ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಐದು ವರ್ಷದ ಆಡಳಿತದಲ್ಲಿ ನಗರಕ್ಕೆ ಸೂಕ್ತ ಮೂಲ ಸೌಕರ್ಯ ಒದಗಿಸದ ಕಾರಣ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರಿನ ವರ್ಚಸ್ಸು ಕುಂದಿದೆ ಎಂದು ಕೇಂದ್ರ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ದೂರಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಐಟಿಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ಅಗತ್ಯ ಮೂಲ ಸೌಕರ್ಯ ಒದಗಿಸುವ ಕಾರ್ಯದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ನಗರದ ಕೆರೆಗಳಲ್ಲಿ ಬೆಂಕಿ ಹೊತ್ತಿ ಉರಿಯುತ್ತಿವೆ. ಮಾಲಿನ್ಯ ಮೇರೆ ಮೀರಿದೆ. ಹಾಗಾಗಿ ಐಟಿ ಕ್ಷೇತ್ರದ ಹೊಸ ಸಂಶೋಧನೆಗಳನ್ನು ಕೆರೆಗಳಲ್ಲಿ ಕಾಣುವಂತಾಗಿದೆ ಎಂದು ಲೇವಡಿ ಮಾಡಿದರು.
ಐಟಿ ಕ್ಷೇತ್ರವನ್ನು ಸಣ್ಣ ಪುಟ್ಟ ನಗರಗಳಿಗೂ ವಿಸ್ತರಿಸುವ ಸಲುವಾಗಿ “ಡಿಜಿಟಲ್ ಇಂಡಿಯಾ’ ಕಾರ್ಯಕ್ರಮದಡಿ 22 ರಾಜ್ಯಗಳಲ್ಲಿ 82 ಬಿಪಿಒ ಕೇಂದ್ರ ಆರಂಭಿಸಲಾಗಿದೆ. ರಾಜ್ಯದ ಮೈಸೂರು, ಮಣಿಪಾಲ, ಮಂಗಳೂರು, ಕಲಬುರಗಿ, ಉಡುಪಿ, ಶೃಂಗೇರಿ, ವಿಜಯಪುರ, ಹೊಸಪೇಟೆ, ಚಿಕ್ಕಮಗಳೂರು ಹಾಗೂ ಹುಬ್ಬಳ್ಳಿಯಲ್ಲಿ “ನಮ್ಮ ಬಿಪಿಒ ಕೇಂದ್ರ’ ಆರಂಭಿಸಲಾಗುವುದು.
ಐಟಿ ಕ್ಷೇತ್ರದ ಪ್ರಗತಿಗೆ ನಗರಗಳಿಗೆ ಮೂಲ ಸೌಕರ್ಯ ಅಗತ್ಯ. ಆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮೂಲ ಸೌಕರ್ಯ ವೃದ್ಧಿಗೆ ಪ್ರಣಾಳಿಕೆಯಲ್ಲಿ ಆದ್ಯತೆ ನೀಡಲಾಗಿದೆ. ರಾಜ್ಯದಲ್ಲೂ ಬಿಜೆಪಿ ಸರ್ಕಾರ ಬಂದರೆ ಕೇಂದ್ರದಿಂದ ಸಾಕಷ್ಟು ಅನುದಾನ ಸಿಗಲಿದೆ ಎಂದು ಹೇಳಿದರು.
ತ್ರಿವಳಿ ತಲಾಕ್: ಕಾಂಗ್ರೆಸ್ ನಿಲುವೇನು: ರಾಜ್ಯದಲ್ಲಿ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಾರೆ. ಆದರೆ ತ್ರಿವಳಿ ತಲಾಕ್ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಬಹಳಷ್ಟು ಮುಸ್ಲಿಂ ರಾಷ್ಟ್ರಗಳಲ್ಲೇ ತ್ರಿವಳಿ ತಲಾಕ್ ನಿಷೇಧಿಸಲಾಗಿದೆ. ಹಾಗಿದ್ದರೂ ಈ ವಿಚಾರದಲ್ಲಿ ಕಾಂಗ್ರೆಸ್ ನಿಲುವೇನು ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಲಿ: ಕರ್ನಾಟಕ ಸೇರಿದಂತೆ ದೇಶದಲ್ಲಿ ಎರಡು ಲಕ್ಷ ಮಂದಿಗೆ ವಂಚಿಸಿ ತಲೆ ಮರೆಸಿಕೊಂಡಿರುವ ಈಶ್ವರ್ ವಿಜಯನ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾಗಿದ್ದು, ಅವರಿಂದ ಬಾಕ್ಸ್ ರೂಪದಲ್ಲಿ ಉಡುಗೊರೆ ಪಡೆದಿದ್ದಾರೆ. ಈ ಬಗ್ಗೆ ರಾಜ್ಯದ ಜನತೆಗೆ ಸ್ಪಷ್ಟನೆ ನೀಡಬೇಕು ಎಂದು ರವಿಶಂಕರ್ ಪ್ರಸಾದ್ ಒತ್ತಾಯಿಸಿದರು. ಬಿಜೆಪಿ ರಾಷ್ಟ್ರೀಯ ವಕ್ತಾರ ಡಾ.ಸಂಬೀತ್ ಪಾತ್ರ ಇತರರು ಉಪಸ್ಥಿತರಿದ್ದರು.