Advertisement

ಹಿಂದೆ –ಮುಂದೆ ನೋಡದೇ ರಸ್ತೆ ದಾಟುವ ಪುಟಾಣಿ ಮಕ್ಕಳು

11:36 PM Jan 29, 2020 | Sriram |

ತಲ್ಲೂರು: ಉಪ್ಪಿನಕುದ್ರು ಎನ್ನುವ ದ್ವೀಪದಲ್ಲಿರುವ ಸರಕಾರಿ ಮಾದರಿ ಹಿ.ಪ್ರಾ. ಶಾಲೆಗೆ 100 ವರ್ಷಗಳ ಇತಿಹಾಸವಿದೆ. ಹತ್ತಾರು ಮಂದಿ ಮಹನೀಯರು ಕಲಿತಂತಹ ವಿದ್ಯಾದೇಗುಲ ಇದು. ಆದರೆ ಇಲ್ಲಿನ ವಿದ್ಯಾರ್ಥಿಗಳಿಗೆ ಆಟವಾಡಲು ಮೈದಾನಕ್ಕೆ ಹೋಗಬೇಕಾದರೆ, ಮೂತ್ರ ಮಾಡಲು ಶೌಚಾಲಯಕ್ಕೆ ಹೋಗಬೇಕಾದರೆ ರಸ್ತೆ ದಾಟಿ ಹೋಗಬೇಕಾದ ಅನಿವಾರ್ಯತೆಯಿದೆ. ಇಲ್ಲಿ ಮುಂಜಾಗ್ರತಾ ಕ್ರಮವಾಗಿ ಮಕ್ಕಳು ರಸ್ತೆ ದಾಟಲು ಅನುಕೂಲವಾಗುವಂತೆ ರಸ್ತೆಗೆ ವೇಗ ತಡೆ ಅಳವಡಿಸಬೇಕು ಎನ್ನುವ ಬೇಡಿಕೆ ವ್ಯಕ್ತವಾಗಿದೆ.

Advertisement

ಉಪ್ಪಿನಕುದ್ರು ಗ್ರಾಮದಲ್ಲಿರುವ ಏಕೈಕ ಶಾಲೆ ಇದಾಗಿದ್ದು, ಇದರ ಪಕ್ಕದಲ್ಲೇ ಸರಕಾರಿ ಪ್ರೌಢಶಾಲೆಯೊಂದಿದೆ. ಅಲ್ಲಿನ ಮಕ್ಕಳು ಕೂಡ ಆಟವಾಡಲು ಇದೇ ಮೈದಾನವನ್ನು ಆಶ್ರಯಿಸಿದ್ದಾರೆ. ಆದರೆ ಆ ರಸ್ತೆಯಲ್ಲಿ ಎಲ್ಲೂ ಕೂಡ ಹಂಪ್‌, ಬ್ಯಾರಿಕೇಡ್‌ನ‌ಂತಹ ವೇಗ ನಿಯಂತ್ರಕಗಳಿಲ್ಲ. ಪುಟ್ಟ – ಪುಟ್ಟ ಮಕ್ಕಳು ಹಿಂದೆ – ಮುಂದೆ ನೋಡದೇ ರಸ್ತೆಯನ್ನು ದಾಟುತ್ತಾರೆ. ಆಗ ಏನಾದರೂ ಆದರೆ ಯಾರು ಹೊಣೆ ಎನ್ನುವುದು ಪೋಷಕರ ಪ್ರಶ್ನೆ.

1 ರಿಂದ 7 ನೇ ತರಗತಿಯವರೆಗೆ ಇರುವ ಈ ಶಾಲೆಯಲ್ಲಿ ಪ್ರಸ್ತುತ 125 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಉತ್ತಮ ಗುಣಮಟ್ಟದ ಶಾಲೆ ಎನ್ನುವ ಹಿರಿಮೆ ಕೂಡ ಈ ಶಾಲೆಗಿದೆ. 1918 ರಲ್ಲಿ ಆರಂಭವಾದ ಈ ಶಾಲೆಗೆ ಈಗ 101 ನೇ ವರ್ಷಾಚರಣೆ ಸಂಭ್ರಮದಲ್ಲಿದೆ. ಆದರೆ ಇತರ ಯಾವುದೇ ಖಾಸಗಿ ಅಥವಾ ಅನುದಾನಿತ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳು ಇಲ್ಲಿಲ್ಲ. ಉಪ್ಪಿನಕುದ್ರು, ಬೇಡರಕೊಟ್ಟಿಗೆ, ನಾಗಿಮನೆ, ಕೆಳಬೆಟ್ಟು, ಬಾಳೆಬೆಟ್ಟುವಿನ ಗ್ರಾಮಸ್ಥರಿಗೆ ಇರುವುದು ಇದೊಂದೇ ಶಾಲೆ.

