ಸಿಯೋಲ್: ಒಂದರ ಹಿಂದೊಂದರಂತೆ ಕ್ಷಿಪಣಿ ಪರೀಕ್ಷೆ ನಡೆಸುತ್ತಾ ಅಮೆರಿಕ ನಾಶಗೊಳಿಸುವ ಬೆದರಿಕೆ ಒಡ್ಡುತ್ತಿರುವ ಉತ್ತರ ಕೊರಿಯಾ ಬುಧವಾರ ಅತ್ಯಂತ ಶಕ್ತಿಶಾಲಿಯಾದ ಹ್ವಾಸಾಂಗ್-15 ಎಂಬ ಖಂಡಾತರ ಕ್ಷಿಪಣಿಯೊಂದರ ಯಶಸ್ವಿ ಪ್ರಯೋಗ ನಡೆಸಿರುವುದಾಗಿ ಘೋಷಿಸಿದೆ.
ಖಂಡಾಂತರ ಕ್ಷಿಪಣಿ ಪರೀಕ್ಷೆ ಸರಣಿಯಲ್ಲಿ ಉತ್ತರ ಕೊರಿಯಾ ನಡೆಸಿರುವ ಮೂರನೇ ಕ್ಷಿಪಣಿ ಇದಾಗಿದ್ದು, ಈ ಹಿಂದಿನ ಎಲ್ಲಾ ಕ್ಷಿಪಣಿ ಗಿಂತಲೂ ಹ್ವಾಸಾಂಗ್-51 ಅತ್ಯಂತ ಶಕ್ತಿಶಾಲಿ ಹಾಗೂ ವಿನಾಶಕಾರಿ ಎಂದು ಹೇಳಲಾಗಿದೆ.
ಏನಿದರ ವಿಶೇಷ?: ಇದು ಅಣ್ವಸ್ತ್ರದ ಸಿಡಿ ತಲೆಗಳನ್ನು ಕೊಂಡೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಉಡಾವಣೆಗೊಂಡ ನಂತರ 4,475 ಕಿ.ಮೀ. ಎತ್ತರಕ್ಕೆ ಚಿಮ್ಮಬಲ್ಲ ಇದು, ಆನಂತರ ತನ್ನ ಗುರಿಯೆಡೆಗೆ ಮುಖ ಮಾಡಿ 13 ಸಾವಿರ ಕಿ.ಮೀ.ವರೆಗೆ ಸಾಗಬಲ್ಲದು. ಅಲ್ಲದೆ, ಅಮೆರಿಕದ ಯಾವುದೇ ಪ್ರಮುಖ ನಗರವನ್ನು ನಿಮಿಷಗಳಲ್ಲೇ ನಾಶ ಮಾಡಬಲ್ಲ ಶಕ್ತಿ ಇದಕ್ಕಿದೆ ಎಂದು ಉತ್ತರ ಕೊರಿಯಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಸರ್ಕಾರಿ ವಾಹಿನಿಯಲ್ಲಿ ಕ್ಷಿಪಣಿ ಯಶಸ್ವಿ ಪರೀಕ್ಷೆ ಪ್ರಕಟಿಸಿದ ಅಲ್ಲಿನ ಸ್ಟಾರ್ ನಿರೂಪಕಿ ರಿ ಚುನ್-ಹೀ, ಹೊಸ ಕ್ಷಿಪಣಿ ಪರೀಕ್ಷೆಯಿಂದಾಗಿ ಉತ್ತರ ಕೊರಿಯಾವು ಅಣ್ವಸ್ತ್ರಗಳ ಸಂಸ್ಥಾನ ವೆಂಬ ಹೆಗ್ಗಳಿಕೆ ಪಡೆದುಕೊಂಡಂತಾಗಿದೆ ಎಂದು ಅಧ್ಯಕ್ಷ ಕಿಮ್ ಜಾಂಗ್-ಉನ್ ಘೋಷಿ ಸಿರುವುದಾಗಿ ಹೇಳಿದ್ದಾರೆ. ಮಹತ್ವದ ಬೆಳವಣಿಗೆಗಳು ನಡೆದಾಗ ಮಾತ್ರವೇ ರಿ ಚುನ್ ಅವರು ಟಿವಿಯಲ್ಲಿ ಕಾಣಿಸಿ ಕೊಳ್ಳುತ್ತಾರೆ.
ಉತ್ತರ ಕೊರಿಯಾದ ಈ ಹೊಸ ರಣೋತ್ಸಾಹ ಅಮೆರಿಕಕ್ಕೆ ಕೇಡುಗಾಲ ತರಲಿದೆ ಎಂದು ಹೇಳಲಾಗಿದ್ದು, ಅಮೆರಿಕದ ವಿಜ್ಞಾನಿ ಗಳ ಒಕ್ಕೂಟದ ಸಹ ನಿರ್ದೇಶಕ ಡೇವಿಡ್ ರಿಟ್ ಅವರೂ ಈ ಕ್ಷಿಪಣಿ ಬಗ್ಗೆ ಆತಂಕ ವ್ಯಕ್ತಪಡಿಸಿರುವುದು ಇದಕ್ಕೆ ಪುಷ್ಟಿ ನೀಡಿದೆ.
ರಷ್ಯಾ ಪ್ರತಿಕ್ರಿಯೆ: ಉತ್ತರ ಕೊರಿಯಾದ ಹೊಸ ಕ್ಷಿಪಣಿ ಪ್ರಯೋಗ, ಯುದ್ಧ ಪ್ರಚೋದನಾ ತಂತ್ರಗಾರಿಕೆ ಎಂದು ರಷ್ಯಾದ ಅಧ್ಯಕ್ಷರ ಅಧಿಕೃತ ನಿವಾಸವಾದ ಮಾಸ್ಕೊ ಕ್ರೆಮ್ಲಿನ್ ಹೇಳಿದೆ.
ತ್ರಿಮೂರ್ತಿಗಳ ತುರ್ತು ಸಭೆ
ಉತ್ತರ ಕೊರಿಯಾ ವತಿಯಿಂದ ಹೊಸ ಕ್ಷಿಪಣಿ ಪ್ರಯೋಗ ಯಶಸ್ವಿ ವಿಚಾರ ಪ್ರಕಟವಾದ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದೂರವಾಣಿ ಮೂಲಕ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ-ಇನ್ ಹಾಗೂ ಜಪಾನ್ ಪ್ರಧಾನಿ ಅಬೆ ಶಿಂಜೊ ತುರ್ತು ಸಭೆ ನಡೆಸಿದ್ದಾರೆ. ಉತ್ತರ ಕೊರಿಯಾದ ಈ ನಡೆಯಿಂದ ದಕ್ಷಿಣ ಕೊರಿಯಾ, ಜಪಾನ್ ರಾಷ್ಟ್ರಗಳು ಕಟ್ಟೆಚ್ಚರ ವಹಿಸಬೇಕೆಂದು ಟ್ರಂಪ್ ಸೂಚಿಸಿದ್ದಾರೆ.