Advertisement

ಚುನಾವಣಾ ಕರ್ತವ್ಯ ಹಿನ್ನೆಲೆ: ಪಾಲಿಕೆ ಅಧಿಕಾರಿ, ಸಿಬಂದಿಗೆ ಕಚೇರಿಯಲ್ಲೇ ದೀಪಾವಳಿ !

11:24 PM Oct 26, 2019 | Team Udayavani |

ಮಹಾನಗರ: ಮ.ನ.ಪಾ.ಚುನಾವಣೆಯ ಹಿನ್ನೆಲೆಯಲ್ಲಿ ಹಲವು ಮಂದಿ ಅಧಿಕಾರಿ, ಸಿಬಂದಿ ದೀಪಾವಳಿ ರಜೆಯಿಂದ ವಂಚಿತರಾಗಿದ್ದಾರೆ. ನ. 12ರಂದು ಪಾಲಿಕೆಗೆ ಮತದಾನ ನಡೆಯಲಿದ್ದು ಪಾಲಿಕೆಯಲ್ಲಿ ಚುನಾವಣಾ ಪ್ರಕ್ರಿಯೆ ಈಗಾಗಲೇ ಚುರುಕುಗೊಂಡಿದೆ. ಕಂದಾಯ ವಿಭಾಗ ಸಹಿತ ಬಹುತೇಕ ಎಲ್ಲ ವಿಭಾಗಗಳ ಅಧಿಕಾರಿ, ಸಿಬಂದಿಗೆ ಚುನಾ ವಣೆಗೆ ಸಂಬಂಧಿಸಿದ ಒಂದಿಲ್ಲೊಂದು ಹೊಣೆ ಹೊರಿಸಲಾಗಿದೆ. ಅ. 26ರಂದು ನಾಲ್ಕನೇ ಶನಿವಾರದ ರಜಾ ದಿನವಾಗಿದ್ದರೂ ಮಹಾನಗರ ಪಾಲಿಕೆಯ ಹೆಚ್ಚಿನ ಎಲ್ಲ ಇಲಾಖೆಗಳು ಕಾರ್ಯ ನಿರ್ವಹಿಸಿವೆ. ರಾತ್ರಿಯವರೆಗೂ ಕಚೇರಿ ಕೆಲಸಗಳು ನಡೆಯುತ್ತಿವೆ.

Advertisement

ಸಮಯ ಕಡಿಮೆ
ಅ. 20ಕ್ಕೆ ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಿತ್ತು. ಅ. 24ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಯಿತು. ಒಂದು ರೀತಿಯಲ್ಲಿ ಈ ಬಾರಿಯದ್ದು ತರಾತುರಿಯ ಚುನಾವಣಾ ಪ್ರಕ್ರಿಯೆ. ಸಿದ್ಧತೆಗೆ ಹೆಚ್ಚು ಸಮಯ ಇಲ್ಲದಿದುದರಿಂದ ಹೆಚ್ಚಿನ ಸಂಖ್ಯೆಯ ಅಧಿಕಾರಿ, ಸಿಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

“ಹಿಂದೆ ಇಂತಹ ಸಂದರ್ಭ ಬಂದಿಲ್ಲ. ಈ ವರ್ಷ ದೀಪಾವಳಿ ರಜೆ ಸಿಗುವುದಿಲ್ಲ. ಹೊಂದಾ  ಣಿಕೆ ಮಾಡಿಕೊಳ್ಳುತ್ತೇವೆ. ದೀಪಾವಳಿ ಜತೆಗೆ ಪ್ರಜಾಪ್ರಭುತ್ವದ ಹಬ್ಬವನ್ನೂ ಆಚರಿಸಿದಂತೆ ಆಗುತ್ತದೆ. ಕರ್ತವ್ಯವೂ ಮುಖ್ಯ’ ಎಂದು ಪಾಲಿಕೆ ಅಧಿಕಾರಿಯೋರ್ವರು ಪ್ರತಿಕ್ರಿಯಿಸಿದ್ದಾರೆ. “ಮನೆಯಲ್ಲಿ ರಾತ್ರಿ ದೀಪಾವಳಿ ಆಚರಣೆ, ಕಚೇರಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತೇವೆ’ ಎಂದು ಸಿಬಂದಿಯೋರ್ವರು ಹೇಳಿದರು.

300ಕ್ಕೂ ಅಧಿಕ ಸಿಬಂದಿ
ಸರಿಸುಮಾರು 12 ಮಂದಿ ಚುನಾವಣಾಧಿಕಾರಿಗಳು, 12 ಸಹಾಯಕ ಚುನಾವಣಾಧಿಕಾರಿಗಳು, ಮೂವರು ಚುನಾವಣಾ ವೆಚ್ಚ ವೀಕ್ಷಕರು, 6 ವೆಚ್ಚ ಪರಿಶೀಲನಾ ಅಧಿಕಾರಿಗಳು, ಸದಾಚಾರ ಸಂಹಿತೆ ತಂಡ (12ಮಂದಿ), ಏಕಗವಾಕ್ಷಿ ತಂಡ(10), ಚುನಾವಣಾ ಸಾಮಾಗ್ರಿ ಸಿದ್ಧತೆ (20 ಮಂದಿ), 2,300 ಮಂದಿ ಮತಗಟ್ಟೆ ಸಿಬಂದಿ, 16 ಮಂದಿ ಮಾಹಿತಿ ಸಂಗ್ರಾಹಕರು, 36 ಚುನಾವಣಾ ಸಹಾಯಕ ಸಿಬಂದಿ ಸೇರಿದಂತೆ ಒಟ್ಟು ಸುಮಾರು 2,663ರಷ್ಟು ಮಂದಿ ಅಧಿಕಾರಿ/ಸಿಬಂದಿ ಪಾಲಿಕೆ ಚುನಾವಣೆಯ ಕರ್ತವ್ಯ ನಿರತರಾಗಿದ್ದಾರೆ. ಇದರಲ್ಲಿ 300ಕ್ಕೂ ಅಧಿಕ ಮಂದಿ ಪಾಲಿಕೆಯ ಅಧಿಕಾರಿ/ಸಿಬಂದಿ ಇದ್ದಾರೆ.

ಚುನಾವಣೆಯೇ ಮುಖ್ಯ
ದೀಪಾವಳಿ ಬೇಕು. ಆದರೆ ಈ ಬಾರಿ ಚುನಾವಣೆ ಬಂದಿರುವುದರಿಂದ ಚುನಾವಣೆಯೇ ಮುಖ್ಯವಾಗಿದೆ. ಪಾಲಿಕೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಅಧಿಕಾರಿ, ಸಿಬಂದಿಗೆ ಹಬ್ಬದ ರಜೆ ರದ್ದು ಮಾಡಿದ್ದೇವೆ. ಕೆಲಸದ ಅವಧಿ ಕೂಡ ಸಾಮಾನ್ಯವಾಗಿ ಕೆಲವು ದಿನಗಳ ಕಾಲ ಹೆಚ್ಚಾಗಿರುತ್ತದೆ. ಎಲ್ಲರ ಸಹಕಾರದಿಂದ ಚುನಾವಣೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತೇವೆ.
 - ಶಾನಾಡಿ ಅಜಿತ್‌ ಕುಮಾರ್‌ ಹೆಗ್ಡೆ, ಆಯುಕ್ತರು, ಪಾಲಿಕೆ

Advertisement
Advertisement

Udayavani is now on Telegram. Click here to join our channel and stay updated with the latest news.

Next