ಹಂಪ್‌ ಹಾಕಲಿ
ನಮ್ಮ ಮಕ್ಕಳೆಲ್ಲ ಇದೇ ಶಾಲೆಗೆ ಹೋಗುತ್ತಿದ್ದಾರೆ. ಕಲಿಕೆಯ ಮಟ್ಟಿಗೆ ಯಾವುದೇ ದೂರಿಲ್ಲ. ಆದರೆ ಮಕ್ಕಳು ಆಟವಾಡಲು, ಶೌಚಾಲಯಕ್ಕೆ ಹೋಗಬೇಕಾದರೆ ರಸ್ತೆ ದಾಟಿ ಹೋಗಬೇಕಾದ ಅನಿವಾರ್ಯತೆಯಿದೆ. ಬೈಕ್‌, ದ್ವಿಚಕ್ರ ವಾಹನಗಳೆಲ್ಲ ವೇಗವಾಗಿ ಬರುತ್ತದೆ. ಇಲ್ಲಿ ವಾಹನ ನಿಧಾನವಾಗಿ ಚಲಿಸುವಂತೆ ಹಂಪ್‌ನಂತಹ ವೇಗ ತಡೆ ನಿಯಂತ್ರಕದ ಅಗತ್ಯವಿದೆ. ಈ ಬಗ್ಗೆ ಸಂಬಂಧಪಟ್ಟ ಸ್ಥಳೀಯ ಪಂಚಾಯತ್‌, ಶಾಲಾಡಳಿತ, ಅಧಿಕಾರಿಗಳು ಗಮನಹರಿಸಲಿ ಎನ್ನುವುದಾಗಿ ಪೋಷಕರಾದ ನರಸಿಂಹ ಮೊಗವೀರ ಉಪ್ಪಿನಕುದ್ರು ಒತ್ತಾಯಿಸಿದ್ದಾರೆ.

ಎರಡೂ ಶಾಲೆಗೆ ಒಂದೇ ಮೈದಾನ
ಉಪ್ಪಿನಕುದ್ರುವಿನ ಈ ಸರಕಾರಿ ಮಾದರಿ ಹಿ.ಪ್ರಾ. ಶಾಲೆ ಹಾಗೂ ಇಲ್ಲಿರುವ ಸರಕಾರಿ ಪ್ರೌಢಶಾಲೆಗೆ ಇರುವುದು ಇದೊಂದೇ ಆಟದ ಮೈದಾನ. ಇಲ್ಲಿನ ಪ್ರಾಥಮಿಕ ಶಾಲೆಯಲ್ಲಿ 100 ಕ್ಕೂ ಮಿಕ್ಕಿ ಮಕ್ಕಳಿದ್ದರೆ, ಪ್ರೌಢಶಾಲೆಯಲ್ಲಿ 65-70 ಮಕ್ಕಳು ಕಲಿಯುತ್ತಿದ್ದಾರೆ. ಒಟ್ಟಾರೆ ನೂರೈವತ್ತಕ್ಕೂ ಮಿಕ್ಕಿ ಮಕ್ಕಳು ಆಟವಾಡಲು ಇದೇ ಮೈದಾನವನ್ನು ಆಶ್ರಯಿಸಿದ್ದಾರೆ. ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಶೌಚಾಲಯವಿದ್ದರೂ, ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಶೌಚಾಲಯಕ್ಕೆ ಹೋಗಬೇಕಾದರೆ ರಸ್ತೆ ದಾಟಿ ಹೋಗಬೇಕು. ಶಾಲೆಯಲ್ಲಿ ಸರಕಾರಿ ಜಾಗದ ಕೊರತೆ ಇರುವುದರಿಂದ ರಸ್ತೆಯಾಚೆ ಮೈದಾನ ಹಾಗೂ ಶೌಚಾಲಯ ನಿರ್ಮಿಸಲಾಗಿದೆ.

