Advertisement
ಮಾರ್ಚ್‌ನಲ್ಲಿ ಡಾ| ಹು ಹಾಗೂ ಇನ್ನೋರ್ವ ವೈದ್ಯರ ಚರ್ಮ ಕಪ್ಪಗಾಗಿತ್ತು. ಇದು “ಜಠರದ ದೋಷದಿಂದ ಆದದ್ದು’ ಎಂದು ಸಮಜಾಯಿಷಿ ನೀಡಲಾಗಿತ್ತು. ಡಾ| ಹು ಸಾವಿನ ನಿಖರ ಕಾರಣವನ್ನು ಬಹಿರಂಗಪಡಿಸಲಾಗಿಲ್ಲ. ಆದರೆ ಅವರು ಕೋವಿಡ್‌ನಿಂದಾಗಿಯೇ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.
ಕೋವಿಡ್‌ನ ಉಗಮ ಸ್ಥಾನವಾಗಿರುವ ವುಹಾನ್‌ನ ಸೆಂಟ್ರಲ್ ಆಸ್ಪತ್ರೆಯಲ್ಲಿ ಮೂತ್ರಪಿಂಡ ತಜ್ಞರಾಗಿದ್ದರು ಡಾ|ಹು. ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಅವರಿಗೇ ಜ.19ರಂದು ಸೋಂಕು ತಗಲಿದ್ದು ದೃಢವಾಗಿತ್ತು. ನಂತರದ ಎರಡು ತಿಂಗಳಲ್ಲಿ ಅವರನ್ನು ಚಿಕಿತ್ಸೆಗಾಗಿ ಬೇರೆ ಬೇರೆ ಆಸ್ಪತ್ರೆಗಳಿಗೆ ಕೊಂಡೊಯ್ಯಲಾಗಿತ್ತು. ತುಸು ಚೇತರಿಸಿಕೊಂಡರೂ ಬಳಿಕ ಅವರಿಗೆ ಮಿದುಳಿನ ರಕ್ತಸ್ರಾವವಾಯಿತು. ಡಾ|ಹು ಮತ್ತು ಹೃದ್ರೋಗ ತಜ್ಞ ಡಾ| ಯೀ ಫ್ಯಾನ್ ಅವರ ಚರ್ಮ ಕಪ್ಪಾದದ್ದು ಅಂತಾರಾಷ್ಟ್ರೀಯ ಸುದ್ದಿಯಾಗಿತ್ತು. ಇದು ಕೋವಿಡ್ ವೈರಸ್ ವಿರುದ್ಧ ವೈದ್ಯರು ನಡೆಸುತ್ತಿರುವ ಅತಿ ಕಠಿನ ಹೋರಾಟಕ್ಕೆ ಭಾಷ್ಯ ಬರೆದಂತಿತ್ತು. “ಸಿನ ವೈಬೊ’ ಎಂಬ ಟ್ವಿಟ್ಟರ್ ಮಾದರಿಯ ಸೋಷಿಯಲ್ ಮೀಡಿಯಾದಲ್ಲಿ ಈ ಇಬ್ಬರು ವೈದ್ಯರು ಭಾರೀ ವೈರಲ್ ಆಗಿದ್ದರು. ಕಪ್ಪು ಮುಖದ ಇಬ್ಬರು ವುಹಾನ್ ವೈದ್ಯರು ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಅವರನ್ನು ಕೊರೋನಾ ವಿರುದ್ಧ ಹೋರಾಡುತ್ತಿರುವ ಯೋಧರು ಎಂದು ಬಿಂಬಿಸಲಾಗಿತ್ತು. ಸಾವಿನ ಜತೆಗೆ ಹೋರಾಡಿದ ದೇವದೂತರು ಎಂಬಿತ್ಯಾದಿಯಾಗಿ ಅವರನ್ನು ಹೊಗಳಲಾಗಿತ್ತು. ಅವರ ಸ್ಥಿತಿ ಕೋವಿಡ್ ವಿರುದ್ಧ ಹೋರಾಡುವ ವೈದ್ಯರ ಸ್ಥಿತಿಯನ್ನು ಪ್ರತಿಬಿಂಬಿಸುತ್ತಿತ್ತು. ಈ ಪೈಕಿ ಡಾ| ಯೀ ಮೇ 6ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಆದರೆ ಡಾ| ಹು ಚೇತರಿಸಿಕೊಳ್ಳಲೇ ಇಲ್ಲ.
Related Articles
ಡಾ|ಲೀ ವೆನ್‌ಲಿಯಂಗ್ ಕೋವಿಡ್ ವೈರಸ್ ಬಗ್ಗೆ ಮೊದಲ ಬಾರಿಗೆ ಎಚ್ಚರಿಸಿದ ವೈದ್ಯ. ಡಿಸೆಂಬರ್‌ನಲ್ಲಿಯೇ ಅವರು ಕೋವಿಡ್ ಅಪಾಯಕಾರಿ ವೈರಸ್ ಎಂದು ಸಾರಿದ್ದರು. ಡಾ| ಹು ಮತ್ತು ಡಾ| ಯೀ ಅವರ ಜತೆಗೆ ವುಹಾನ್‌ನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಡಾ| ಹು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ 68 ಸಿಬಂದಿಗಳು ಕೋವಿಡ್‌ಗೆ ತುತ್ತಾಗಿದ್ದರು. ಡಾ| ಲೀ ವೆನ್‌ಲಿಯಂಗ್ ಅವರೂ ಸೋಂಕಿತರಾಗಿ ಮೃತಪಟ್ಟಿದ್ದಾರೆ. ಆಗಲೂ ಇದೇ ರೀತಿಯ ಆಕ್ರೋಶ ವ್ಯಕ್ತವಾಗಿ ಬಳಿಕ ತಣ್ಣಗಾಗಿತ್ತು. ಅವರ ಸಾವಿನ ಕಾರಣವನ್ನೂ ಚೀನದ ಕಮ್ಯುನಿಷ್ಟ್ ಸರಕಾರ ಬಹಿರಂಗಪಡಿಸಿಲ್ಲ. ವುಹಾನ್ ಆಸ್ಪತ್ರೆಯಲ್ಲಿ ಒಟ್ಟು ಐವರು ವೈದ್ಯಕೀಯ ಸಿಬಂದಿಗಳು ಕೋವಿಡ್‌ಗೆ ಬಲಿಯಾಗಿದ್ದಾರೆ.
Advertisement