Advertisement

ಬ್ರಹ್ಮಚಾರಿಯ ಕಾಮಿಡಿ ಪ್ಯಾಕೇಜ್‌

09:39 AM Nov 09, 2019 | mahesh |

ಕೆಲವೊಮ್ಮೆ ಸಿನಿಮಾದ ಟ್ರೇಲರ್‌ ಗಮನಸೆಳೆದಷ್ಟು ಇಡೀ ಸಿನಿಮಾ ಗಮನ ಸೆಳೆಯೋದು ಕಷ್ಟ ಎನ್ನುವ ಮಾತಿದೆ. ಟ್ರೇಲರ್‌ ನೋಡಿದವರಿಗೆ ಸಿನಿಮಾನೂ ಹೀಗೇ ಇರುತ್ತೆ ಎಂಬ ಬಲವಾದ ನಂಬಿಕೆ ಕೂಡ ಸಹಜ. ಆದರೆ, ಸಿನಿಮಾ ಬಿಡುಗಡೆ ಬಳಿಕ ಅದರ “ತಾಕತ್ತು’ ಅರ್ಥವಾಗುತ್ತೆ. ನೀನಾಸಂ ಸತೀಶ್‌ ಅಭಿನಯದ “ಬ್ರಹ್ಮಚಾರಿ’ ಚಿತ್ರದ ಟ್ರೇಲರ್‌ ನೋಡಿದವರು ಮೆಚ್ಚಿದ್ದಾರೆ. ಪಡ್ಡೆಗಳಿಗಂತೂ ಹೇಳಿ ಮಾಡಿಸಿದ “ಪಂಚ್‌’ ಜೊತೆಗಿನ ಹಾಸ್ಯಮಯ ಟ್ರೇಲರ್‌ ಖುಷಿ ಕೊಡುವುದರಲ್ಲಿ ಅನುಮಾನವಿಲ್ಲ. ಹಾಗಂತ ಆ ಟ್ರೇಲರ್‌ ನೋಡಿದರೆ ಫ್ಯಾಮಿಲಿ ಸಮೇತ ಸಿನಿಮಾ ನೋಡಬಹುದಾ? ಹೀಗೊಂದು ಪ್ರಶ್ನೆ ಎದುರಾಗುತ್ತೆ. ಅದಕ್ಕೆ ಇಡೀ ತಂಡ ಒಮ್ಮತದಿಂದಲೇ, “ಇದೊಂದು ಪಕ್ಕಾ ಮನರಂಜನೆಯ ಸಿನಿಮಾ. ಜೊತೆಗೊಂದು ಸಂದೇಶವೂ ಇದೆ. ಇಡೀ ಚಿತ್ರ ಹಾಸ್ಯಮಯವಾಗಿದ್ದರೂ, ಎಲ್ಲೂ ಅಸಹ್ಯ ಎನಿಸುವ ದೃಶ್ಯಗಳಿಲ್ಲ. ಅಶ್ಲೀಲ ಪದಗಳೂ ಇಲ್ಲ’ ಎಂಬ ಗ್ಯಾರಂಟಿ ಕೊಡುತ್ತದೆ. ಆದರೂ, ಟ್ರೇಲರ್‌ ನೋಡಿದವರಿಗೆ ಕುಟುಂಬ ಸಮೇತ ಹೋಗಬಹುದಾ ಎಂಬ ಸಣ್ಣ ಅನುಮಾನ ಕಾಡಿದರೂ, ಚಿತ್ರತಂಡ ಕೊಡುವ ಭವ್ಯ ಭರವಸೆಯಿಂದ “ಬ್ರಹ್ಮಚಾರಿ’ ಮನರಂಜನೆಯ ಪಾಕ ಅನ್ನೋದು ಪಕ್ಕಾ.

Advertisement

ನಿರ್ದೇಶಕ ಚಂದ್ರಮೋಹನ್‌ ಅವರು ಈ ಹಿಂದೆ ಮಾಡಿದ ಎರಡು ಸಿನಿಮಾಗಳಲ್ಲೂ ಹಾಸ್ಯ ಮೇಳೈಸಿತ್ತು. “ಬ್ರಹ್ಮಚಾರಿ’ಯಲ್ಲೂ ಅದು ಮುಂದುವರೆದಿದೆ. ಅವರು ಹೇಳುವಂತೆ, “ಹಿಂದೆ ನಾನು ಎರಡು ಸಿನಿಮಾಗಳಲ್ಲೂ ಸಾಕಷ್ಟು ಕಷ್ಟಪಟ್ಟಿದ್ದೆ. ಇಲ್ಲಿ ಅಂತಹ ಕಷ್ಟವಿಲ್ಲ. ಎಲ್ಲವೂ ಸುಲಭವಾಗಿಯೇ ನಡೆದಿದೆ. ಅದಕ್ಕೆ ಕಾರಣ ನಿರ್ಮಾಪಕರು. ಅವರ ಕನಸು ನನಸು ಮಾಡಿದ್ದೇನೆ ಎಂಬ ನಂಬಿಕೆ ನನಗಿದೆ. ಈಗಾಗಲೇ “ತಡ್ಕ ತಡ್ಕ ಹಿಡ್ಕ ಹಿಡ್ಕ’ ಹಾಡು ಹಿಟ್‌ ಆಗಿದೆ. ಟ್ರೇಲರ್‌ಗೂ ಮೆಚ್ಚುಗೆ ಬರುತ್ತಿದೆ. ಸಿನಿಮಾ ಎಲ್ಲಾ ವರ್ಗಕ್ಕೂ ಇಷ್ಟವಾಗುತ್ತೆ. ಪಕ್ಕಾ ಮನರಂಜನೆ ಚಿತ್ರವಿದು’ ಎಂದರು ಚಂದ್ರಮೋಹನ್‌.