Advertisement

ಪಂಚಾಯತ್‌ನಿಂದ ಮನವಿ
ಉಪ್ಪಿನಕುದ್ರುವಿನ ಶಾಲೆ ಮಕ್ಕಳು ರಸ್ತೆ ದಾಟಲು ಅನುಕೂಲವಾಗುವಂತೆ ಅಲ್ಲಿ ಹಂಪ್‌ ಅಥವಾ ಬ್ಯಾರಿಕೇಡ್‌ ಹಾಕಲು ತುಂಬಾ ಹಿಂದೆಯೇ ಅನೇಕ ಬಾರಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ತಲ್ಲೂರು ಗ್ರಾಮ ಪಂಚಾಯತ್‌ ವತಿಯಿಂದ ಮನವಿ ಸಲ್ಲಿಸಲಾಗಿತ್ತು. ಆದರೆ ಪೊಲೀಸ್‌ ಇಲಾಖೆ ಅನುಮತಿಯಿಲ್ಲದೆ, ರಸ್ತೆಗೆ ಹಂಪ್‌ ಹಾಕಲು ಆಗುವುದಿಲ್ಲ ಎಂದು ಹೇಳಿದ್ದರು. ಆ ಬಳಿಕ ಕಳೆದ ವರ್ಷ ಪಂಚಾಯತ್‌ನಿಂದ ಶಾಲಾ ವಠಾರ ನಿಧಾನವಾಗಿ ಚಲಿಸಿ ಎಂದು ಎರಡು ಕಡೆಯಿಂದಲೂ ಸೂಚನಾ ಫಲಕ ಹಾಕಲಾಗಿದೆ. ಮತ್ತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು.
– ಆನಂದ ಬಿಲ್ಲವ,
ಗ್ರಾಮ ಪಂಚಾಯತ್‌ ಅಧ್ಯಕ್ಷರು ತಲ್ಲೂರು

ಮನವಿ ಸಲ್ಲಿಸಲಾಗಿದೆ
ಈ ಬಗ್ಗೆ ಮಕ್ಕಳಿಗೆ ಸಮಸ್ಯೆ ಆಗುತ್ತಿರುವ ಕುರಿತಂತೆ ಅನೇಕ ಬಾರಿ ಪಂಚಾಯತ್‌ಗೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಇಲ್ಲಿ ಹಂಪ್‌ ಅಥವಾ ಬೇರೆ ಯಾವುದಾದರೂ ರಸ್ತೆ ಸುರಕ್ಷತಾ ಕ್ರಮಗಳ ಅಗತ್ಯವಿದೆ. ಮತ್ತೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು.
– ಅವನೀಶ್‌ ಹೊಳ್ಳ,
ಎಸ್‌ಡಿಎಂಸಿ ಅಧ್ಯಕ್ಷರು,ಉಪ್ಪಿನಕುದ್ರು ಶಾಲೆ

ಕೂಡಲೇ ಮುನ್ನೆಚ್ಚರಿಕೆ ಕ್ರಮ
ನನ್ನ ಗಮನಕ್ಕೆ ಈಗ ತಾನೇ ಬಂದಿದೆ. ಶಾಲೆ ಅಥವಾ ಪಂಚಾಯತ್‌ನಿಂದ ಈ ಬಗ್ಗೆ ನನಗೆ ಈ ಸಮಸ್ಯೆ ಕುರಿತ ಮನವಿ ಪತ್ರ ಸಲ್ಲಿಸಿದ ಕೂಡಲೇ ಆದ್ಯತೆ ಮೇರೆಗೆ ಗಮನಹರಿಸಲಾಗುವುದು. ಅಲ್ಲಿ ಮಕ್ಕಳ ಅನುಕೂಲಕ್ಕೆ ಏನೆಲ್ಲ ಮುಂಜಾಗ್ರತಾ ಕ್ರಮ ವಹಿಸಿಕೊಳ್ಳಿಬೇಕೋ ಅದನ್ನು ತತ್‌ಕ್ಷಣ ಮಾಡಲಾಗುವುದು.
– ಹರಿರಾಂ ಶಂಕರ್‌,ಕುಂದಾಪುರ ಎಎಸ್‌ಪಿ

ಬೇಡಿಕೆಗಳು ಏನೆಲ್ಲ?

– ಮಕ್ಕಳು ರಸ್ತೆ ದಾಟುವ ವೇಳೆ ವಾಹನಗಳು ನಿಧಾನವಾಗಿ ಚಲಿಸುವಂತೆ ವೇಗ ನಿಯಂತ್ರಕಗಳಾದ ಹಂಪ್‌ ಅಥವಾ ಬ್ಯಾರಿಕೇಡ್‌ ಬೇಕು.
-ಮಕ್ಕಳು ರಸ್ತೆ ದಾಟಲು ಝೀಬ್ರಾ ಕ್ರಾಸ್‌ನ ತುರ್ತಾಗಿ ಬೇಕಾಗಿದೆ.
-ರಸ್ತೆಯ ಈಚೆ ಬದಿಯಲ್ಲಿ ಶೌಚಾಲಯ ನಿರ್ಮಾಣವಾಗಬೇಕಿದೆ

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next