Advertisement

ತಿರುವಲ್ಲಿ ನಿಂತು ಹಿಂತಿರುಗು ಒಮ್ಮೆ ಕಡೆಯ ಸೆಮಿಸ್ಟರಿನ ಲಾಸ್ಟ್‌ಲೆಟರ್

03:45 AM Jan 31, 2017 | |

ಎರಡು ವರ್ಷ ಒಂದೇ ಕಾಲೇಜ್‌ನಲ್ಲಿ ಇದ್ರೂ ಪರಿಚಯವೇ ಇರಲಿಲ್ಲ. ಒಮ್ಮೊಮ್ಮೆ ಕಾಲೇಜ್‌ ಕಾರಿಡಾರ್‌ನಲ್ಲಿ ನಿನ್ನನ್ನು ಕಂಡಾಗ ಗೊಣಗಿಕೊಂಡ ನೆನಪಷ್ಟೇ. ಇದನ್ನ ಬಿಟ್ಟರೆ ನಮ್ಮಿಬ್ಬರಿಗೆ ಯಾವುದೇ ರೀತಿಯ ಪರಿಚಯವಿರಲಿಲ್ಲ. ಹಿರಿಯರು ಹೇಳಿದ ಹಾಗೆ ಸ್ನೇಹ ಬೆಳೆಯಲು ಕಾರಣಗಳು ಬೇಕಿಲ್ಲ. ಕೆಲವರಿಗೆ ರಸ್ತೆಯಲ್ಲಿ ನಡೆಯುವಾಗ ಪರಿಚಯವಾಗಿ ಸ್ನೇಹ ಬೆಳೆಯುತ್ತದೆ. ಇನ್ನು ಕೆಲವರಿಗೆ ಕೆಲಸ ಮಾಡುವ ಸ್ಥಳದಲ್ಲಿ ಪರಿಚಯವಾಗಿ ಸ್ನೇಹ ಬೆಳೆಯುತ್ತದೆ. ಆದರೆ ಆ ವಿಧಿಯ ಆಟ ನೋಡು ಗೆಳತಿ ನಮ್ಮಿಬ್ಬರ ಸ್ನೇಹ ಎನ್‌ಎಸ್‌ಎಸ್‌ ಕ್ಯಾಂಪಿನಲ್ಲಿ ಬೆಳೆಯಿತು.

Advertisement

ಗೆಳತಿ ನಾನಿನ್ನ ಮೊದಲು ಎಲ್ಲೋ ಒಂದೆರಡು ಬಾರಿ ನೋಡಿರಬಹುದು ಅಷ್ಟೇ. ಕ್ಯಾಂಪಿನಲ್ಲಿ ನೀ ಮೊದಲ ದಿನ ಧ್ವಜದ ಸುತ್ತ ರಂಗೋಲಿ ಹಾಕುತ್ತಿದ್ದೆ. ಅಂದು ನಾನು ನಿನ್ನ ಮೊದಲು ನೋಡಿದೆ, ಅಲ್ಲಿಂದ ನಮ್ಮ ಸ್ನೇಹದ ಬೀಜ ಮೊಳಕೆಯೊಡೆದು ಚಿಗುರಲು ಶುರುಮಾಡಿತು. ಆದರೆ ಈಗ ನೋಡು, ಆ ಚಿಗುರು ಹೆಮ್ಮರವಾಗಿ ಬೆಳೆದು ನಿಂತಿದೆ. ನಾನಿನ್ನ ಎಷ್ಟೋ ಬಾರಿ ಬೇಜಾರು ಮಾಡಿರುವೆ, ಬೈದಿರುವೆ, ತರ್ಲೆ ಮಾಡಿರುವೆ. ಆದರೂ ನೀ ನನ್ನ ಸ್ನೇಹವನ್ನು ಬಯಸಿರುವೆ.

ಎನ್‌ಎಸ್‌ಎಸ್‌ನ ಕೊನೆಯ ದಿನ ಯಾಕಾದರೂ ಬಂದಿತೋ ಎನಿಸಿತು. ಅಂದು ಪರಸ್ಪರ ಚರವಾಣಿಯ ಸಂಖ್ಯೆಗಳನ್ನು ಪಡೆದೆವು. ಅಂದಿನಿಂದ ನಮ್ಮ ಚರವಾಣಿಗಳಲ್ಲಿ ರವಾನಿಸಿದ ಸಂದೇಶಗಳು ಸಾವಿರಾರು. ಪ್ರತಿದಿನ ನಿನ್ನ ಶುಭ ಮುಂಜಾನೆಯ ಸಂದೇಶದಿಂದ ನನಗೆ ಬೆಳಕಾಗಬೇಕಿತ್ತು. ಇಲ್ಲವಾದರೆ ಮನಸ್ಸಿಗೇನೋ ಜಡತ್ವ, ಏನನ್ನೋ ಕಳೆದುಕೊಂಡ ಹಾಗೆ ಅನಿಸುತ್ತಿತ್ತು. ನಿಜ ಹೇಳಬೇಕೆಂದರೆ ನೀನೊಂದು ಕಡೆ ನಾನೊಂದು ಕಡೆ ಇದ್ದರೂ ನಮ್ಮ ಆಲೋಚನೆಗಳು ಒಂದೇ ಆಗಿರುತ್ತಿದ್ದವು.