ನಟ ನೀನಾಸಂ ಸತೀಶ್‌ ಅವರಿಗೆ “ಬ್ರಹ್ಮಚಾರಿ’ ಮೇಲೆ ನಂಬಿಕೆ ಇದೆ. ನಾಯಕನಲ್ಲಿರುವ ಒಂದು ಸಮಸ್ಯೆ ಚಿತ್ರದ ಹೈಲೈಟ್‌. ಅದನ್ನು ಹಾಸ್ಯಮಯವಾಗಿ ಹೇಳಲಾಗಿದೆ. ಹಿಂದೆ “ಅನುಭವ’, “ಅನಂತನ ಅವಾಂತರ’ ಚಿತ್ರಗಳನ್ನೂ ಸಹ ಜನ ಒಪ್ಪಿದ್ದರು. ಫ್ಯಾಮಿಲಿ ಕೂಡ ಮೆಚ್ಚಿತ್ತು. ಇಲ್ಲಿ ನಾಯಕನ ವೈಯಕ್ತಿಕ ಸಮಸ್ಯೆ ಮೇಲೆ ಸಿನಿಮಾ ಸಾಗುತ್ತೆ. ಅದನ್ನು ಹಾಸ್ಯ ರೂಪದಲ್ಲಿ ಹೇಳಲಾಗಿದೆ. ಇದೊಂದು ಪಕ್ಕಾ ಮನರಂಜನಾತ್ಮಕ ಚಿತ್ರ’ ಅಂದರು ಸತೀಶ್‌.

ನಟ ಅಶೋಕ್‌, ಇಲ್ಲಿ ಸಾಕಷ್ಟು ಕಲಿತುಕೊಂಡ ಬಗ್ಗೆ ಹೇಳಿಕೊಂಡರು. ಅದಿತಿ ಅವರಿಗೆ ಚಿತ್ರದ ಶೀರ್ಷಿಕೆ ಕೇಳಿದಾಗಲೇ ಒಂದು ಮಜವಾದ ಸಿನಿಮಾ ಎನಿಸಿತಂತೆ. ಅಷ್ಟೇ ಮಜ ಚಿತ್ರದಲ್ಲೂ ಇರುವುದರಿಂದ ಖುಷಿ ಇದೆಯಂತೆ. ಅವರಿಗೆ ಇದು ಮೊದಲ ಕಾಮಿಡಿ ಜಾನರ್‌ ಸಿನಿಮಾವಂತೆ.

ನಿರ್ಮಾಪಕ ಉದಯ್‌ ಕೆ.ಮೆಹ್ತಾ ಅವರಿಗೆ ಸಿನಿಮಾ ಗೆಲ್ಲುವ ಭರವಸೆ ಇದೆ. ಕಾರಣ, ಈಗಾಗಲೇ ಹಾಡು ಹಿಟ್‌ ಆಗಿದೆ. ಟ್ರೇಲರ್‌ಗೂ ಉತ್ತಮ ಪ್ರತಿಕ್ರಿಯೆ ಬಂದಿದೆ. ಸಿನಿಮಾಗೂ ಮೆಚ್ಚುಗೆ ಸಿಗುತ್ತೆ ಎಂಬ ನಂಬಿಕೆ ಅವರದು. ಇಲ್ಲಿ ಒಳ್ಳೆಯ ಸಂದೇಶವಿದೆ. ಹಾಸ್ಯವೂ ಇದೆ. ಎಲ್ಲಾ ವರ್ಗ ನೋಡ­ಬಹುದು ಎನ್ನುತ್ತಾರೆ ಉದಯ್‌ ಮೆಹ್ತಾ.
ಚೇತನ್‌ ಕುಮಾರ್‌ “ತಡ್ಕ ತಡ್ಕ ಹಿಡ್ಕ ಹಿಡ್ಕ’ ಹಾಡು ಬರೆದ ಬಗ್ಗೆ ಹೇಳಿಕೊಂಡರು. ಸಂಗೀತ ನಿರ್ದೇಶಕ ಧರ್ಮವಿಶ್‌, ಶಿವರಾಜ್‌ ಕೆ.ಆರ್‌.ಪೇಟೆ, ರಿಷ್‌ಭ್‌ ಶೆಟ್ಟಿ ಇತರರು “ಬ್ರಹ್ಮಚಾರಿ’ಯ ಗುಣಗಾನ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next