“ಬ್ಯಾಚುಲರ್ ಪಾರ್ಟಿ’ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸೌಂಡ್ ಮಾಡುತ್ತಿರುವ ಸಿನಿಮಾವಿದು. ಪಕ್ಕಾ ಯೂತ್‌ಫುಲ್ ಕಂಟೆಂಟ್‌ನೊಂದಿಗೆ ತಯಾರಾಗಿರುವ ಈ ಚಿತ್ರ ಜ.26ರಂದು ತೆರೆಕಾಣುತ್ತಿದೆ. ಸಿನಿಮಾದ ಫಸ್ಟ್‌ಲುಕ್ ಟೀಸರ್‌ನಲ್ಲೇ ಮೋಡಿ ಮಾಡಿದ್ದ ಚಿತ್ರ ಈಗ ಟ್ರೇಲರ್ ಬಿಡುಗಡೆ ಮಾಡಿದೆ. ಟ್ರೇಲರ್ ನೋಡಿ ಮೇಲಂತೂ ಸಿನಿಮಾದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ರೆಗ್ಯುಲರ್ ಶೈಲಿ ಬಿಟ್ಟು ಮೂಡಿಬಂದಿರುವ ಟ್ರೇಲರ್ ನೋಡಿದವರಿಗೆ ಈ ಸಿನಿಮಾದಲ್ಲಿ ಮನರಂಜನೆಗೇನೂ ಮೋಸವಿಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ.
ಪರಂವಃ ಸ್ಟುಡಿಯೋಸ್ ಲಾಂಛನದಲ್ಲಿ ಜಿ.ಎಸ್.ಗುಪ್ತ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಾಣದಲ್ಲಿ ತಯಾರಾಗಿರುವ ಈ ಚಿತ್ರವನ್ನು ಅಭಿಜಿತ್ ಮಹೇಶ್ ನಿರ್ದೇಶನ ಮಾಡದ್ದಾರೆ. ಚಿತ್ರದಲ್ಲಿ ದಿಗಂತ್, ಲೂಸ್ ಮಾದ ಯೋಗಿ, ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ನಿರ್ಮಾಪಕ ರಕ್ಷಿತ್ ಶೆಟ್ಟಿ ಕೂಡಾ ಈ ಸಿನಿಮಾ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಅವರು, “ನಾನು ಕಿರುಚಿತ್ರ ಮಾಡುತ್ತಿದ್ದ ಸಮಯದಲ್ಲಿ ನನಗೆ ಅಭಿಜಿತ್ ಮಹೇಶ್ ಪರಿಚಯವಾದರು. ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ ಚಿತ್ರಗಳಲ್ಲಿ ಒನ್‌ಲೈನ್ ಪಂಚಿಂಗ್ ಡೈಲಾಗ್ ಗಳು ಅಭಿಜಿತ್ ಅವರ ಕೊಡುಗೆ. ಅಂತಹ ಅದ್ಭುತ ಪ್ರತಿಭೆ ಅವರು. ಆಗಿನಿಂದಲೂ ನಾನು ಅಭಿಜಿತ್ ಅವರಿಗೆ ನಿರ್ದೇಶನ ಮಾಡಲು ಹೇಳುತ್ತಿದ್ದೆ. ಈಗ ಈ ಚಿತ್ರವನ್ನು
ನಿರ್ದೇಶಿಸಿದ್ದಾರೆ. ಇನ್ನೂ ದಿಗಂತ್ ಹಾಗೂ ಯೋಗಿ ಇಬ್ಬರು ಅದ್ಭುತ ಕಲಾವಿದರು. ನಾನು ಅವರಿಬ್ಬರ ಚಿತ್ರಗಳನ್ನು ನೋಡಿ ಬಹಳ ಇಷ್ಟಪಟ್ಟಿದ್ದೇನೆ. ಈ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ಚಿತ್ರ ಇದೇ ಜನವರಿ 26 ಬಿಡುಗಡೆಯಾಗುತ್ತಿದೆ’ ಎಂದರು.
ಲಾಕ್ ಡೌನ್ ಸಮಯದಲ್ಲಿ ಹುಟ್ಟಿದ ಕಥೆ ಸಿನಿಮಾವಾದ ಖುಷಿ ಅಭಿಜಿತ್ ಮಹೇಶ್ ಅವರದು. “ಇದೊಂದು ಪಕ್ಕಾ ಎಂಟರ್ ಟೈನರ್ ಸಿನಿಮಾ. ಪ್ರೇಕ್ಷಕರು ಕೊಡುವ ದುಡ್ಡಿಗೆ ಖಂಡಿತ ಮೋಸ ಆಗುವುದಿಲ್ಲ. ನಿರ್ದೇಶನ ಮಾಡಲು ಅವಕಾಶ ನೀಡಿದ ರಕ್ಷಿತ್ ಶೆಟ್ಟಿ ಅವರಿಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದ’ ಎಂದಷ್ಟೇ ಹೇಳುತ್ತಾರೆ.
“ನನ್ನ ಪಾತ್ರ ರಿಷಭ್ ಶೆಟ್ಟಿ ಅವರು ಮಾಡಬೇಕಿತ್ತು. ಅವರು ಕಾಂತಾರದಲ್ಲಿ ಬಿಝಿಯಾದ ಕಾರಣ ನಾನು ಈ ಚಿತ್ರದಲ್ಲಿ ನಟಿಸಿದ್ದೇನೆ. ಪಾತ್ರ ತುಂಬಾ ಚೆನ್ನಾಗಿದೆ. ನಾನು ಹಾಗೂ ದಿಗಂತ್ ಹದಿನೈದು ವರ್ಷಗಳ ಸ್ನೇಹಿತರು. ಆದರೆ ಒಂದು ಚಿತ್ರದಲ್ಲೂ ಒಟ್ಟಿಗೆ ನಟಿಸಿರಲಿಲ್ಲ. ಈ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದ್ದೇವೆ’ ಎನ್ನುವುದು ಯೋಗಿ ಮಾತು.
ದಿಗಂತ್ ಕೂಡಾ ಈಗ ಪಾರ್ಟಿ ಮೂಡ್‌ನಲ್ಲಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ದಿಗಂತ್, “ಪರಂವಃ ಸ್ಟುಡಿಯೋಸ್‌ನಲ್ಲಿ ಇದು ನನ್ನ ಎರಡನೇ ಚಿತ್ರ. ಯೋಗಿ ಹಾಗೂ ನಾನು ಒಟ್ಟಿಗೆ ನಟಿಸಿರುವ ಮೊದಲ ಚಿತ್ರ. ಅಭಿಜಿತ್ ಮಹೇಶ್ ಅವರ ನಿರ್ದೇಶನದಲ್ಲಿ ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ’ ಎಂದರು.
ನಟ ಅಚ್ಯುತ್ ಕುಮಾರ್ ಕೂಡಾ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಚಿತ್ರಕ್ಕೆ ಥೈಲ್ಯಾಂಡ್, ಬ್ಯಾಂಕಾಕ್‌ನಲ್ಲೂ ಹೆಚ್ಚಿನ ಚಿತ್ರೀಕರಣ ಮಾಡಲಾಗಿದೆ.
ರವಿಪ್ರಕಾಶ್ ರೈ