ನಿಜವಾದ ಗೆಳೆತನದ ಸಿಹಿ ತಿಳಿಯದೇ ಇದ್ದ ನನಗೆ ಗೆಳೆತನದ ಸಿಹಿಯನ್ನು ಉಣಬಡಿಸಿದೆ. ಗೆಳತಿ ನೀನು ನನ್ನ ಮೇಲೆ ತೋರಿಸುತ್ತಿರುವ ಪ್ರೀತಿ ಕಾಳಜಿಯಿಂದ ಪ್ರಪಂಚದ ಎಲ್ಲಾ ಸಂತೋಷ ನನಗೆ ಸ್ವಂತ ಅನಿಸಿದೆ. ಕಾಲೇಜಿನ ಕ್ಯಾಂಪಸ್‌ನಲ್ಲಿ ದಿನಕ್ಕೆ ಒಮ್ಮೆಯಾದರೂ ನಿನ್ನ ನೋಡಬೇಕೆನಿಸುತ್ತದೆ, ನನ್ನ ಕಣ್ಣಳತೆಯಿಂದ ಮರೆಯಾದರೆ ನನಗೆ ಏನೋ ಚಡಪಡಿಕೆ.

ಗೆಳತಿ ನಿನ್ನ ಗೆಳೆತನದಿಂದ ನನ್ನ ಜೀವನದಲ್ಲಿ ಆದ ಬದಲಾವಣೆಗಳು ಅದೆಷ್ಟೋ. ನೀನು ನನಗೆ ನಿಜವಾದ ಗೆಳೆತನ, ಪ್ರೀತಿ, ಬದುಕು ಹೀಗೆ ಎಲ್ಲವನ್ನೂ ಕಲಿಸಿರುವೆ. ಹೇಳಬೇಕೆಂದರೆ ಮನ ಮೆಚ್ಚಿದ ದೋಸ್ತಿ ನೀನಾದೆ. ಅರೆಕ್ಷಣಕೊಮ್ಮೆ ಬೇಸರ, ಕ್ಷಣಕೊಮ್ಮೆ ಮುನಿಸು, ಚಿಕ್ಕ ಮಕ್ಕಳ ಹಾಗೆ ತರ್ಲೆ, ಇವೆಲ್ಲ ನಮಗೆ ಸರ್ವೇ ಸಾಮಾನ್ಯವಾದವು.

Advertisement

ನೋಡು ಗೆಳತಿ ಇದೆಲ್ಲ ಕಾಲದ ಜೊತೆಗೆ ನಡೆದು ಬಂದ ಪಯಣ. ಆದರೆ ಜೀವನ ಅನ್ನುವುದು ಪ್ಯಾಸೆಂಜರ್‌ ಟ್ರೆ„ನ್‌ ಥರ. ನಮ್ಮ ಪಯಣದ ಹಾದಿಯಲ್ಲಿ ನಮ್ಮ ಸ್ಥಳ ಸಿಕ್ಕ ಮೇಲೆ ಇಳಿಯಲೇ ಬೇಕು. ಇನ್ನು ಮೂರು ತಿಂಗಳು ಮಾತ್ರ ಜೊತೆಯಲ್ಲಿ ವ್ಯಾಸಂಗ ಮಾಡುತ್ತೇವೆ ಅಷ್ಟೇ. ಆದರೆ ನೀ ಬೇಸರ ಪಡಬೇಡ, ಏಕೆಂದರೆ ನಮ್ಮಿಬ್ಬರ ನಡುವೆ ಇರುವ ಸ್ನೇಹ ಒಂದೇ ದಿನ ಅರಳಿ ಬಾಡಿ ಹೋಗುವ ಸ್ನೇಹವಲ್ಲ. ಎಷ್ಟೇ ಬಿಸಿಲು ಬಡಿದರೂ ಚಿರಾಯುವಾಗಿರುವ ಸ್ನೇಹ. ಖುಷಿಯಾಗಿರು. ಎಲ್ಲೇ ಇರು ಹೇಗೆ ಇರು ಹ್ಯಾಪಿಯಾಗಿರು ಬುಜ್ಜಿ.

– ಗಿರೀಶ ಜಿಆರ್‌ 
ಪತ್ರಿಕೋದ್ಯಮ ವಿಭಾಗ,
ಕುವೆಂಪು ವಿವಿ,ಶಂಕರಘಟ್ಟ.

Advertisement

Udayavani is now on Telegram. Click here to join our channel and stay updated with the latest news.

Next