Advertisement

ಬ್ಯಾಕ್‌ ಟು ಬ್ಯಾಕ್‌ ರಶ್ಮಿಕಾ

11:41 AM Dec 14, 2017 | Team Udayavani |

ರಶ್ಮಿಕಾ ಮಂದಣ್ಣಗೆ ಡಿಸೆಂಬರ್‌ ತಿಂಗಳು ಬಹಳ ಲಕ್ಕಿ ಎಂದನಿಸುತ್ತಿದೆ. ಏಕೆಂದರೆ, ಕಳೆದ ವರ್ಷ ಡಿಸೆಂಬರ್‌ನಲ್ಲಿ ರಶ್ಮಿಕಾ ಅಭಿನಯದ ಮೊದಲ ಚಿತ್ರ “ಕಿರಿಕ್‌ ಪಾರ್ಟಿ’ ಬಿಡುಗಡೆಯಾಗಿತ್ತು. ಈ ವರ್ಷದ ಡಿಸೆಂಬರ್‌ನಲ್ಲಿ ರಶ್ಮಿಕಾ ಅಭಿನಯದ ಎರಡು ಕನ್ನಡ ಚಿತ್ರಗಳು ಬ್ಯಾಕ್‌ ಟು ಬ್ಯಾಕ್‌ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.

Advertisement

ಹೌದು, ರಶ್ಮಿಕಾ ಮಂದಣ್ಣ ಅಭಿನಯದ ಎರಡು ಚಿತ್ರಗಳು ಈ ತಿಂಗಳು ಬಿಡುಗಡೆಯಾಗುತ್ತಿದೆ. “ಕಿರಿಕ್‌ ಪಾರ್ಟಿ’ ಯಶಸ್ಸಿನ ನಂತರ ರಶ್ಮಿಕಾ ಕನ್ನಡದಲ್ಲಿ ಎರಡು ಚಿತ್ರಗಳನ್ನು ಒಪ್ಪಿಕೊಂಡಿದ್ದರು. ಪುನೀತ್‌ ರಾಜಕುಮಾರ್‌ ಅಭಿನಯದ “ಅಂಜನಿಪುತ್ರ’ ಒಂದಾದರೆ, ಗಣೇಶ್‌ ಅಭಿನಯದ “ಚಮಕ್‌’ ಇನ್ನೊಂದು ಚಿತ್ರವಾಗಿತ್ತು. ಈಗ ಆ ಎರಡೂ ಚಿತ್ರಗಳು ಒಂದರ ಹಿಂದೊಂದು ಬಿಡುಗಡೆಯಾಗುತ್ತಿದೆ.

ಈಗಾಗಲೇ “ಚಮಕ್‌’ ಚಿತ್ರದ ಸೆನ್ಸಾರ್‌ ಆಗಿದ್ದು, ಚಿತ್ರಕ್ಕೆ “ಯು/ಎ’ ಪ್ರಮಾಣ ಪತ್ರ ಸಿಕ್ಕಿತ್ತು. ಈಗ ಪ್ರಮಾಣ ಪತ್ರ ಸಿಕ್ಕಿರುವುದರಿಂದ, ಚಿತ್ರವನ್ನು ಡಿಸೆಂಬರ್‌ 29ರಂದು ಬಿಡುಗಡೆ ಮಾಡುವುದಕ್ಕೆ ನಿರ್ದೇಶಕ ಸುನಿ ಮತ್ತು ನಿರ್ಮಾಪಕ ಚಂದ್ರಶೇಖರ್‌ ತೀರ್ಮಾನಿಸಿದ್ದಾರೆ. ಅದಕ್ಕೂ ಒಂದು ವಾರದ ಮುನ್ನ, ಅಂದರೆ ಡಿಸೆಂಬರ್‌ 22ರಂದು “ಅಂಜನಿಪುತ್ರ’ ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಈ ಮಧ್ಯೆ ರಶ್ಮಿಕಾ ತೆಲುಗಿನ ನಾಗಶೌರ್ಯ ಅಭಿನಯದ “ಚಲೋ’ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಚಿತ್ರದ ಟೀಸರ್‌ಗಳು ಇತ್ತೀಚೆಗಷ್ಟೇ ಬಿಡುಗಡೆಯಾಗಿವೆ. ಇನ್ನು ರಶ್ಮಿಕಾ, ಧ್ರುವ ಸರ್ಜಾ ಅಭಿನಯದ “ಪೊಗರು’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದು, ಸದ್ಯದಲ್ಲಿಯೇ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next