿಮೆ!: ಬಿಬಿಎಂಪಿ ವ್ಯಾಪ್ತಿಯಲ್ಲಿಕಡತಗಳ ವಿಲೇವಾರಿಯಲ್ಲಿ ಅನಗತ್ಯ ವಿಳಂಬ ತಡೆಯಲು ಇ-ಆಫೀಸ್‌ ತಂತ್ರಾಂಶ ಪರಿಚಯಿಸಲಾಗಿದೆ. ಇದರಲ್ಲಿ ಬಿಬಿಎಂಪಿ ಕಾಮಗಾರಿಗಳು ಹಾಗೂ ಸಾರ್ವಜನಿಕರ ಅಹವಾಲು, ಅರ್ಜಿಗಳಿಗೆ ಸಂಬಂಧಿಸಿದ ಕಡತಗಳ ವಸ್ತುಸ್ಥಿತಿ ತಿಳಿಯವ ವ್ಯವಸ್ಥೆ ಇದೆ. ಇದರಿಂದ ಕಡತ ಎಲ್ಲಿದೆ, ಯಾವ ಕಾರಣದಿಂದ ವಿಳಂಬವಾಗಿದೆ, ಅನುಮೋದನೆ ಸಿಕ್ಕಿದೆಯೇ, ಇಲ್ಲವೇ ಎಂಬ ಮಾಹಿತಿ ಸಿಗಲಿದೆ.

ಆದರೆ, ಇಂದಿಗೂ ಬಹುತೇಕ ಅರ್ಜಿ ಮತ್ತು ಕಡತಗಳ ವಿಲೇವಾರಿಗೆ ಕಾಗದವನ್ನೇ ಬಳಸಲಾಗುತ್ತಿದೆ. ಆಡಳಿತ ವರದಿ ಹಾಗೂ ಬಿಬಿಎಂಪಿಯ ಬಜೆಟ್‌ ಅನ್ನು ಕಾಗದ ರಹಿತವಾಗಿ ಮಂಡನೆ ಮಾಡಬೇಕು ಎನ್ನುವ ಆಶಯವೂ ಸಹಾಕಾರವಾಗಿಲ್ಲ. ಇತ್ತೀಚೆಗೆ ಪಾಲಿಕೆಯ 2012ರಿಂದ 2015ರವರೆಗಿನ ಆಡಳಿತ ವರದಿ ಮಂಡನೆಗೆ 25 ಲಕ್ಷ ರೂ. ವ್ಯಹಿಸಲಾಗಿದೆ.

Advertisement

ಕಡತ ಎಲ್ಲಿದೆ ಮಾಹಿತಿ ನೀಡಿ: ಬಿಬಿಎಂಪಿಯ ಒಂಟಿ ಮನೆ ಯೋಜನೆ, ಸಾಮಾಜಿಕ ನ್ಯಾಯ ಸಮಿತಿಯ ಯೋಜನೆಗಳು ಸೇರಿದಂತೆ ಪಾಲಿಕೆಯ ವಿವಿಧ ಯೋಜನೆಗಳ ಕಡತ ವಿಲೇವಾರಿಯುಲ್ಲಿ ಲೋಪವಾಗುತ್ತಿರುವ ಬಗ್ಗೆ ಇತ್ತೀಚೆಗೆ ನಡೆದ ಕೌನ್ಸಿಲ್‌ ಸಭೆಯಲ್ಲಿ ಸದಸ್ಯರು ದನಿ ಎತ್ತಿದ್ದರು. ಕಡತಗಳು ಯಾವ ಅಧಿಕಾರಿಗಳ ಬಳಿ ಇವೆ ಎನ್ನುವುದೇ ತಿಳಿಯುತ್ತಿಲ್ಲ. ಇ-ಆಡಳಿತಕ್ಕೆ ಒತ್ತು ನೀಡಿ, ಕಡತಗಳ ವಿಲೇವಾರಿಗೆ ವೇಗ ನೀಡಿ ಎಂದು ಒತ್ತಾಯಿಸಿದರು.

ಟ್ಯಾಬ್‌ ಖರೀದಿಗೆ ಮಾಡಿದ ವೆಚ್ಚ 99 ಲಕ್ಷ ರೂ.!: ಬಿಬಿಎಂಪಿಯು 2017-18ನೇ ಸಾಲಿನಲ್ಲಿ ಆ್ಯಪಲ್‌ ಸಂಸ್ಥೆಯಿಂದ 225 ಟ್ಯಾಬ್‌ಗಳನ್ನು ಖರೀದಿ ಮಾಡಿತ್ತು. ಪ್ರತಿ ಟ್ಯಾಬ್‌ಗೆ 38,600 ರೂ., ಪ್ರತಿ ಟ್ಯಾಬ್‌ ಪೌಚ್‌ಗೆ ಎರಡು ಸಾವಿರ ರೂ. ತಂತ್ರಾಂಶ ಹಾಗೂ ಸದಸ್ಯರಿಗೆ ತರಬೇತಿ ನೀಡುವುದಕ್ಕೆ 3,400 ರೂ. ವ್ಯಯಿಸಲಾಗಿತ್ತು. ಒಟ್ಟಾರೆ ಯೋಜನೆಗೆ 99 ಲಕ್ಷರೂ. ವೆಚ್ಚ ಮಾಡಲಾಗಿದೆ.

ಹಣಕಾಸು ಹಾಗೂ ಆಡಳಿತ ಸಂಬಂಧಿ ಕಡತ ಮತ್ತು ಸುತ್ತೋಲೆಗಳು ಇ-ಆಡಳಿತದ ವ್ಯವಸ್ಥೆಯಲ್ಲೇ ರವಾನೆಯಾಗುತ್ತಿವೆ. ಕಡತಗಳು ಬೃಹತ್‌ ಗಾತ್ರದಲ್ಲಿ ಇರುವುದರಿಂದ ಇ-ಆಡಳಿತದ ವ್ಯಾಪ್ತಿಗೆ ತರಲು ತಡವಾಗುತ್ತಿದೆ.
-ಎಂ.ಲೋಕೇಶ್‌, ಹಣಕಾಸು ಆಯುಕ್ತ

ಇ-ಆಡಳಿತದ ಅನುಷ್ಠಾನ ಇನ್ನಷ್ಟು ಪರಿಣಾಮಕಾರಿಯಾಗಿ ಆಗಬೇಕು. ವಿವಿಧ ವಲಯಗಳ ಅಧಿಕಾರಿಗಳ ಸಭೆಯನ್ನು ಕೇಂದ್ರ ಕಚೇರಿಯಲ್ಲಿ ನಡೆಸುವುದಕ್ಕಿಂತ, ವಿಡಿಯೋ ಕಾನ್ಫರೆನ್ಸ್‌ ಮಾಡಬಹುದು. ಇದರಿಂದ ಸಮಯ, ಸಾರಿಗೆ ವೆಚ್ಚ ಉಳಿಯಲಿದೆ.
-ಗುಣಶೇಖರ್‌, ಪಾಲಿಕೆ ಸದಸ್ಯ

* ಹಿತೇಶ್ ವೈ.

Advertisement

Udayavani is now on Telegram. Click here to join our channel and stay updated with the latest news.

Next